ಬೆಂಗಳೂರು [ಜ.17]: ಶಾಲೆಯ ವೇದಿಕೆಯಲ್ಲಿ ಬಾಟಲ್‌ ಹಿಡಿದು ನೃತ್ಯ ಮಾಡಿದ್ದು ಶಿಕ್ಷಿಕಿಯರಲ್ಲ, ಸಂಘಟನೆಯೊಂದರ ಮಹಿಳೆಯರು ಎಂದು ಗೊತ್ತಾಗಿದೆ.

ನಗರದ ಸುಂಕೇನಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವೇದಿಕೆಯಲ್ಲಿ ಮಹಿಳಾ ಸಂಘಟನೆಯೊಂದು ಖಾಸಗಿ ಕಾರ್ಯಕ್ರಮಕ್ಕೆ ವೇದಿಕೆಯನ್ನು ಬಾಡಿಗೆ ಪಡೆದಿತ್ತು. ಈ ವೇಳೆ ಸಂಘಟನೆಯ ಸದಸ್ಯೆಯರು ಬಾಟಲ್‌ ಹಿಡಿದು ನೃತ್ಯ ಮಾಡಿದ್ದಾರೆ. ಇದರಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕಿಯರ ಪಾತ್ರ ಇಲ್ಲ ಎಂದು ಶಾಲೆಯವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ವರದಿ ನೀಡಿದ್ದಾರೆ.

ಅಸಭ್ಯ ನೃತ್ಯ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಘಟನೆಯಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಪಾತ್ರವಿಲ್ಲವೆಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಲಾ ವೇದಿಕೆಗಳ ಕುರಿತು ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ.

ಬಾಟಲ್ ಜೊತೆ ಅಲ್ಲಾಡ್ಸು ಹಾಡಿಗೆ ಶಿಕ್ಷಕಿಯರ ಸ್ಟೆಪ್ : ನೋಟಿಸ್...

ಖಾಸಗಿ ಕಾರ್ಯಕ್ರಮಕ್ಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ವೇದಿಕೆ ನೀಡಬಾರದಿತ್ತು. ನೀಡಿದ ಬಳಿಕವೂ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಈ ಕೆಲಸ ಮಾಡದಿದ್ದರಿಂದ ಮಹಿಳಾ ಸಂಘಟನೆ ಪ್ರದರ್ಶಿಸಿದ ನೃತ್ಯ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದರಿಂದ ಶಾಲಾ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. 

ನೋಟಿಸ್‌ಗೆ ಮುಖ್ಯ ಶಿಕ್ಷಕರು ವರದಿ ನೀಡಿದ್ದು, ಕಾರ್ಯಕ್ರಮದಲ್ಲಿ ಶಿಕ್ಷಕಿಯರು ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಕಾರ್ಯಕ್ರಮ ಆಯೋಜಿಸಿದ್ದ ಮಹಿಳಾ ಸಂಘಟನೆ ವರ್ಷದ ಕೊನೆಯ ದಿನವಾಗಿದ್ದರಿಂದ ಈ ನೃತ್ಯ ಪ್ರದರ್ಶಿಸಿದ್ದಾಗಿ ತಿಳಿಸಿ, ತಪ್ಪೊಪ್ಪಿಗೆ ಪತ್ರ ಕೂಡ ನೀಡಿದ್ದಾರೆ.