ಧಾರವಾಡ(ಫೆ.05): ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಸೇರಿದಂತೆ ಹಲವು ವಿಷಯಗಳಿಗಾಗಿ ಆಗಾಗ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದೆ. ಇದಕ್ಕೆ ಪೂರಕವಾಗಿ ಧಾರವಾಡದ ಬಹುತೇಕ ಎಲ್ಲ ರೇಲ್ವೆ ಕ್ರಾಸಿಂಗ್‌ಗಳಲ್ಲಿ ಎಚ್ಚರಿಕೆಯ ನಾಮಫಲಕವನ್ನು ತೆಲಗು ಭಾಷೆಯಲ್ಲಿ ಅಳವಡಿಸಿದ್ದು ಕನ್ನಡಿಗರ ಕಂಗಣ್ಣಿಗೆ ಗುರಿಯಾಗಿದೆ.

ಇಲ್ಲಿನ ಶ್ರೀನಗರ ಸೇರಿದಂತೆ ಹೊಯ್ಸಳನಗರ ಹಾಗೂ ಅಳ್ನಾವರ ರೇಲ್ವೆ ಕ್ರಾಸಿಂಗ್‌ನಲ್ಲಿ ತೆಲಗು ಭಾಷೆಯ ನಾಮಫಲಕ ಅಳವಡಿಸಲಾಗಿದೆ. ರೇಲ್ವೆ ಹಳಿಗುಂಟ ವಿದ್ಯುತ್‌ ಲೈನ್‌ ಅಳವಡಿಸುತ್ತಿದ್ದು ಈ ಕುರಿತು ವಾಹನ ಸವಾರರಿಗೆ ಎಚ್ಚರಿಕೆ ನೀಡುವ ನಾಮಫಲಕದಲ್ಲಿ 2500 ವೋಲ್ಟ್‌ ವಿದ್ಯುತ್‌ ಹರಿಯುತ್ತಿದ್ದು ಎಚ್ಚರಿಕೆ ಎಂಬುದನ್ನು ತೆಲಗು ಭಾಷೆಯಲ್ಲಿ ಬರೆಯಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೇಲ್ವೆ ಇಲಾಖೆಯ ಈ ನೀತಿ ಖಂಡಿಸಿ ನವ ನಿರ್ಮಾಣ ಸೇನಾ ಕಾರ್ಯಕರ್ತರು ಶ್ರೀನಗರ ಬಳಿ ಕೆಲಹೊತ್ತು ಪ್ರತಿಭಟಿಸಿ ಕೂಡಲೇ ತೆಲಗು ನಾಮಫಲಕ ತೆರವುಗೊಳಿಸಲು ಆಗ್ರಹಿಸಿದರು. ರೇಲ್ವೆ ಇಲಾಖೆ ಇಂಗ್ಲಿ,, ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ನಾಮಫಲಕ ಹಾಕಬೇಕಿದ್ದು ಕರ್ನಾಟಕದಲ್ಲಿ ತೆಲಗು ಭಾಷೆಯಲ್ಲಿ ಹಾಕಿದ್ದು ದುರಂತದ ಸಂಗತಿ. ಕೂಡಲೇ ತೆರವುಗೊಳಿಸದೇ ಇದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ನವ ನಿರ್ಮಾಣ ಸೇನೆ ಅಧ್ಯಕ್ಷ ಗಿರೀಶ ಪೂಜಾರ ಎಚ್ಚರಿಸಿದ್ದಾರೆ.