ಅಂದು ಬೆಂಕಿ ಮಹದೇವ್, ಇಂದು ಸೋಮಣ್ಣ...!
1952ರ ಮೊದಲ ಚುನಾವಣೆಯಿಂದ 2004 ರವರೆಗೆ ಚಾಮರಾಜನಗರ ವೀರಶೈವ- ಲಿಂಗಾಯತ ಪ್ರಾಬಲ್ಯದ ಕ್ಷೇತ್ರ. ದ್ವಿಸದಸ್ಯ ಇದ್ದಾಗ ಹೊರತುಪಡಿಸಿದರೆ ಉಳಿದೆಲ್ಲಾ ಚುನಾವಣೆಯಲ್ಲಿ ಇತರರು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2008ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಜಾತಿ ಸಮೀಕರಣ ಬದಲಾಗಿ ಕಾಂಗ್ರೆಸ್‌ನ ಸಿ. ಪುಟ್ಟರಂಗಶೆಟ್ಟಿಅವರು ಸತತ ಮೂರು ಗೆಲವು ದಾಖಲಿಸಿ ಹ್ಯಾಟ್ರಿಕ್ ವೀರ ಎನಿಸಿಕೊಂಡಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : 1952ರ ಮೊದಲ ಚುನಾವಣೆಯಿಂದ 2004 ರವರೆಗೆ ಚಾಮರಾಜನಗರ ವೀರಶೈವ- ಲಿಂಗಾಯತ ಪ್ರಾಬಲ್ಯದ ಕ್ಷೇತ್ರ. ದ್ವಿಸದಸ್ಯ ಇದ್ದಾಗ ಹೊರತುಪಡಿಸಿದರೆ ಉಳಿದೆಲ್ಲಾ ಚುನಾವಣೆಯಲ್ಲಿ ಇತರರು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2008ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಜಾತಿ ಸಮೀಕರಣ ಬದಲಾಗಿ ಕಾಂಗ್ರೆಸ್‌ನ ಸಿ. ಪುಟ್ಟರಂಗಶೆಟ್ಟಿಅವರು ಸತತ ಮೂರು ಗೆಲವು ದಾಖಲಿಸಿ ಹ್ಯಾಟ್ರಿಕ್ ವೀರ ಎನಿಸಿಕೊಂಡಿದ್ದಾರೆ.
ಗುಂಡ್ಲು ಪೇಟೆಯಂತೆ ಚಾಮರಾಜನಗರ ಕೂಡ ವೀರಶೈವ ಪ್ರಾಬಲ್ಯದ ಕ್ಷೇತ್ರ. ವೀರಶೈವರಲ್ಲದೇ ಬೇರೆಯವರು ಆಯ್ಕೆಯಾಗುವುದು ಕಷ್ಟಎಂಬ ಪರಿಸ್ಥಿತಿ ಇತ್ತು. 2008 ರಲ್ಲಿ ಕ್ಷೇತ್ರ ವಿಂಗಡನೆಯ ನಂತರ ಸಂತೇಮರಹಳ್ಳಿ ಕ್ಷೇತ್ರ ರದ್ದಾಯಿತು. ಅಲ್ಲಿದ್ದ ಚಂದಕವಾಡಿ ಹೋಬಳಿಯನ್ನು ಚಾಮರಾಜನಗರಕ್ಕೆ ಸೇರಿಸಿದ್ದು, ಚಾಮರಾಜನಗರದಲ್ಲಿ ಗುಂಡ್ಲುಪೇಟೆಯ 10 ಹಳ್ಳಿಗಳನ್ನು ಆ ಕ್ಷೇತ್ರಕ್ಕೆ ಸೇರಿಸಿದ ಪರಿಣಾಮ ಜಾತಿ ಸಮೀಕರಣ ಬದಲಾಯಿತು.
ನಂಜನಗೂಡು ಕ್ಷೇತ್ರದಿಂದ ಬೆಂಕಿ ಮಹದೇವ್ ಅವರು 1983, 1989, 1999 ರಲ್ಲಿ ಆಯ್ಕೆಯಾಗಿದ್ದರು. ಎಸ್.ಎಂ. ಕೃಷ್ಣ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. 2008 ರಲ್ಲಿ ನಂಜನಗೂಡು ಸಾಮಾನ್ಯದಿಂದ ಪ.ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. 2006ರ ವೇಳೆಗೆ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದಿದ್ದರು. ಅವರಿಗೂ ಮಹದೇವ್ ಅವರಿಗೂ ಸರಿ ಹೊಂದಲಿಲ್ಲ. ಹೀಗಾಗಿ ಮಹದೇವ್ ಅವರು ಬಿಜೆಪಿ ಸೇರಿ, 2008 ರಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿದರು.
ಗೆದ್ದೇ ಗೆಲ್ಲುವೆ ಎಂಬ ಅವರ ಆತ್ಮವಿಶ್ವಾಸ ಮುಳವಾಯಿತು. 2,612 ಮತಗಳ ಅಂತರದಿಂದ ಕಾಂಗ್ರೆಸ್‌ನ ಸಿ. ಪುಟ್ಟರಂಗಶೆಟ್ಟಿಅವರ ಎದುರು ಸೋತರು. ಪುಟ್ಟರಂಗಶೆಟ್ಟಿಅವರಿಗೆ 42,017, ಮಹದೇವ್ ಅವರಿಗೆ 39,405 ಮತಗಳು ದೊರೆತವು. ಕನ್ನಡ ಚಳವಳಿಯ ವಾಟಾಳ್ ನಾಗರಾಜ್- 11,426, ಜೆಡಿಎಸ್‌ನ ಮಂಗಲ ಶಿವಕುಮಾರ್- 8,919, ಬಿಎಸ್ಪಿಯ ಜಿ.ಎಂ. ಗಾಡ್ಕರ್- 8,866 ಮತಗಳನ್ನು ಪಡೆದಿದ್ದರು.
2013 ರಲ್ಲಿ ಕಾಂಗ್ರೆಸ್ ಸಿ. ಪುಟ್ಟರಂಗಶೆಟ್ಟಿ- 54,440 ಮತಗಳನ್ನು ಪಡೆದು ಎರಡನೇ ಬಾರಿ ಗೆದ್ದರು. ಕೆಜೆಪಿಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ- 43,244, ವಾಟಾಳ್ ನಾಗರಾಜ್- 18,408, ಬಿಎಸ್ಪಿಯ ಆರ್.ಪಿ. ನಂಜುಂಡಸ್ವಾಮಿ- 9,278, ಬಿಜೆಪಿಯ ಎಸ್. ಸೋಮನಾಯಕ- 6,919 ಮತಗಳನ್ನು ಪಡೆದಿದ್ದರು.
2018 ರಲ್ಲಿ ಸಿ. ಪುಟ್ಟರಂಗಶೆಟ್ಟಿ- 75,693 ಮತಗಳನ್ನು ಪಡೆದು ಗೆಲವು ಸಾಧಿಸಿದರು. ಬಿಜೆಪಿಯ ಕೆ.ಆರ್. ಮಲ್ಲಿಕಾರ್ಜುನಪ್ಪ- 71,050
ಬಿಎಸ್ಪಿಯ ಎ.ಎಂ. ಮಲ್ಲಿಕಾರ್ಜುನಸ್ವಾಮಿ- 7,134, ವಾಟಾಳ್ ನಾಗರಾಜ್- 5,977 ಮತಗಳನ್ನು ಪಡೆದಿದ್ದರು.
ಮಂತ್ರಿಯಾದ ಮೊದಲಿಗರು
ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಉಪ್ಪಾರ ಸಮಾಜದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇದೇ ಕಾರಣಕ್ಕಾಗಿ ಪುಟ್ಟರಂಗಶೆಟ್ಟಿಅವರಿಗೆ ಮೊದಲಿಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸ್ಥಾನ, ನಂತರ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಮೂರನೇ ಬಾರಿ ಗೆದ್ದಾಗ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಿರಿಯೂ ಸಿಕ್ಕಿತು. ಚಾಮರಾಜನಗರ ಕ್ಷೇತ್ರದಿಂದ ಗೆದ್ದು ಮಂತ್ರಿಯಾದವರಲ್ಲಿ ಅವರೇ ಮೊದಲಿಗರು ಎಂಬ ಹೆಗ್ಗಳಿಕೆ ಪಡೆದರು.