ತಮಿಳುನಾಡಿನಲ್ಲಿ ಪತ್ತೆಯಾಗಿರುವ ಮಂಡ್ಯದ ವಿಷ್ಣುವಿನ ವಿಗ್ರಹ ಯಾವ ದೇವಾಲಯಕ್ಕೆ ಸೇರಿದ್ದು ಎನ್ನುವುದರ ಮೂಲ ಪತ್ತೆಯಾಗುತ್ತಿಲ್ಲ. ಚೋಳರ ಕಾಲಕ್ಕೆ ಸೇರಿದ್ದು ಎನ್ನಲಾದ ಈ ವಿಗ್ರಹ ಪಾಳುಬಿದ್ದ ದೇವಸ್ಥಾನಕ್ಕೆ ಸೇರಿರಬಹುದೆಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

 ಮಂಡ್ಯ (ನ.11): ತಮಿಳುನಾಡಿನಲ್ಲಿ ಪತ್ತೆಯಾಗಿರುವ ಮಂಡ್ಯದ ವಿಷ್ಣುವಿನ ವಿಗ್ರಹ ಯಾವ ದೇವಾಲಯಕ್ಕೆ ಸೇರಿದ್ದು ಎನ್ನುವುದರ ಮೂಲ ಪತ್ತೆಯಾಗುತ್ತಿಲ್ಲ. ಚೋಳರ ಕಾಲಕ್ಕೆ ಸೇರಿದ್ದು ಎನ್ನಲಾದ ಈ ವಿಗ್ರಹ ಪಾಳುಬಿದ್ದ ದೇವಸ್ಥಾನಕ್ಕೆ ಸೇರಿರಬಹುದೆಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.

ಸಾಮಾನ್ಯವಾಗಿ ವಿಷ್ಣುವಿನ ಎಲ್ಲಾ ಉತ್ಸವ ಮೂರ್ತಿಗಳು ಒಂದೇ ಶೈಲಿಯಲ್ಲಿರುವುದರಿಂದ ಈ ವಿಗ್ರಹ ಇಂತಹ ದೇವಾಲಯಕ್ಕೆ (Temple) ಸೇರಿದ್ದು ಎಂದು ನಿರ್ದಿಷ್ಟವಾಗಿ ಹೇಳಲಾಗದು. ಯಾವುದೋ ಪಾಳುಬಿದ್ದ ವಿಷ್ಣುವಿನ (Vishnu) ದೇವಾಲಯದಿಂದ ಕದ್ದೊಯ್ದಿರಬಹುದು. ಆ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗದೆಯೂ ಇರಬಹುದು ಎಂಬ ಅನುಮಾನಗಳಿವೆ.

600 ವರ್ಷಗಳಷ್ಟುಪುರಾತನವಾದ ಈ ವಿಗ್ರಹ ಪಂಚ ಲೋಹದ ವಿಗ್ರಹವಾಗಿದೆ. ಇದು ಮಂಡ್ಯಕ್ಕೆ ಸೇರಿದ್ದು ಎಂಬ ಮಾಹಿತಿಯನ್ನು ಹೊರತುಪಡಿಸಿದರೆ ಯಾವ ತಾಲೂಕು, ಯಾವ ಊರಿನದ್ದು ಎಂಬುದು ಯಾರಿಗೂ ತಿಳಿದಿಲ್ಲ. ತಮಿಳುನಾಡು ಮೂಲದ ವಕೀಲ ನಟರಾಜ್‌ಗೆ ನೀಡಿದ ಆ ಪೂಜಾರಿ ಯಾರು ಎನ್ನುವುದೂ ಗೊತ್ತಿಲ್ಲ. ಪೂಜಾರಿಯಿಂದ ವಿಗ್ರಹ ಪಡೆದುಕೊಂಡಿದ್ದ ವಕೀಲ ನಟರಾಜ್‌ ಕೂಡ ಸಾವನ್ನಪ್ಪಿರುವುದರಿಂದ ವಿಗ್ರಹದ ಮೂಲ ಪತ್ತೆ ಮಾಡುವುದು ಸುಲಭದ ಕೆಲಸವಲ್ಲ ಎಂದು ಹೇಳಲಾಗುತ್ತಿದೆ.

ಈ ವಿಷ್ಣುವಿನ ವಿಗ್ರಹ ಪ್ರತಿಷ್ಠಿತ ದೇವಾಲಯಕ್ಕೆ ಸೇರಿದ ವಿಗ್ರಹವಾಗಿದ್ದರೆ ಅದು ಎಂದೋ ಬಹಿರಂಗಗೊಳ್ಳುತ್ತಿತ್ತು. ಕನಿಷ್ಠ ಆ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿತ್ತು. ವಿಗ್ರಹ ಪತ್ತೆಯಾದ ನಂತರ ಆ ದೇವಾಲಯಕ್ಕೆ ಸೇರಿದ ಆಡಳಿತ ಮಂಡಳಿಯವರು ವಿಗ್ರಹ ಕಳುವಾಗಿದ್ದರ ಬಗ್ಗೆ ಮಾಹಿತಿ ನೀಡಿ ಪಡೆದುಕೊಳ್ಳುವುದಕ್ಕೆ ಮುಂದಾಗುತ್ತಿದ್ದರು. ಆದರೆ, ಈ ವಿಗ್ರಹದ ಮೂಲವೇ ಪತ್ತೆಯಾಗದಿರುವುದರಿಂದ ತಮಿಳುನಾಡಿನಲ್ಲಿ ಪತ್ತೆಯಾದ ಮಂಡ್ಯದ ವಿಷ್ಣುವಿನ ವಿಗ್ರಹ ಅನಾಥವಾಗಿ ಉಳಿಯುವಂತಾಗಿದೆ.

ಜಿಲ್ಲಾ ಪೊಲೀಸ್‌ ಇಲಾಖೆಯೂ ವಿಗ್ರಹದ ಮೂಲ ಪತ್ತೆಹಚ್ಚುವ ಕಾರ್ಯ ಕೈಗೊಂಡು ಪರಿಶೀಲನೆ ನಡೆಸುತ್ತಿದೆ. ಆದರೆ, ಪುರಾತನ ವಿಷ್ಣು ವಿಗ್ರಹ ಕಳುವಾಗಿರುವ ಬಗ್ಗೆ ಪೊಲೀಸ್‌ ಠಾಣೆಗಳಲ್ಲಿ ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸ್‌ ಮೂಲಗಳು ಹೇಳಿವೆ. ಹಾಗಾಗಿ ವಿಗ್ರಹವಿದ್ದ ದೇಗುಲದ ಮೂಲಸ್ಥಾನ ಪತ್ತೆಯಾಗದೆ ಪೊಲೀಸರಿಗೂ ಪ್ರಕರಣ ಸವಾಲಾಗಿ ಪರಿಣಮಿಸಿದೆ.

ಈ ಬೆಳವಣಿಗೆಗಳನ್ನು ಗಮನಿಸಿದಾಗ ಈ ವಿಷ್ಣುವಿನ ವಿಗ್ರಹದ ಮೂಲ ದೇಗುಲ ಪಾಳುಬಿದ್ದು ನಾಶವಾಗಿರಬಹುದು. ಇಲ್ಲವೇ, ಪಾಳುಬಿದ್ದ ಸ್ಥಿತಿಯಲ್ಲಿ ಈಗಲೂ ಉಳಿದಿರಬಹುದು. ಜನರಿಂದ ದೂರವಾಗಿದ್ದ ದೇಗುಲದಲ್ಲಿದ್ದ ಈ ವಿಗ್ರಹವನ್ನು ತೆಗೆದುಕೊಂಡು ಹೋಗಿ ತಮಿಳುನಾಡು ಮೂಲದ ವಕೀಲನಿಗೆ ಮಾರಾಟ ಮಾಡಿರಬಹುದು. ಆ ವಿಗ್ರಹ ಐದು ವರ್ಷಗಳ ಬಳಿಕ ವಿಗ್ರಹದ ಕಳ್ಳರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಸಿಕ್ಕಿರಬಹುದು ಎಂದು ಅನುಮಾನಗಳು ವ್ಯಕ್ತವಾಗುತ್ತಿವೆ.

ಮೂಲ ಪತ್ತೆಯಾಗದೆ ವಿಷ್ಣುವಿನ ವಿಗ್ರಹವನ್ನು ಮಂಡ್ಯಕ್ಕೆ ತರುವ ಯಾವುದೇ ಪ್ರಯತ್ನಗಳು ಯಾರಿಂದಲೂ ನಡೆಯುತ್ತಿಲ್ಲ. ಹೀಗಾಗಿ ಮಂಡ್ಯಕ್ಕೆ ಸೇರಿದ ವಿಷ್ಣು ತಮಿಳುನಾಡಿನಲ್ಲೇ ಉಳಿದಿದ್ದಾನೆ. ಮೂಲಸ್ಥಾನ ಪತ್ತೆಯಾಗದೆ ವಿಷ್ಣು ದೇವರು ನೆರೆ ರಾಜ್ಯದಲ್ಲೇ ನೆಲೆ ಕಂಡುಕೊಳ್ಳುವಂತಾಗಿದೆ.

 ಮಂಡ್ಯ ಮೂಲದ ವಿಗ್ರಹ ತಮಿಳುನಾಡಿನಲ್ಲಿ ಪತ್ತೆಯಾಗಿರುವುದು ಪತ್ರಿಕೆಗಳಿಂದ ನಮ್ಮ ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಐದು ವರ್ಷದ ಕಳ್ಳತನ ಪ್ರಕರಣಗಳನ್ನೆಲ್ಲಾ ಕ್ಲೋಸ್‌ ಮಾಡಿದ್ದೇವೆ. ವಿಷ್ಣುವಿನ ವಿಗ್ರಹ ಕಳ್ಳತನವಾಗಿರುವ ಬಗ್ಗೆ ಎಲ್ಲಿಯೂ ದೂರು ದಾಖಲಾಗದಿರುವುದು ಪರಿಶೀಲನೆಯಿಂದ ಕಂಡು ಬಂದಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ನಂತರವೂ ಇದು ನಮ್ಮ ದೇಗುಲಕ್ಕೆ ಸೇರಿದ ವಿಗ್ರಹವೆಂದು ಯಾರೂ ನಮ್ಮ ಬಳಿಗೆ ಬಂದಿಲ್ಲ. ಹಾಗಾಗಿ ಈ ವಿಗ್ರಹದ ಮೂಲ ಪತ್ತೆಹಚ್ಚಲಾಗುತ್ತಿಲ್ಲ.

- ಎನ್‌.ಯತೀಶ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ 

ತಮಿಳುನಾಡಿನಲ್ಲಿ ಪತ್ತೆಯಾಗಿರುವ ಮಂಡ್ಯದ ವಿಷ್ಣುವಿನ ವಿಗ್ರಹ ಯಾವ ದೇವಾಲಯಕ್ಕೆ ಸೇರಿದ್ದು ಎನ್ನುವುದರ ಮೂಲ ಪತ್ತೆಯಾಗುತ್ತಿಲ್ಲ