Asianet Suvarna News Asianet Suvarna News

ಬೆಂಕಿಗಾಹುತಿಯಾಗಿ ಸುಟ್ಟ ರಥಕ್ಕೂ ಸಂಸ್ಕಾರ

ದುಷ್ಕರ್ಮಿಯೊಬ್ಬನ ದುಷ್ಕೃತ್ಯಕ್ಕೆ ಆಹುತಿಯಾದ ರಥವನ್ನು ಭಕ್ತರೆಲ್ಲಾ ಸೇರಿ ಮಣ್ಣಿನಲ್ಲಿ ಮುಚ್ಚಿ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

The cremation of the Chariot which was burnt  in Tumakur snr
Author
First Published Mar 21, 2024, 9:09 AM IST

  ತುಮಕೂರು :  ದುಷ್ಕರ್ಮಿಯೊಬ್ಬನ ದುಷ್ಕೃತ್ಯಕ್ಕೆ ಆಹುತಿಯಾದ ರಥವನ್ನು ಭಕ್ತರೆಲ್ಲಾ ಸೇರಿ ಮಣ್ಣಿನಲ್ಲಿ ಮುಚ್ಚಿ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಎನ್.ಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇಗುಲದ ರಥಕ್ಕೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ ಪರಿಣಾಮ ಸುಟ್ಟು ಹೋಗಿತ್ತು. ಸುಟ್ಟು ಹೋಗಿದ್ದ ರಥವನ್ನು ಹೆಚ್ಚು ದಿನ ನಿಲ್ಲಿಸಬಾರದು ಎಂಬ ಕಾರಣದಿಂದ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸೇರಿಕೊಂಡು ಸುಟ್ಟಿರುವ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಹೋಮ ಹವನಗಳನ್ನು ನೆರವೇರಿಸಿದರು.

ತೇವಡಿಹಳ್ಳಿ ಮಠದ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಟ್ಟದಹಳ್ಳಿ ಚಂದ್ರಶೇಖರ ಸಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಣ್ಣಿನಲ್ಲಿ ಮುಚ್ಚಿ ಸಂಸ್ಕಾರ ಮಾಡಲಾಯಿತು. ರಥ ಕಲ್ಲೇಶ್ವರ ಸ್ವಾಮಿ ಜಾತ್ರೆಯನ್ನು ನಿಲ್ಲಿಸಲು ತೀರ್ಮಾನಿಸಿದ್ದ ಗ್ರಾಮಸ್ಥರು ಧಾರ್ಮಿಕ ಗುರುಗಳ ಹಾಗೂ ಸ್ವಾಮೀಜಿಗಳ ಸಲಹೆಯಂತೆ ಜಾತ್ರೆಯನ್ನು ಧಾರ್ಮಿಕವಾಗಿ ನೆರವೇರಿಸಲು ಮುಂದಾಗಿದ್ದಾರೆ.

ಕಲ್ಲೇಶ್ವರ ಸ್ವಾಮಿ ರಥ ಇಲ್ಲದೇ ಇರುವುದರಿಂದ ಗ್ರಾಮದಲ್ಲಿರುವ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ರಥ ಬಳಸಿಕೊಂಡು ಈ ಬಾರಿ ಸಂಪ್ರದಾಯ ಬದ್ಧವಾಗಿ ಜಾತ್ರೆಯನ್ನು ನಡೆಸಲಾಗುತ್ತಿದೆ. ಮುಂದಿನ ವರ್ಷದೊಳಗೆ ಅಗತ್ಯವಿರುವ ಕ್ರಮ ಕೈಗೊಂಡು ನೂತನ ರಥೋತ್ಸವವನ್ನು ಮಾಡಿಸಬೇಕಾಗಿದೆ ಎಂದು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈಗಾಗಲೇ ರಥವನ್ನು ಸುಟ್ಟ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios