Asianet Suvarna News Asianet Suvarna News

ಕಾಂಗ್ರೆಸ್ ಮುಖಂಡರೋರ್ವರು ಚುನಾವಣಾ ಸಮಯದಲ್ಲೇ ಪಕ್ಷ ಬಿಟ್ಟು ಹೋಗಿರುವ ವದಂತಿ

ನಾನು ಮತ್ತು ನನ್ನ ಅಭಿಮಾನಿಗಳು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರುತ್ತಿದ್ದಾರೆಂದು ಕೆಲ ಪಟ್ಟಭದ್ರರು ತಾಲೂಕಿನಾದ್ಯಂತ ವದಂತಿ ಹರಡುತ್ತಿದ್ದು, ನಾನು ಪಕ್ಷ ಬಿಟ್ಟು ಹೋಗುವ ಬಗ್ಗೆ ಎಲ್ಲಿಯೂ ಚರ್ಚೆಯೇ ಆಗಿಲ್ಲ. ಸುಳ್ಳು ಮಾಹಿತಿ ನಂಬಬೇಡಿ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ಸ್ಪಷ್ಟನೆ ನೀಡಿದರು.

There is a rumor that a Congress leader has left the party during the elections snr
Author
First Published Mar 26, 2024, 10:08 AM IST

  ತಿಪಟೂರು :  ನಾನು ಮತ್ತು ನನ್ನ ಅಭಿಮಾನಿಗಳು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರುತ್ತಿದ್ದಾರೆಂದು ಕೆಲ ಪಟ್ಟಭದ್ರರು ತಾಲೂಕಿನಾದ್ಯಂತ ವದಂತಿ ಹರಡುತ್ತಿದ್ದು, ನಾನು ಪಕ್ಷ ಬಿಟ್ಟು ಹೋಗುವ ಬಗ್ಗೆ ಎಲ್ಲಿಯೂ ಚರ್ಚೆಯೇ ಆಗಿಲ್ಲ. ಸುಳ್ಳು ಮಾಹಿತಿ ನಂಬಬೇಡಿ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಲೋಕೇಶ್ವರ ಗುಂಪು ಬಿಜೆಪಿಗೆ ಹೋಗುತ್ತಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಹಿಂದೂಸೇನೆ, ಶ್ರೀರಾಮ ಸೇನೆ, ಬಜರಂಗ ದಳದ ಮೂಲ ಬಿಜೆಪಿ ಕಾರ್ಯಕರ್ತರು ತಾಲೂಕಿನ ಮುಂದಾಳತ್ವ ಇಲ್ಲ ಎಂದು ಶಿವಮೊಗ್ಗದಲ್ಲಿ ನಡೆದ ಮೋದಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ವಿಜಯೇಂದ್ರರನ್ನು ಭೇಟಿ ಮಾಡಿದ್ದಾರೆ. ಇದಕ್ಕೂ ನನಗೂ ಯಾವ ಸಂಬಂಧವಿಲ್ಲ. ಕೆಲವರು ಇದನ್ನೇ ಅಪಪ್ರಚಾರ ಮಾಡಿ ಸುಳ್ಳು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಟ್ಟಾಳುಗಳಾಗಿ ಪಕ್ಷದಲ್ಲಿಯೇ ಇರುತ್ತೇವೆ. ನಾನು ಕಳೆದ ವಾರ ಕಾರ್ಯಕರ್ತರ ಸಭೆ ಕರೆದಿದ್ದು ನಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸಲು ಬಿಟ್ಟರೆ ಪಕ್ಷ ಬಿಡುವುದಕ್ಕೆ ಅಲ್ಲ ಎಂದರು.

ಸ್ಥಾನಮಾನ ನೀಡಿ :

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂಲೆ ಗುಂಪಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಿ, ಹೈಕಮಾಂಡ್ ತೀರ್ಮಾನಿಸಿದ ಕೆ. ಷಡಕ್ಷರಿಯವರನ್ನು ವಿಜೇತರನ್ನಾಗಿ ಮಾಡಿದೆವು. ಆದರೆ ನಂತರ ಬೆಳವಣಿಗೆಗಳು ತಮ್ಮ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು, ಈ ಹಿನ್ನಲೆ ರಾಜ್ಯ, ಜಿಲ್ಲಾ ಮಟ್ಟದ ಮುಖಂಡರುಗಳಿಗೆ ಈ ಬಗ್ಗೆ ಮನವಿ ಕೊಟ್ಟು ನಮ್ಮ ಕಾರ್ಯಕರ್ತರನ್ನು ಗುರ್ತಿಸಿ ನಾಮನಿರ್ದೇಶನ ಮಾಡುವಂತೆ ಮನವಿ ಮಾಡಿದೆವು. ರಾಜ್ಯ ಅಥವಾ ಜಿಲ್ಲಾ ಮುಖಂಡರು ಚಕಾರವೆತ್ತಲಿಲ್ಲ. ನಾನು ನಮ್ಮ ಕಾರ್ಯಕರ್ತರನ್ನು ಸಮಧಾನಪಡಿಸಲು ಸಭೆ ಕರೆದು ರಾಜ್ಯ ಮುಖಂಡರು ಮಧ್ಯ ಪ್ರವೇಶಿಸುವಂತೆ ಒತ್ತಾಯ ಮಾಡಿದ್ದೇನೆ. ವರಿಷ್ಠರು ಈ ಬಗ್ಗೆ ತುರ್ತು ಗಮನಹರಿಸಬೇಕಿದೆ ಎಂದು ಆಗ್ರಹಿಸಿದರು.

ಸಂಘಟನಾ ಕೊರತೆ :

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ತಿಪಟೂರಿನಲ್ಲಿ ನಡೆದ ಸಭೆಗೆ ಜಿಲ್ಲಾ ಮಂತ್ರಿಗಳು, ಅಭ್ಯರ್ಥಿ, ಶಾಸಕರು ಬಂದಿದ್ದರು. ಅದೇ ಪಕ್ಷದ ಶಾಸಕರಿರುವ ಕ್ಷೇತ್ರದಲ್ಲಿ ಸಭೆ ದೊಡ್ಡಮಟ್ಟದಲ್ಲಿ ನಡೆಯಬೇಕಿತ್ತು. ಕಾರ್ಯಕರ್ತರ ಸಂಖ್ಯೆ ಕಡಿಮೆ ಇದ್ದ ಕಾರಣ ಸಂಘಟನೆಯ ಕೊರತೆಯ ಸಂದೇಶ ರವಾನೆಯಾಗಿದೆ. ಈ ಸಭೆಗೆ ಸೌಜನ್ಯಕ್ಕಾದರೂ ನನ್ನನ್ನು ಶಾಸಕರು ಕರೆಯಲಿಲ್ಲ. ಜಿಲ್ಲಾ ಮಂತ್ರಿಗಳು ಸಭೆ ಎರಡು ಗಂಟೆಗೆ ಮೊದಲು ದೂರವಾಣಿ ಮೂಲಕ ಕರೆದರು. ಆದರೆ ನಮ್ಮ ಕಾರ್ಯಕರ್ತರನ್ನು ಕಡೆಗಣಿಸಿರುವ ಕಾರಣ ನಾನು ಹೋಗಲಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜು, ನಗರಸಭಾ ಸದಸ್ಯರುಗಳಾದ ಸೊಪ್ಪುಗಣೇಶ್, ಭಾರತಿ, ಆಶೀಫಾ, ಕಾರ್ಯಕರ್ತರುಗಳಾದ ಶಿವಶಂಕರ್, ರೇಣು, ವನಿತಾ ಸೇರಿದಂತೆ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.

ನಮ್ಮ ಕಡೆಯ ಕಾರ್ಯಕರ್ತರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಹಿರಂಗ ಪ್ರಚಾರ ಮಾಡದೆ ತಮ್ಮ ತಮ್ಮ ಮತ ಚಲಾಯಿಸಿ ಮನೆಗಳಲ್ಲಿರುತ್ತೇವೆ. ಸಮಸ್ಯೆ ಬಗೆಹರಿಸಿದ್ದೇ ಆದಲ್ಲಿ ಅಭ್ಯರ್ಥಿ ಮುದ್ದಹನುಮೇಗೌಡರನ್ನು ಗೆಲ್ಲಿಸಲು ಶ್ರಮಿಸುತ್ತೇವೆ. ಮುಂದಿನ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು.

- ಲೋಕೇಶ್ವರ, ಕಾಂಗ್ರೆಸ್ ಮುಖಂಡರು. ತಿಪಟೂರು.

Follow Us:
Download App:
  • android
  • ios