ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಇಂಚಗೇರಿ ಮಠ. ಕರುನಾಡು ಒಗ್ಗೂಡಿಸಲು ಉಪವಾಸ ಕುಳಿತಿದ್ದ ಮಹಾದೇವರು. ಮರಣೋತ್ತರವಾಗಿ ಶ್ರೀಗಳಿಗೆ ಸರ್ಕಾರದಿಂದ ಏಕೀಕರಣ ಪ್ರಶಸ್ತಿ
•- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ.29) : ರಾಜ್ಯದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಗುತ್ತೆ. ಸಂಸ್ಥಾನಗಳ ರೂಪದಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕ ಏಕೀಕರಣವಾಗಲು ಹಲವು ಮಹನೀಯರ ಕೊಡುಗೆ ಇದೆ. ಅಖಂಡ ಕರ್ನಾಟಕವಾಗಲು ವಿಜಯಪುರ ಜಿಲ್ಲೆಯ ಕೊಡುಗೆಯು ಅಪಾರವಾಗಿದೆ. ಅದರಲ್ಲೂ ಚಡಚಣ ತಾಲೂಕಿನ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳ ಕೊಡುಗೆಯು ಅಷ್ಟಿಷ್ಟಲ್ಲ. ಇದಕ್ಕಾಗಿಯೇ ಮರಣೋತ್ತರವಾಗಿ ಶ್ರೀಗಳಿಗೆ ರಾಜ್ಯ ಸರ್ಕಾರ ಸುವರ್ಣ ಕರ್ನಾಟಕ ಹಿನ್ನೆಲೆ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದೆ..
Inchageri Math: 75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಸಿಕ್ತು ಗೌರವ
ಕರ್ನಾಟಕ ಏಕೀಕರಣಕ್ಕಾಗಿ ಮಾಧವಾನಂದ ಶ್ರೀಗಳ ಕೊಡುಗೆ
ದೇಶಕ್ಕೆ ಸ್ವತಂತ್ರ ಸಿಕ್ಕ ನಂತರ ನಮ್ಮ ರಾಜ್ಯ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿತ್ತು. ಆ ಸಮಯದಲ್ಲಿ ಸಂಸ್ಥಾನಗಳ ಒಗ್ಗೂಡಿಸುವುದು ಸುಲಭದ ಮಾತಾಗಿರಲಿಲ್ಲ. ಆಗ ಶುರುವಾಗಿದ್ದ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಹಲವು ಮಹನೀಯರು ಪಾಲ್ಗೊಂಡಿದ್ದರು. ಆದ್ರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಈ ಶ್ರೀ ಕ್ಷೇತ್ರ ಇಂಚಗೇರಿ ಮಠದ ಮಾಧವಾನಂದ ಪ್ರಭುಜೀಗಳು. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿರುವ ಇಂಚಗೇರಿ ಮಠದ ಪೀಠಾಧಿಕಾರಿಗಳು ಆಗಿದ್ದ ಮಾಧವಾನಂದ ಶ್ರೀಗಳು ಕರ್ನಾಟಕವನ್ನು ಒಗ್ಗೂಡಿಸಲು ಸಹಸ್ರಾರು ಭಕ್ತರನ್ನು ಕರೆದುಕೊಂಡು ಹೋರಾಟ ನಡೆಸಿದ್ದರು.
ಏಕೀಕರಣಕ್ಕಾಗಿ 21 ದಿನಗಳ ಕಾಲ ದೇವರ ಉಪವಾಸ
ಕೋಟಿ ಕೋಟಿ ಭಕ್ತರಿಂದ ದೇವರು ಎಂದೆ ಕರೆಯಿಸಿಕೊಳ್ತಿದ್ದ ಶ್ರೀ ಸ.ಸ ಮಾಧವಾನಂದ ಶ್ರೀಗಳು ಕರ್ನಾಟಕ ಏಕೀಕರಣಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದರು ಅನ್ನೋದು ಅಚ್ಚರಿಯ ವಿಚಾರ. ಅದ್ರಲ್ಲು ತಮ್ಮ ಲಕ್ಷಾಂತರ ಭಕ್ತರನ್ನ ಜೊತೆ ಮಾಡಿಕೊಂಡು ಮೈಸೂರು ಕರ್ನಾಟಕವಾಗಬೇಕು ಅಂತಾ ಸತ್ಯಾಗ್ರಹ ನಡೆಸಿದ್ದರು. ಹಲವಾರು ಪ್ರಾಂತಗಳಲ್ಲಿ ಇಬ್ಭಾಗವಾಗಿದ್ದ ಕನ್ನಡ ನಾಡನ್ನು ಅಖಂಡವಾಗಿಸಲು ನಡೆದ ಹೋರಾಟದಲ್ಲಿ ಮಾಧವಾನಂದ ಪ್ರಭುಗಳು 21 ದಿವಸಗಳ ಅಮರಣಾಂತ ಉಪವಾಸ ಕೈಗೊಂಡು ಬಂಧಿಸಲ್ಪಟ್ಟಿದ್ದರು.
ಹುಬ್ಬಳ್ಳಿ ಸಿದ್ದಾರೂಢ ಮಠದಲ್ಲಿ ಪರಿಷತ್ ಸಂಘಟನೆ.
ಗದಗ, ದಾವಣಗೆರೆ ಹಾಗೂ ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ಪರಿಷತ್ ಗಳನ್ನ ಸಂಘಟಿಸಿ ಸಂಸ್ಥಾನಗಳ ವಿಲೀನಿಕರಣಕ್ಕಾಗಿ ಆಗ್ರಹಿಸಿದ್ದರು. ಇದಷ್ಟೆ ಅಲ್ಲದೆ ಮಾಧವಾನಂದ ಶ್ರೀಗಳು ಸ್ವಾತಂತ್ರ್ಯ ಹೋರಾಟ ಮುಗಿದ ಮೇಲೆ ನಮ್ಮ ಕರ್ನಾಟಕದ ಜಮಖಂಡಿ, ಜತ್ತ, ರಾಮದುರ್ಗ, ಮೈಸೂರ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲಿನಗೊಳಿಸುವ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಏಕೀಕರಣಕ್ಕಾಗಿ ಸಂಘಟನೆ, ಹೋರಾಟ, ಉಪವಾಸ ಮಾಡಿ ಮೈಸೂರು ಕರ್ನಾಟವಾಗಲು ಶ್ರಮಿಸಿದ್ದರು.
ಮರಣೋತ್ತರವಾಗಿ ಶ್ರೀಗಳಿಗೆ ಕರ್ನಾಟಕ ಏಕೀಕರಣ ಪ್ರಶಸ್ತಿ
ಅಂದು ನಾಡನ್ನ ಒಗ್ಗೂಡಿಸಲು ಮಾಧವಾನಂದ ಶ್ರೀಗಳ ಶ್ರಮವನ್ನ ಅರಿತ ಕರ್ನಾಟಕ ಸರ್ಕಾರ 2006 ರಲ್ಲಿ ಮರಣೋತ್ತರವಾಗಿ ಮಾಧವಾನಂದ ಶ್ರೀಗಳಿಗೆ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಂದಿನ ಸಿಎಂ ಕುಮಾರಸ್ವಾಮಿ ಅವರು ಪ್ರಧಾನ ಮಾಡಿದ ಪ್ರಶಸ್ತಿಯನ್ನು ಮಠದ ಆಡಳಿತಾಧಿಕಾರಿಯಾಗಿದ್ದ ಪಂಪಕವಿ ಬೆಳಗಲಿ ಮಠದ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದರು.
ಕನ್ನಡ ರಾಜ್ಯೋತ್ಸವದ ಮರುದಿನವೇ ದೇವರ ಜನ್ಮದಿನಾಚರಣೆ
ಇಂದಿಗೂ ನವೆಂಬರ್ 1 ರಂದು ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಣೆಯಾದರೆ ಅದರ ಮರುದಿನವೇ ದಿನಾಂಕ 2ರಂದು ಮಾಧವಾನಂದ ಶ್ರೀಗಳ ಜಯಂತಿಯನ್ನು ಇಂಚಗೇರಿ ಮಠದ 500ಕ್ಕೂ ಅಧಿಕ ಶಾಖಾ ಮಠಗಳಲ್ಲಿ ಆಚರಣೆ ಮಾಡಲಾಗುತ್ತೆ. ಆದ್ರೆ ಭಾರತ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣಕ್ಕೆ ದುಡಿದ ಇಂಚಗೇರಿ ಮಠ ಇಂದಿಗೂ ಏಲೆ ಮರೆಯ ಕಾಯಿಯಂತೆ ಇರೋದು ವಿಪರ್ಯಾಸವೇ ಸರಿ.
ಸ್ವಾತಂತ್ರ್ಯಕ್ಕಾಗಿಯೂ ಸಶಸ್ತ್ರವಾಗಿ ನಡೆದಿತ್ತು ಹೋರಾಟ
ಅಲ್ಲದೆ ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಮಹಾರಾಷ್ಟ್ರದ ಗಡಿ ಹಾಗೂ ಬೆಳಗಾವಿ ಜಿಲ್ಲೆಯ ಕೊಟ್ಟಲಗಿ ಗ್ರಾಮಗಳಲ್ಲಿ ಸ್ವತಃ ಬಂದೂಕು ಪ್ಯಾಕ್ಟರಿಗಳನ್ನ ತೆರೆದು ಬ್ರೀಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ನೇತಾಜೀ ಸುಭಾಷ ಚಂದ್ರಬೋಸ್, ಮಹಾತ್ಮ ಗಾಂಧಿಯವರ ಜೊತೆಗೆ ಸ್ವಾಮಿಗಳು ನಿಕಟ ಸಂಪರ್ಕ ಹೊಂದಿದ್ದರು. ಮಾಧವಾನಂದರ ಹೋರಾಟಕ್ಕೆ ಬೆಚ್ಚಿ ಬಿದ್ದ ಬ್ರಿಟಿಷ್ ಸರ್ಕಾರ ಶ್ರೀಗಳ ಮೇಲೆ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿತ್ತು. ಜೊತೆಗೆ ಬ್ರಿಟಿಷರಿಗೆ ಸೆರೆ ಸಿಕ್ಕ ಅವರು ಮುಂಬೈನ ಯರವಾಡ ಜೈಲಿನಲ್ಲಿ ಹಲವು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದಿತ್ತು.
ಇದು ಜಾತ್ಯಾತೀತ ಮಠ, ನಡೆಯುತ್ವೆ ಅಂತರ್ಜಾತಿ ವಿವಾಹ
ಈ ಮಠ ಜಾತ್ಯಾತೀತವಾಗಿದ್ದು, ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಯಾವುದೇ ಭೇದ ಭಾವವಿಲ್ಲದೆ ಸಕಲ ಭಕ್ತರು ಮಠಕ್ಕೆ ನಡೆದುಕೊಳ್ತಾರೆ. ಇದುವರೆಗೂ ಆಗಿರುವ 11 ಪೀಠಾಧಿಪತಿಗಳು ಸೇರಿ ಬರೋಬ್ಬರಿ 30 ಸಾವಿರಕ್ಕೂ ಅಧಿಕ ಅಂತರ್ಜಾತಿಯ ವಿವಾಹಗಳನ್ನು ನೇರವೇರಿಸಿದ್ದು ಮಠದ ಹೆಮ್ಮೆಯಾಗಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನ: ಆಗಸ್ಟ್ 22ರಂದು ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ
'ನಮ್ಮದು ದೇಶಭಕ್ತಿ ಹಾಗೂ ನಾಡ ಭಕ್ತಿಯ ಮಠ. ಭಾರತ ಸ್ವಾತಂತ್ರ್ಯಕ್ಕಾಗಿ, ಕರ್ನಾಟಕ ಏಕೀಕರಣಕ್ಕಾಗಿ ಮಠದ ಶ್ರೀ ಸ.ಸ ಮಾಧವಾನಂದ ಪ್ರಭುಜಿಗಳು ಭಕ್ತರನ್ನ ಬೆನ್ನಿಗೆ ಕಟ್ಟಿಕೊಂಡು ಹೋರಾಡಿದ್ದಾರೆ. ಆಧ್ಯಾತ್ಮದ ಜೊತೆಗೆ ದೇಶಭಕ್ತಿ, ನಾಡಭಕ್ತಿಯನ್ನ ಹೊಂದಿದ ಕೋಟಿ-ಕೋಟಿ ಅನುಯಾಯಿಗಳು ಇಂಚಗೇರಿ ಮಠಕ್ಕಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ. ರಾಜ್ಯೋತ್ಸವದ ಮರುದಿನವೇ ಮಾಧವಾನಂದ ಶ್ರೀಗಳ ಜನ್ಮದಿನವನ್ನು ನಾವು ವಿಜೃಂಭನೆಯಿಂದ ಆಚರಣೆ ಮಾಡುತ್ತೇವೆ"
- ರೇವಣಸಿದ್ದೇಶ್ವರ ಮಹಾರಾಜರು, ಇಂಚಗೇರಿ ಮಠ ವಿಜಯಪುರ ಜಿಲ್ಲೆ
