Asianet Suvarna News Asianet Suvarna News

Chikkamagaluru: ದತ್ತ ಜಯಂತಿಯಲ್ಲಿ ಕಾನೂನು ಮರೆತ ಜಿಲ್ಲಾಡಳಿತ: ಭೋಜೇಗೌಡ

  • ದತ್ತ ಜಯಂತಿಯಲ್ಲಿ ಕಾನೂನು ಮರೆತ ಜಿಲ್ಲಾಡಳಿತ: ಭೋಜೇಗೌಡ
  • ಕೋರ್ಟ್ ಆದೇಶ ಉಲ್ಲಂಘನೆ ಹಿನ್ನೆಲೆ ಡಿಸಿ, ಎಸ್‌ಪಿ ಸಸ್ಪೆಂಡ್‌ಗೆ ಆಗ್ರಹ
  • ಮನಬಂದಂತೆ ಡಿಜೆ ಬಳಕೆಗೆ ಅವಕಾಶ ಸರಿಯಲ್ಲ ಎಂದ ಎಂಎಲ್‌ಸಿ
The district administration forgot the law on Dutta Jayanti at chikkamagaluru rav
Author
First Published Dec 10, 2022, 9:18 AM IST

ಚಿಕ್ಕಮಗಳೂರು (ಡಿ.10) : ಶೋಭಾಯಾತ್ರೆ ಹಾಗೂ ದತ್ತ ಜಯಂತಿ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ನಡೆದುಕೊಂಡಿರುವ ರೀತಿಗೆ ವಿಧಾನ ಪರಿಷತ್ತು ಸದಸ್ಯ ಎಸ್‌.ಎಲ್‌. ಭೋಜೇಗೌಡ ಛೀಮಾರಿ ಹಾಕಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಗಾಳಿಗೆ ತೂರಿ ಆಡಳಿತ ಪಕ್ಷದ ಕೈಗೊಂಬೆಯಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ದತ್ತಪೀಠದಲ್ಲಿ ಪೂಜೆ ನಡೆಸುವ ಸಂಬಂಧ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶನ ನೀಡಿದೆ. ಆದರೆ, ಪೀಠದ ಆವರಣದಲ್ಲಿ ಪೂಜೆ, ಹವನ ನಡೆಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಕೂಡಲೇ ಸಸ್ಪೆಂಡ್‌ ಮಾಡಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು: ಬಾಳೆಹೊನ್ನೂರಲ್ಲಿ ದತ್ತಮಾಲಾಧಾರಿಗಳ ವಾಹನ ತಪಾಸಣೆ

ದತ್ತ ಜಯಂತಿಗೆ ಸಂಬಂಧಿಸಿದಂತೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಜಿಲ್ಲೆಯ ಜನರಿಗೆ ಹೆಚ್ಚು ಅನ್ಯಾಯವಾಗಿದೆ. ಸಾಮರಸ್ಯ ಕದಡುವಲ್ಲಿ ಈ ಪಕ್ಷಗಳು ಪ್ರಮುಖ ಪಾತ್ರ ವಹಿಸಿವೆ. ಜಯಂತಿ ಸಂದರ್ಭದಲ್ಲಿ ಪೊಲೀಸ್‌ ಬಂದೋಬಸ್‌್ತಗಾಗಿ ಕೋಟ್ಯಂತರ ರು. ಸರ್ಕಾರದ ಹಣ ಖರ್ಚಾಗುತ್ತಿದೆ. ಬಂದೋಬಸ್ತಿಗೆ ರಾಜ್ಯದ ವಿವಿಧೆಡೆ ಬಂದಿರುವ ಪೊಲೀಸರ ಪೈಕಿ ಹಲವು ಮಂದಿ ಪ್ರತಿಕೂಲ ಹವಾಮಾನದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟುವರ್ಷವಾದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿವಾದವನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ದುರ್ಬಳಕೆ ಮಾಡಿಕೊಂಡು ವೋಟ್‌ ಬ್ಯಾಂಕ್‌ಗಾಗಿ ಬಳಸುತ್ತಿವೆ. ಜಿಲ್ಲೆಯಲ್ಲಿ ಅಶಾಂತಿ ಹುಟ್ಟು ಹಾಕಿವೆ. ಜಾತಿ, ಧರ್ಮದ ಹೆಸರಿನಲ್ಲಿ ದೊಂಬರಾಟ ನಡೆಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ 8 ವರ್ಷ, ಕಾಂಗ್ರೆಸ್‌ 5 ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದೆ. ಆ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಸಮದಾಯದ ಮುಖಂಡರ ಜಂಟಿ ಸಭೆ ಕರೆದು ಸಮಸ್ಯೆಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಲಿಲ್ಲ .ದೇವರು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ದುಸ್ಥಿತಿ ನಮ್ಮ ಪಕ್ಷಕ್ಕೆ ಬಂದಿಲ್ಲ. ದತ್ತಪೀಠದ ಪರಿಮಿತಿಯೊಳಗೆ ಈ ಬಾರಿ ಪೂಜೆ ಹವನ ನಡೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶಗಳಲ್ಲಿ ಏನಿದೆ ಎಂಬುದನ್ನು ಆಡಳಿತ ಪಕ್ಷ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಡಿಜೆ ಬಳಕೆ

ಯಾವುದೇ ಸಾರ್ವಜನಿಕ ಸಮಾರಂಭ ನಡೆಯಲಿ, ಧ್ವನಿವರ್ಧಕ ಬಳಕೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯಬೇಕು. ಶೋಭಾಯಾತ್ರೆ ಸಂದರ್ಭದಲ್ಲಿ ಹಲವು ವಾಹನಗಳು ಧ್ವನಿವರ್ಧಕ ಬಳಕೆ ಮಾಡಿವೆ. ಎಷ್ಟುಮೈಕ್‌ಗಳಿಗೆ ಅನುಮತಿ ನೀಡಲಾಗಿತ್ತು? ಈ ಬಗ್ಗೆ ಪೊಲೀಸ್‌ ಇಲಾಖೆ ಉತ್ತರ ನೀಡಬೇಕು ಎಂದರು.

ನಗರದ ಮುಖ್ಯರಸ್ತೆ ಮಾತ್ರವಲ್ಲ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಬಳಿ ಡಿಜೆ ಬಳಸಿದ್ದರಿಂದ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗಿದೆ. ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ಇಲ್ಲ. ಹಾಗಿದ್ದೂ ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ವಿಫಲವಾಗಿದೆ. ದ್ವಿಚಕ್ರ ವಾಹನ ಚಾಲಲರು ಹೆಲ್ಮೆಟ್‌ ಹಾಕಿ ಚಾಲನೆ ಮಾಡಬೇಕು. ಆದರೆ, ಶೋಭಾಯಾತ್ರೆ ದಿನದಂದು ಬೈಕ್‌ಗಳಲ್ಲಿ ಯುವಕರು ನಗರದಲ್ಲಿ ಸುತ್ತಾಡುತ್ತಿದ್ದರೂ ಅವರಾರ‍ಯರೂ ಹೆಲ್ಮೆಟ್‌ ಧರಿಸಿರಲಿಲ್ಲ. ಅವರ ಮೇಲೆ ಯಾವುದೇ ರೀತಿಯ ಪ್ರಕರಣ ಪೊಲೀಸ್‌ ಇಲಾಖೆ ಹಾಕಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್‌, ಮುಖಂಡರಾದ ತಿಮ್ಮಶೆಟ್ಟಿ, ಸಿ.ಕೆ. ಮೂರ್ತಿ, ದಿನೇಶ್‌, ಎ.ಸಿ. ಕುಮಾರ್‌, ಚಿದಂಬರ್‌ ಉಪಸ್ಥಿತರಿದ್ದರು.

 

ದತ್ತಪೀಠಕ್ಕೆ ಸುನೀಲ್ ಕುಮಾರ್ ಭೇಟಿ; ದತ್ತಪಾದುಕೆ ದರ್ಶನ

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಆರೇ ತಿಂಗಳಲ್ಲಿ ದತ್ತಪೀಠ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತೇನೆ. ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ

- ಎಸ್‌.ಎಲ್‌.ಭೋಜೇಗೌಡ, ಸದಸ್ಯ, ವಿಪ

Follow Us:
Download App:
  • android
  • ios