ಬೆಂಗಳೂರಿನ ಹಲವು ಕಾರ್ಖಾನೆಗಳು ತ್ಯಾಜ್ಯ ಶುದ್ಧೀಕರಣ ಘಟಕ ಹೊಂದಿಲ್ಲ. ಕಾರ್ಖಾನೆಗಳು ತ್ಯಾಜ್ಯವನ್ನು ಕೆರೆಗಳು ಹಾಗೂ ವೃಷಭಾವತಿ ನದಿಗೆ ಬಿಡುಗಡೆ ಮಾಡುತ್ತಿವೆ. ಹೀಗಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ಬೆಂಗಳೂರು [ಸೆ.23]: ಒಂದು ಕಾಲದಲ್ಲಿ ಜೀವ ಕಳೆಯಿಂದ ನಗರ ಜನತೆಯ ಕುಡಿಯುವ ದಾಹ ತೀರಿದ ವೃಷಭಾವತಿ ನದಿಯ ಪುನಶ್ಚೇತನಕ್ಕಾಗಿ ಯುವ ಬ್ರಿಗೇಡ್‌ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರನ್‌ ಫಾರ್‌ ವೃಷಭಾವತಿ’ ಜನಾಂದೋಲನದ ಓಟಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ದೊಡ್ಡ ಬಸವಣ್ಣನ ಪಾದದ ಬುಡದಲ್ಲಿ ಹುಟ್ಟಿಕಾವೇರಿ ನದಿಗೆ ಸಮರ್ಪಣೆಯಾಗುತ್ತಿದ್ದ ವೃಷಭಾವತಿ ನದಿ ಈಗ ಕೆಂಗೇರಿ ಮೋರಿ ಹೆಸರಿನಲ್ಲಿ ಕೊಳಕು ಮೈದುಂಬಿಕೊಂಡು ಗಬ್ಬು ನಾರುತ್ತಿದ್ದಾಳೆ. ‘ಯೂರೋಪಿನ ಕೊಳಕು ರಾಡಿಯಾಗಿದ್ದ ‘ಥೇಮ್ಸ್‌’ ನದಿ ಮರಳಿ ಶುದ್ಧವಾಗಿ ಹರಿಯಬಹುದಾದರೆ ಬೆಂಗಳೂರಿನ ವೃಷಭಾವತಿ ಮತ್ತೆ ಜೀವಧಾರೆಯಾಗಲಾರಳೇ? ಬನ್ನಿ ನದಿ ಉಳಿಸೋಣ’ ಎಂಬ ಕರೆಗೆ ಸ್ಪಂದಿಸಿದ ಸಾವಿರಾರು ಮಂದಿ ಜಿಟಿ-ಜಿಟಿ ಮಳೆಯಲ್ಲೇ ಜಾಗೃತಿ ಓಟದಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯುವ ಬ್ರಿಗೇಡ್‌, ಶಕ್ತಿ ಕೇಂದ್ರ ಟ್ರಸ್ಟ್‌, ಸೋದರಿ ನಿವೇದಿತಾ ಪ್ರತಿಷ್ಠಾನ, ಸ್ವಾಭಿಮಾನ ಮಹಿಳಾ ಟ್ರಸ್ಟ್‌, ರೋಟರಿ ಕ್ಲಬ್‌ ಕೆಂಗೇರಿ, ವಿಜಯನಗರ ಮಹಿಳಾ ಪರಿಸರ ರಕ್ಷಣಾ ಟ್ರಸ್ಟ್‌ ಸೇರಿದಂತೆ ಹಲವಾರು ಸಂಘಟನೆಗಳು ವೃಷಭಾವತಿ ನದಿ ಉಳಿಸುವ ಸಲುವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದವು.

ಭಾನುವಾರ ಬೆಳಗ್ಗೆ ಕೆಂಗೇರಿ ಉಪನಗರದ ಗಣೇಶ ಆಟದ ಮೈದಾನದಿಂದ ಆರಂಭಗೊಂಡ 6 ಕಿ.ಮೀ. ಜಾಥಾವು ಕೆಂಗೇರಿ, ಮೈಲಸಂದ್ರ, ಆರ್‌.ವಿ. ಕಾಲೇಜು. ಜೈರಾಮ್‌ ದಾಸ್‌ ವೃತ್ತ, ವಿಶ್ವವಿದ್ಯಾಲಯದ ಮುಖ್ಯದ್ವಾರದ ಮೂಲಕ ಸಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾವೇಶಗೊಂಡಿತು. ಇದಕ್ಕೂ ಮೊದಲು ಯೋಗಾಭ್ಯಾಸ, ಬಳಿಕ ಕುಲಪತಿ ಅವರ ನಿವಾಸದ ಬಳಿ ಪರಿಸರ ಮಹತ್ವದ ಕುರಿತ ಬೀದಿ ನಾಟಕ ಪ್ರದರ್ಶಿಸಲಾಯಿತು.

ವೃಷಭಾವತಿಗೆ ಜೀವ ಕಳೆ ಬರಲಿದೆ: ಸೂಲಿಬೆಲೆ

ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಮಳೆ ನೀರು ಹಾಗೂ ಒಳಚರಂಡಿ ನೀರು ಹರಿಯಲು ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಮೂರು ವರ್ಷಗಳಲ್ಲಿ ವೃಷಭಾವತಿ ನದಿಗೆ ಜೀವ ಕಳೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಲವಾರು ಮಂದಿ ವೃಷಭಾವತಿ ಉಳಿಸಲು ಕೆಲಸ ಮಾಡಿದ್ದಾರೆ. ಆರಂಭದ ಹೆಜ್ಜೆ ಇಡುವುದೇ ನಮಗೆ ಕಷ್ಟವಾಗಿತ್ತು. ಇದೀಗ ಮೊದಲ ಹೆಜ್ಜೆಯಲ್ಲೇ ಯಶಸ್ವಿಯಾಗಿದ್ದೇವೆ ಎನಿಸುತ್ತದೆ. ಜಾಥಾದಲ್ಲಿ 18ರಿಂದ 40 ವರ್ಷದವರೇ ಹೆಚ್ಚಾಗಿ ಭಾಗವಹಿಸಿದ್ದು, ಇವರೆಲ್ಲರೂ ಮುಂದಿನ ಹೆಜ್ಜೆಗೂ ತಯಾರಾಗಿ ಬಂದಿದ್ದಾರೆ. ವೃಷಭಾವತಿ ಪುನಶ್ಚೇತನಕ್ಕೆ ದೀರ್ಘ ಹಾಗೂ ಅಲ್ಪ ಕಾಲಿಕ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅವುಗಳಂತೆ ಮುನ್ನಡೆಯುತ್ತೇವೆ ಎಂದು ಹೇಳಿದರು.

ಮನೆ ಹಾಗೂ ವಾರ್ಡ್‌ ಮಟ್ಟದಲ್ಲೆ ತ್ಯಾಜ್ಯ ಸಂಸ್ಕರಣೆಗೆ ಮುಂದಾಗಬೇಕು. ಇದರಿಂದ ಬೃಹದಾಕಾರವಾಗಿ ಬೆಳೆದು ನಿಂತಿರುವ ಕಸದ ಸಮಸ್ಯೆಗೆ ಮೂಲದಲ್ಲೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೈಗಾರಿಕೆಗಳು ತ್ಯಾಜ್ಯ ನೀರನ್ನು ನದಿಗೆ ಬಿಡದೆ ಅಗತ್ಯ ತ್ಯಾಜ್ಯ ನೀರು ಶುದ್ಧೀಕರಣ ಅಳವಡಿಸಿಕೊಂಡು ಸಂಸ್ಕರಿಸಬೇಕು ಎಂದು ಕರೆ ನೀಡಿದರು.

ನಟ ಗಣೇಶ್‌, ಅದಮ್ಯ ಚೇತನದ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್‌, ಸುವರ್ಣನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌ ಸೇರಿ ಹಲವರು ಹಾಜರಿದ್ದರು.

ಮಾಲಿನ್ಯ ನಿಯಂತ್ರಣ ಮಂಡಳಿ ಕನಣ್ಮುಚ್ಚಿಕೊಂಡಿದೆ

ಬೆಂಗಳೂರಿನ ಹಲವು ಕಾರ್ಖಾನೆಗಳು ತ್ಯಾಜ್ಯ ಶುದ್ಧೀಕರಣ ಘಟಕ ಹೊಂದಿಲ್ಲ. ಕಾರ್ಖಾನೆಗಳು ತ್ಯಾಜ್ಯವನ್ನು ಕೆರೆಗಳು ಹಾಗೂ ವೃಷಭಾವತಿ ನದಿಗೆ ಬಿಡುಗಡೆ ಮಾಡುತ್ತಿವೆ. ಹೀಗಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ವೃಷಭಾವತಿ ನದಿಯು ತಮ್ಮ ಕ್ಷೇತ್ರದಲ್ಲಿ ಹುಟ್ಟುತ್ತದೆ. ನದಿ ಪುನರುಜ್ಜೀವನ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಕೂಡಲೇ ವೃಷಭಾವತಿ ನದಿ ಅಂಚಿನಲ್ಲಿರುವ ಕೈಗಾರಿಕೆಗಳು ತ್ಯಾಜ್ಯ ನೀರನ್ನು ಹರಿಸದಂತೆ ಸಕ್ಷಮ ಪ್ರಾಧಿಕಾರಗಳು ಕ್ರಮ ವಹಿಸಬೇಕು ಎಂದು ಹೇಳಿದರು.