ಕಾಂಗ್ರೆಸ್‌ನಲ್ಲಿ ತಂತ್ರಗಾರಿಕೆ ಇನ್ಮುಂದೆ ನಡೆಯಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಬರುವ ವಿಚಾರವಾಗಿ ಕಾಂಗ್ರೆಸ್ ಮುಖಂಡರನ್ನು ಬಿಟ್ಟು, ಗುಂಪುಗಾರಿಕೆ ಮಾಡಿ ಸಭೆಗಳನ್ನು ನಡೆಸುತ್ತಿರುವ ಎಂಎಲ್ಸಿ ಅನಿಲ್‌ಕುಮಾರ್ ನಿಮ್ಮ ಪಿತೂರಿ, ತಂತ್ರಗಾರಿಕೆಗಳು ಇನ್ಮುಂದೆ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಸಿದರು.
ಕೋಲಾರ (ಅ.21): ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಬರುವ ವಿಚಾರವಾಗಿ ಕಾಂಗ್ರೆಸ್ ಮುಖಂಡರನ್ನು ಬಿಟ್ಟು, ಗುಂಪುಗಾರಿಕೆ ಮಾಡಿ ಸಭೆಗಳನ್ನು ನಡೆಸುತ್ತಿರುವ ಎಂಎಲ್ಸಿ ಅನಿಲ್‌ಕುಮಾರ್ ನಿಮ್ಮ ಪಿತೂರಿ, ತಂತ್ರಗಾರಿಕೆಗಳು ಇನ್ಮುಂದೆ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ನಗರ ಬ್ಲಾಕ್ ಕಾಂಗ್ರೆಸ್ (Congress) ಅಧ್ಯಕ್ಷ ಎ.ಪ್ರಸಾದ್ ಬಾಬು ಮಾತನಾಡಿ, ಸಿದ್ದರಾಮಯ್ಯ (Siddaramaiah) ಬರುವುದಾದರೆ ಸ್ವಾಗತಾರ್ಹ ಎಂದು ಕೆ.ಎಚ್.ಮುನಿಯಪ್ಪ ಈಗಾಗಲೇ ಹೇಳಿದ್ದಾರೆ. ವಿಚಾರವೇ ಇನ್ನೂ ಅಂತಿಮವಾಗಿಲ್ಲ. ಹೀಗಿರುವಾಗ ಅನಿಲ್ ಕುಮಾರ್ ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಾರೆ, ಎಲ್ಲರೂ ಬೆಂಬಲಿಸಬೇಕು ಎಂದು ಶಾಸಕರ ಮನೆಯ ಆವರಣದಲ್ಲಿ ಸಭೆಯಲ್ಲಿ ಹೇಳುತ್ತೀರಿ. ಸಿದ್ದರಾಮಯ್ಯ ಕೋಲಾರಕ್ಕೆ ಬಾರದೆ ಇದ್ದರೆ ಕೆ.ಶ್ರೀನಿವಾಸಗೌಡರೇ ಅಭ್ಯರ್ಥಿ ಎಂದು ಮನೆಯ ಒಳಗೆ ಹೇಳುತ್ತೀರಿ. ನಮ್ಮನ್ನು ಬಿಟ್ಟು ನಿಮ್ಮಪಾಡಿಗೆ ಸಭೆಗಳನ್ನು ನಡೆಸುತ್ತೀರಾ. ಇನ್ಮುಂದೆ ನಿಮ್ಮ ಪಿತೂರಿ, ತಂತ್ರಗಾರಿಕೆ ನಡೆಯಲ್ಲ. ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಿದ್ದೀರಿ ಅಂತ ಗೊತ್ತಿದೆ. ನೀವು ಗೆದ್ದಿರುವುದೂ ತಂತ್ರಗಾರಿಕೆಯಿಂದ ಅಷ್ಟೇ ಎಂದು ಆಕ್ರೋಶ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ರಾಮಯ್ಯ, ನಾಗರಾಜ್, ಇಕ್ಬಾಲ್ ಇದ್ದರು.
ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತ
ಕೋಲಾರ : ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೋಲಾರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ. 2023 ಸಾಲಿನಲ್ಲಿ ಚುನಾವಣೆಯಲ್ಲಿ ಕೋಲಾರದಿಂದ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾಗಿ, ರಾಜ್ಯದ ಮುಖ್ಯ ಮಂತ್ರಿಯಾಗಿ ಆಡಳಿತ ನಿರ್ವಹಿಸುವಂತಾಗಲಿ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆಶಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ ತಮ್ಮ ಬೆಂಬಲಿಗರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಭೆಯಲ್ಲಿ ಕ್ಷೇತ್ರದ ಹಿರಿಯ ಮತ್ತು ಕಿರಿಯ ಎಲ್ಲಾ ಮುಖಂಡರು ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸಿದಲ್ಲಿ ಪ್ರಾಮಾಣಿಕವಾಗಿ ಸಹಕಾರ ನೀಡಿ ಚುನಾವಣೆಯಲ್ಲಿ ಗೆಲ್ಲಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಸಿಎಂ ಆಗ್ತಾರೆ
ದೇಶಕ್ಕೆ ಸ್ವಾತಂತ್ರ್ಯ ಪಡೆದ ನಂತರ ನಮ್ಮ ರಾಜ್ಯಕ್ಕೆ ಪ್ರಥಮ ಮುಖ್ಯ ಮಂತ್ರಿ ಕೆ.ಸಿ.ಚಂಗಲರಾಯ ರೆಡ್ಡಿರನ್ನು ಕೊಟ್ಟಿದ್ದು ನಮ್ಮ ಕೋಲಾರ ಜಿಲ್ಲೆಯಿಂದಲೇ. ಈಗ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದರಿಂದ ಅವರನ್ನು ಶಾಸಕರನ್ನಾಗಿ ಬಹುಮತದಿಂದ ಆಯ್ಕೆ ಮಾಡಿದಲ್ಲಿ ಮುಂದೆ ಅವರು ನಮ್ಮ ರಾಜ್ಯದ ಮುಖ್ಯ ಮಂತ್ರಿಯಾಗಲಿದ್ದು, ಗುವಂತ ಅವಕಾಶ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಾನು ಸಹ ನಾಲ್ಕು ಭಾರಿ ಶಾಸಕನಾಗಿದ್ದೆ. ಒಂದು ಬಾರಿ ಸಚಿವನಾಗಿದ್ದು, ಎರಡು ಬಾರಿ ಪರಭಾವ ಗೊಂಡಿದ್ದು ಕ್ಷೇತ್ರದ ಬಗ್ಗೆ ಅರಿತಿರುವೆ. ಸಿದ್ದರಾಮಯ್ಯರಿಗೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಪಕ್ಷವಲ್ಲದೆ ಇತರೆ ಪಕ್ಷಗಳ ಮುಖಂಡರೂ ಸ್ವಯಂ ಪ್ರೇರಿತರಾಗಿ ಮತ್ತು ಪಕ್ಷಾತೀತವಾಗಿ ಬೆಂಬಲ ನೀಡುವ ಸಾಧ್ಯತೆಗಳಿವೆ. ಇದರಿಂದ ಕೋಲಾರ ಕ್ಷೇತ್ರದಲ್ಲಿ ರಾಜಕೀಯ ಧೃವೀಕರಣ ನಿರ್ಮಾಣವಾಗಲಿದೆ ಎಂದು ಹೇಳಿದರು.
ಹಾಲಿ, ಮಾಜಿ ಶಾಸಕರ ಬೆಂಬಲ
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದರಲ್ಲಿ ಎರಡನೇ ಮಾತಿಲ್ಲ. ಈ ಸಂಬಂಧವಾಗಿ ಈಗಾಗಲೇ ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ಚಿಂತಾಮಣಿಯ ಡಾ.ಸುಧಾಕರ್, ಎಸ್.ಎನ್. ನಾರಾಯಣಸ್ವಾಮಿ, ನಂಜೇಗೌಡ, ಕೊತ್ತೂರು ಮಂಜುನಾಥ್, ರೂಪಕಲಾ ಶಶಿಧರ್ ಸೇರಿದಂತೆ ಎಲ್ಲಾ ಶಾಸಕರ ಮತ್ತು ಮಾಜಿ ಶಾಸಕರು ಸಭೆ ಸೇರಿ ಚರ್ಚಿಸಿ ಅಂತಿಮ ತೀರ್ಮಾನ ಮಾಡಿದ್ದಾರೆ ಎಂದರು.
ಚುನಾವಣೆಗೆ ಇನ್ನು ಕೇವಲ 5 ತಿಂಗಳು ಮಾತ್ರ ಬಾಕಿ ಇದ್ದು, ಈಗಿನಿಂದಲೇ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಅಗತ್ಯ ಸಿದ್ದತೆ ಮಾಡಬೇಕಾಗಿದೆ. ಮುಂದಿನ ವಾರದಿಂದ ಕೋಲಾರ ಕ್ಷೇತ್ರದಲ್ಲಿ ಹೋಬಳಿವಾರು ಸಭೆ ಆಯೋಜಿಸಲಾಗುವುದು, ನಂತರದಲ್ಲಿ ಪಂಚಾಯಿತಿ ಮಟ್ಟದಲ್ಲಿ ಹಾಗೂ ಬೂತುವಾರು ಸಮಿತಿ ರಚಿಸಲಾಗುವುದು ಎಂದು ವಿವರಿಸಿದರು.
ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವೂ ಇಲ್ಲ, ಕೋಲಾಹಲವೂ ಇಲ್ಲ, ಎಲ್ಲಾ ಆಕಾಂಕ್ಷಿಗಳ ಚರ್ಚೆಗಳಿಗೆ ಅಂತಿಮ ತೆರೆ ಎಳೆಯಲಾಗಿದೆ. ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಸಿದ್ದರಾಮಯ್ಯನವರೇ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಎರಡನೇ ಪ್ರಾಶಸ್ತ ಎಂಬುವುದು ಇಲ್ಲ. ಮುಂದಿನ ತಿಂಗಳಿಂದಲೇ ಪ್ರಚಾರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು, ಚುನಾವಣೆ ಕುರಿತು ಶೀಘ್ರದಲ್ಲೇ ಗೆಜೆಟ್ ನೋಟಿಫಿಕೇಷನ್ ಪ್ರಕಟವಾಗುವ ಸಾಧ್ಯತೆ ಇದೆ ಎಂದರು.
ಬೆಂಗಳೂರು ಕೋಲಾರಕ್ಕೆ ಸಮೀಪ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದ ಕಡೆ ಗಮನಹರಿಸಲು ಮತ್ತು ಬಂದು ಹೋಗಲು ಅನುಕೊಲಕರವಾಗಿರುವುದರಿಂದ ಕೋಲಾರ ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಸ್ಪರ್ಧೆಗೆ ಜಿಲ್ಲೆಯ ಕಾಂಗ್ರೆಸ್ ಒತ್ತಾಯ ಇತ್ತು. ಅಹಿಂದ ವರ್ಗಗಳ ಒತ್ತಡವು ಇತ್ತು. ಕೋಲಾರವು ಸಿದ್ದರಾಮಯ್ಯರಿಗೆ ಹೊಸದೇನು ಅಲ್ಲ. ಈ ಹಿಂದೆ ಕೋಲಾರದಿಂದಲೇ ಅಹಿಂದ ಹೋರಾಟ ಪ್ರಾರಂಭಿಸಿದ್ದರು. ಜಾಲಪ್ಪ ಶಿಕ್ಷಣ ಸಂಸ್ಥೆಯಲ್ಲಿ ಸಿದ್ದರಾಮಯ್ಯ ನಿರ್ದೇಶಕರಾಗಿದ್ದಾರೆಂದು ನೆನಪಿಸಿದರು.
ಸಿದ್ದರಾಮಯ್ಯ ಕೋಲಾರದಿಂದ ಆಯ್ಕೆಯಾದಲ್ಲಿ ಎಲ್ಲ ಸೌಲಭ್ಯಗಳು ಕೋಲಾರಕ್ಕೆ ಬರಲಿದೆ ಎಂಬುವುದರಲ್ಲಿ ಎರಡನೇ ಮಾತಿಲ್ಲ. ರಾಜಕೀಯ ಬದಿಗಿಟ್ಟು ಕೋಲಾರದ ಅಭಿವೃದ್ಧಿ ದೆಸೆಯಲ್ಲಾದರೂ ಸಿದ್ದರಾಮಯ್ಯರನ್ನು ನಾವು ಬೆಂಬಲಿಸಿ ಆಯ್ಕೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.