ಸಂವಿಧಾನದ ಉದ್ದೇಶ ಇನ್ನೂ ಸಂಪೂರ್ಣ ಜಾರಿಯಾಗಿಲ್ಲ: ಕೃಷ್ಣಮೂರ್ತಿ ಬಿಳಿಗೆರೆ
ದೇಶದ ಸರ್ವ ಜನರ ಹಿತಕ್ಕಾಗಿ ಸ್ಥಾಪಿಸಿರುವ ಸಂವಿಧಾನ 75 ವರ್ಷಗಳು ಕಳೆಯುತ್ತಾ ಬಂದಿದ್ದರೂ ಸಂಪೂರ್ಣವಾಗಿ ಜಾರಿಯಾಗಿಲ್ಲದಿರುವುದು ದುರಾದೃಷ್ಟಕರ ಎಂದು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ವಿಷಾದಿಸಿದರು.
ತುರುವೇಕೆರೆ : ದೇಶದ ಸರ್ವ ಜನರ ಹಿತಕ್ಕಾಗಿ ಸ್ಥಾಪಿಸಿರುವ ಸಂವಿಧಾನ 75 ವರ್ಷಗಳು ಕಳೆಯುತ್ತಾ ಬಂದಿದ್ದರೂ ಸಂಪೂರ್ಣವಾಗಿ ಜಾರಿಯಾಗಿಲ್ಲದಿರುವುದು ದುರಾದೃಷ್ಟಕರ ಎಂದು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ವಿಷಾದಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಆದಿಜಾಂಬವ ಸಂಘದ ಆಶ್ರಯದಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ರಚನೆ, ಉದ್ದೇಶ ದೇಶದಲ್ಲಿರುವ ಸರ್ವರಿಗೂ ಸಮಾನತೆಯನ್ನು ಕಲ್ಪಿಸುವುದೇ ಆಗಿದೆ. ಆದರೆ ಪ್ರತಿಯೊಂದು ಕ್ಷೇತ್ರದಲ್ಲೂ ವೈರುಧ್ಯ ಎದ್ದು ಕಾಣುತ್ತಿದೆ. ಹಣದ ಕೊರತೆಯಿಂದ ಉತ್ತಮ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ಬಂದಿದೆ. ಸಾಮಾಜಿಕ ನ್ಯಾಯ ಎಂಬುದು ಗಗನ ಕುಸುಮವಾಗಿದೆ. ಆರೋಗ್ಯ, ಆಹಾರ, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಾರತಮ್ಯ ತಾಂಡವಾಡುತ್ತಿದೆ. ಕೋಟಿ ಕೋಟಿ ಸಂಖ್ಯೆಯಲ್ಲಿ ಜನರು ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಹಿತಿ ತುರುವೇಕೆರೆ ಪ್ರಸಾದ್ ಮಾತನಾಡಿ, ಮನುಸ್ಮೃತಿ ಎಲ್ಲಿದೆ? ಇತ್ತೀಚೆಗೆ ಹಿಂದುಳಿದ ಸಮುದಾಯದವರ ಓಲೈಕೆಗೆ ಮುಂದಾಗಿರುವ ಹಲವಾರು ಮಂದಿ ವಿನಾಕಾರಣ ಮನುಸ್ಮೃತಿ ಬಗ್ಗೆ ಅಪಪ್ರಚಾರ ಮಾಡಿ, ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಎಷ್ಟು ಮಂದಿ ಮನುಸ್ಮೃತಿಯನ್ನು ಓದಿದ್ದಾರೆ. ಎಷ್ಟು ಮನೆಯಲ್ಲಿ ಮನುಸ್ಮೃತಿಯ ಗ್ರಂಥವಿದೆ. ಬರೀ ಬಾಯಿ ಮಾತಿನಿಂದ ಹತ್ತಾರು ಬಾರಿ ಸುಳ್ಳನ್ನು ಹೇಳಿ ಅದು ಸತ್ಯ ಎಂದು ಬಿಂಬಿಸುವ ಕಾರ್ಯ ನಡೆಯುತ್ತಿದೆ. ಎಂದೋ ಆಗಿರುವ ಘಟನೆಯನ್ನು ಈಗಿನ ಕಾಲಕ್ಕೂ ಅನ್ವಯಿಸಲು ಹೊರಟಿರುವುದು ದುರಾದೃಷ್ಟಕರ ಸಂಗತಿ. ಈಗ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕವಾಗಿ ಎಲ್ಲ ಸಮುದಾಯವೂ ಮುಂದುವರೆದಿದೆ. ಪದೇ ಪದೇ ದ್ವೇಷ ಬಿತ್ತುವ ಕಾರ್ಯಕ್ಕೆ ಯಾರೂ ಮುಂದಾಗಬಾರದು ಎಂದು ಮನವಿ ಮಾಡಿದರು.
ವಕೀಲ ರಂಗಧಾಮಯ್ಯ ಮಾತನಾಡಿ, ದಲಿತರು ಬ್ರಾಹ್ಮಣ ಸಮುದಾಯವನ್ನು ವಿರೋಧಿಸುವುದಿಲ್ಲ. ಬ್ರಾಹ್ಮಣ ಶಾಹಿ ನೀತಿಯನ್ನು ವಿರೋಧಿಸುತ್ತಾರೆ. ಸಂವಿಧಾನದ ರಚನೆಯಿಂದಾಗಿಯೇ ಎಲ್ಲರಲ್ಲೂ ಸಮಾನತೆಯನ್ನು ಕಾಣಲು ಸಾಧ್ಯವಾಗಿದೆ. ಸಂವಿಧಾನ ಇಲ್ಲದಿದ್ದರೆ ದಲಿತ ಸಮುದಾಯ ಅನಾಗರಿಕರಾಗಿಯೇ ಉಳಿಯಬೇಕಿತ್ತು. ರಾಜಕೀಯ ಕ್ಷೇತ್ರದಲ್ಲಿ ದಲಿತರು, ಸಮಾಜದಲ್ಲಿ ಅತಿ ಹಿಂದುಳಿದವರು ತಮ್ಮ ಅಸ್ಥಿತ್ವವನ್ನು ತೋರ್ಪಡಿಸಲು ಸಂವಿಧಾನ ನೆರವಾಗಿದೆ ಎಂದು ಹೇಳಿದರು.
ಪಂಚಾಯತ್ ರಾಜ್ ನ ಸಹಾಯಕ ಇಂಜಿನಿಯರ್ ಕೃಷ್ಣಕಾಂತ್ ಮಾತನಾಡಿ, ನಾನು ಬಡ ಕುಟುಂಬದಿಂದ ಬಂದಿದ್ದು, ಸೂಕ್ತ ಶಿಕ್ಷಣ ಪಡೆದು ಸಂವಿಧಾನದತ್ತವಾಗಿ ತಮ್ಮ ಸಮುದಾಯಕ್ಕೆ ನೀಡಿರುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಇಂದು ಉತ್ತಮ ಹುದ್ದೆಯಲ್ಲಿ ಇದ್ದೇನೆ. ಇದೇ ಮಾದರಿಯಲ್ಲಿ ಯುವಕರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಉತ್ತಮ ಹುದ್ದೆಗೆ ಬರಬೇಕೆಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.95 ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಮಾಜದಲ್ಲಿ ಉತ್ತಮ ಸೇವೆ ಮಾಡಿರುವ ಡಾ.ಎ.ನಾಗರಾಜ್, ಸಾಹಿತಿ ತುರುವೇಕೆರೆ ಪ್ರಸಾದ್, ತೊರೆಮಾವಿನಹಳ್ಳಿ ವಿಎಸ್‌ಎಸ್‌ಎನ್ ನ ಅಧ್ಯಕ್ಷ, ಜಿಲ್ಲಾ ಯೂನಿಯನ್ ಬ್ಯಾಂಕಿನ ನಿರ್ದೇಶಕ ಮಾವಿನಹಳ್ಳಿಯ ಎಂ.ಎಸ್.ವಿಜಯಕುಮಾರ್, ಪತ್ರಕರ್ತ ಮಲ್ಲಿಕಾರ್ಜುನ್ ದುಂಡ, ನಿವೃತ್ತ ನ್ಯಾಯಾಂಗ ಇಲಾಖಾ ನೌಕರ ಕೆಂಪಯ್ಯ, ಉಪನ್ಯಾಸಕ ನಾಗರಾಜು, ಆನೇಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಲ್ಲವಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ವಿ.ಟಿ.ವೆಂಕಟರಾಮಯ್ಯ ವಹಿಸಿದ್ದರು. ಕೋಳಾಲ ನಾಗರಾಜ್, ಗೋಣಿ ತುಮಕೂರು ಲಕ್ಷ್ಮೀಕಾಂತ್, ಬಿಇಒ ಸೋಮಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ವಕೀಲ ನಾಗೇಶ್, ಡಾ.ಚಂದ್ರಯ್ಯ, ಮಲ್ಲೂರು ತಿಮ್ಮೇಶ್, ದಂಡಿನಶಿವರ ಕುಮಾರ್, ಕುಣಿಗಲ್ ಶಿವಶಂಕರ್, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ, ಸಮಾಜ ಕಲ್ಯಾಣಾಧಿಕಾರಿ ತ್ರಿವೇಣಿ, ಗ್ರೇಡ್ 2 ತಹಸೀಲ್ದಾರ್ ಸುಮತಿ, ದಲಿತ ಮುಖಂಡರಾದ ಗುರುದತ್, ಡಾ.ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಇದ್ದರು.