ಚಿಕ್ಕಮಗಳೂರು(ಜೂ.08): ಕೋವಿಡ್‌-19 ವೈರಸ್‌ ಹಾವಳಿ ಹಿನ್ನಲೆ ಕಳೆದ ಎರಡೂವರೆ ತಿಂಗಳಿಂದ ಬಂದ್‌ ಆಗಿದ್ದ ದೇವಾಲಯಗಳು, ಹೊಟೇಲ್‌ಗಳು ಸೋಮವಾರ ಮತ್ತೆ ಓಪನ್‌ ಆಗಲಿವೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಸೇವೆ ಮುಂದುವರಿಸಲು ಭಾನುವಾರ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದುದು ಕಂಡುಬಂತು. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ 880 ದೇವಾಲಯಗಳು ಇವೆ. ಇವುಗಳನ್ನು ಸೋಮವಾರದಿಂದ ತೆರೆಯಲು ಸಾಮಾಜಿಕ ಅಂತರಕ್ಕಾಗಿ ರಿಂಗ್‌ ಗುರುತು ಮಾಡಲಾಗಿದೆ. ದೇವಾಲಯಗಳ ಸುತ್ತಮುತ್ತ ಶುಚಿಗೊಳಿಸಲಾಗಿದೆ.

ಹಿಂದು ಮತ್ತು ಮುಸ್ಲಿಂ ಸಮುದಾಯದ ಧಾರ್ಮಿಕ ಕೇಂದ್ರ ದತ್ತಪೀಠದಲ್ಲಿ ಭಕ್ತರಿಗೆ ಪ್ರವೇಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬ್ಯಾರಿಕೇಡ್‌ಗಳನ್ನು ಶುಚಿಗೊಳಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಸಾನಿಟೈಜರ್‌ ಸಿಂಪಡಣೆ ಮಾಡಲಾಗಿದೆ. ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವ ಸ್ಥಳದಲ್ಲಿ ರಿಂಗ್‌ ಗುರುತು ಮಾಡಲಾಗಿದೆ. ಭಾನುವಾರದಂದು ದತ್ತಪೀಠದ ಹೊರಭಾಗದಲ್ಲಿ ಭಕ್ತರು ಅನುಸರಿಸಬೇಕಾದ ಸೂಚನೆಗಳ ಫಲಕಗಳನ್ನು ಹಾಕಲಾಯಿತು. ಗುಹೆಯೊಳಗೆ ಪ್ರವೇಶ ಮಾಡುವ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಅಂದರೆ, ಹೂವು ಮತ್ತು ತೆಂಗಿನಕಾಯಿ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. 65 ವರ್ಷ ಮೇಲ್ಪಟ್ಟಹಾಗೂ 10 ವರ್ಷ ವಯೋಮಿತಿಯೊಳಗಿನವರಿಗೆ ಗುಹೆಯೊಳಗೆ ಬರದಂತೆ ಸೂಚನೆ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಬಳಿಕ ದೇವರ ದರ್ಶನ ಭಾಗ್ಯ..!

ಮೂಡಿಗೆರೆ ತಾಲೂಕಿನ ಕಳಸದಲ್ಲಿರುವ ದಕ್ಷಿಣಕಾಶಿ ಎಂದೇ ಖ್ಯಾತಿ ಹೊಂದಿರುವ ಶ್ರೀ ಕಳಸೇಶ್ವರ ದೇವಾಲಯ ಸೋಮವಾರ ಓಪನ್‌ ಆಗಲಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಜಿಲ್ಲೆಯ ಎಲ್ಲ ಮುಜರಾಯಿ ದೇವಾಲಯಗಳನ್ನು ತೆರೆಯಲು ಸರ್ಕಾರ ಸೂಚನೆ ನೀಡಿದೆ. ಆದರೆ, ಖಾಸಗಿ ಸಂಸ್ಥೆಗಳ ಒಡೆತನದಲ್ಲಿರುವ ಕೆಲವು ದೇವಾಲಯಗಳು ಸೋಮವಾರವೇ ಓಪನ್‌ ಆಗುವುದು ಅನುಮಾನ. ಶೃಂಗೇರಿ ಶಾರದಾಂಬೆ ದೇಗುಲ, ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ತೆರೆಯುವುದಿಲ್ಲ. ಸರ್ಕಾರದ ಮಾರ್ಗಸೂಚಿಯ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲು ಉಭಯ ದೇವಾಲಯಗಳ ಮುಖ್ಯಸ್ಥರು ನಿರ್ಧರಿಸಿದ್ದಾರೆ.

ಓಪನ್‌ಗೆ ಹೊಟೇಲ್‌ಗಳು ಸಿದ್ಧತೆ

ಸೋಮವಾರದಿಂದ ಹೊಟೇಲ್‌ಗಳು ತೆರೆಯಲು ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಎಲ್ಲ ಹೊಟೇಲ್‌ಗಳವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇಷ್ಟುದಿನ ಧೂಳು ಕುಡಿದ ಹೊಟೇಲ್‌ಗಳನ್ನು ಸ್ವಚ್ಚಗೊಳಿಸುತ್ತಿದ್ದರು. ಜನರು ಕುಳಿತುಕೊಳ್ಳಲು ಹಾಕಿದ್ದ ಟೇಬಲ್‌ಗಳನ್ನು ಸಾಮಾಜಿಕ ಅಂತರದಲ್ಲಿ ಜೋಡಿಸಿದ್ದರೆ, ಕೆಲವು ಹೊಟೇಲ್‌ಗಳಲ್ಲಿ ನಿಂತು ತಿಂಡಿ ತಿನ್ನುವ ವ್ಯವಸ್ಥೆ ಮಾಡಲಾಗಿದೆ. ಹೊಟೇಲ್‌ಗಳಲ್ಲಿ ಸದ್ಯ ಕಾರ್ಮಿಕರ ಕೊರತೆ ಇದ್ದರಿಂದ ಇವರಷ್ಟುಜನರಲ್ಲೇ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇದೆ.

ಮಸೀದಿ, ಚರ್ಚ್ ಮುಖ್ಯಸ್ಥರು ಏನಂತಾರೆ?

ದೇವಾಲಯ ಹಾಗೂ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾನಿಟೈಜರ್‌ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ. ಸರ್ಕಾರ ಮಾರ್ಗಸೂಚಿಯನ್ನು ನೋಡಿಕೊಂಡು ಮುಂದುವರಿಯಲಾಗುವುದು ಎಂದು ಮಸೀದಿಗಳ ಮುಖಂಡರು ಹಾಗೂ ಚರ್ಚ್‌ಗಳ ಮುಖ್ಯಸ್ಥರು ಹೇಳಿದ್ದಾರೆ.