ಬೆಂಗಳೂರು : ಭಾರತೀಯ ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 200 ಕ್ಕೂ ಅಧಿಕ ಯುವಕರಿಂದ ಹಣ ವಸೂಲಿ ಮಾಡಿ ವಂಚಿಸುವ ತಂಡವೊಂದು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. 

ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಡನೂರು ಗ್ರಾಮದ ಸಾಗರ್ ಎಂಬುವರು ದೂರು ನೀಡಿದ್ದಾರೆ. ತನಿಖೆ ಕೈಗೆ ಎತ್ತಿಕೊಂಡಿರುವ ಪೊಲೀಸರು, ಪೂರಕ ದಾಖಲೆಗಳನ್ನು ಸೋಮವಾರದೊಳಗೆ ಸಲ್ಲಿಸುವಂತೆ ದೂರುದಾರರಿಗೆ ಸೂಚಿಸಿದ್ದಾರೆ. 

ಸೇನೆ ಸೇರಲು ಆಕಾಂಕ್ಷೆ ಹೊಂದಿದ್ದ ಸಾಗರ್ ಸೇರಿದಂತೆ ಕೆಲವು ಯುವಕರಿಗೆ ತರಬೇತಿ ನೀಡಿ ಸೈನ್ಯಕ್ಕೆ ಸೇರಿಸುತ್ತೇವೆ ಎಂದು ನಂಬಿಸಿದ ಆರೋಪಿಗಳು, ಪ್ರತಿಯೊಬ್ಬರಿಂದ ತಲಾ 2.25  ಲಕ್ಷ ವಸೂಲಿ ಮಾಡಿದ್ದಾರೆ. ಹಣ ಪಡೆದ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಕೆಲ ದಿನಗಳು ಉದ್ಯೋಗ ನಿರೀಕ್ಷೆಯಲ್ಲಿದ್ದ ಯುವಕರಿಗೆ, ಕೊನೆಗೆ ತಾವು ವಂಚನೆಗೆ ಒಳಗಾಗಿರುವ ಸಂಗತಿ ಅರಿವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

200 ಮಂದಿಗೆ ವಂಚನೆ: 2018 ರಲ್ಲಿ ಮಂಡ್ಯ ದಲ್ಲಿ ನಡೆದ ಸೇನೆ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ. ಆಗ ನನ್ನ ಸ್ನೇಹಿತರ ಸಲಹೆ ಮೇರೆಗೆ ಬೆಂಗಳೂರಿನ ಅಬ್ಬಿಗೆರೆಯ ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಪ್ರೊಪೆಷನಲ್ ಟ್ರೈನಿಂಗ್ ಸೆಂಟರ್ ಅವರನ್ನು ಸಂಪರ್ಕಿಸಿದೆ. ಆ ತರಬೇತಿ ಕೇಂದ್ರದಲ್ಲಿದ್ದ ಜೆ.ಸುನೀಲ್ ಕುಮಾರ್, ಕ್ಯಾಪ್ಟನ್ ಗೋಪಾಲ್ ಮತ್ತು ಸಂಜೀವ್ ಕುಮಾರ್ ಅವರು, ನಮ್ಮ ಸಂಸ್ಥೆಯು ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ಮುಂಬೈ, ಪಾಂಡಿಚೇರಿ ಸೇರಿದಂತೆ ಇನ್ನಿತರೆಡೆ ಶಾಖೆಗಳನ್ನು ಹೊಂದಿದೆ. ಈಗಾಗಲೇ ನಾವು 50 ವಿದ್ಯಾರ್ಥಿಗಳಿಗೆ ಸೈನ್ಯಕ್ಕೆ ಸೇರಲು ಅಗತ್ಯ  ತರಬೇತಿ ನೀಡುತ್ತಿದ್ದೇವೆ ಎಂದಿದ್ದರು. ಇಲ್ಲಿ ತರಬೇತಿಗೆ  2.25 ಲಕ್ಷ ಶುಲ್ಕ ಕಟ್ಟುವಂತೆ ಅವರು ಸೂಚಿಸಿದರು ಎಂದು ಸಾಗರ್ ದೂರಿನಲ್ಲಿ ತಿಳಿಸಿದ್ದಾರೆ.