ಪ್ರಧಾನಿ ಹೋದ ಬೆನ್ನಲ್ಲೇ ಬಿದ್ದ ರಸ್ತೆ ‘ಗುಂಡಿ’: ಬಿಬಿಎಂಪಿ- ಜಲಮಂಡಳಿ ಮಧ್ಯೆ ಕಿತ್ತಾಟ ಶುರು..!
* ಜಲಮಂಡಳಿಯ ಪೈಪ್‌ಲೈನ್ ಒಡೆದು ರಸ್ತೆ ಗುಂಡಿ ಸೃಷ್ಟಿ: ಬಿಬಿಎಂಪಿ
* ನೀರಿನ ಪೈಪ್ ಒಡೆದಿಲ್ಲ: ಜಲಮಂಡಳಿ ಸ್ಪಷ್ಟನೆ
* ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಬೆಂ.ವಿವಿಯಲ್ಲಿ ಪಾಲಿಕೆಯಿಂದ ರಸ್ತೆ ದುರಸ್ತಿ
ಬೆಂಗಳೂರು(ಜೂ.25): ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಿಂದ ಮರಿಯಪ್ಪನಪಾಳ್ಯ ಮಾರ್ಗದಲ್ಲಿ ರಸ್ತೆ ಗುಂಡಿ ಬಿದ್ದಿರುವುದಕ್ಕೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಆರೋಪ-ಪ್ರತ್ಯಾರೋಪ ಶುರುವಾಗಿದೆ.
ಪ್ರಧಾನಿ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ದುರಸ್ತಿ ಮತ್ತು ಅಭಿವೃದ್ಧಿ ಪಡಿಸಿದ ರಸ್ತೆಗಳಲ್ಲಿ ಮತ್ತೆ ಬಾರೀ ಸಂಖ್ಯೆಯ ಗುಂಡಿ ಬಿದ್ದಿರುವುದಕ್ಕೆ ಪ್ರಧಾನಮಂತ್ರಿ ಕಚೇರಿಯಿಂದ ವರದಿ ಕೇಳಲಾಗಿದೆ. ಮುಖ್ಯಮಂತ್ರಿಯವರು ತನಿಖೆಗೆ ಸೂಚಿಸಿದ್ದಾರೆ. ಹೀಗಾಗಿ, ರಸ್ತೆ ಗುಂಡಿ ವಿಚಾರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದೀಗ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಗೂಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ಟಾರು ಹಾಕಿದ್ದ ರಸ್ತೆ ಈಗಲೇ ಹಾಳು..!
ಬಿಬಿಎಂಪಿ ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯಎಂಜಿನಿಯರ್ ಪ್ರಹ್ಲಾದ್ ಅವರು, ರಸ್ತೆಯಲ್ಲಿ ಗುಂಡಿ ಬೀಳಲು ಕಳಪೆ ಕಾಮಗಾರಿ ಕಾರಣವಲ್ಲ. ಜಲಮಂಡಳಿ ನೀರಿನ ಪೈಪ್ ಒಡೆದಿದ್ದರಿಂದಾಗಿ ಗುಂಡಿ ಬಿದ್ದಿದೆ. ಅದನ್ನು ಹೊರತುಪಡಿಸಿ ಕಳಪೆ ಕಾಮಗಾರಿಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಆದರೆ ಅದನ್ನು ತಳ್ಳಿ ಹಾಕಿರುವ ಜಲಮಂಡಳಿ ಹೆಚ್ಚುವರಿ ಪ್ರಧಾನ ಎಂಜಿನಿಯರ್ ಬಿ.ಸುರೇಶ್, ಮರಿಯಪ್ಪನಪಾಳ್ಯ ರಸ್ತೆಯಲ್ಲಿ ಯಾವುದೆ ರೀತಿಯಲ್ಲೂ ನೀರಿನ ಪೈಪ್ ಒಡೆದಿಲ್ಲ. ನೀರು ಸರಬರಾಜು ವೇಳೆ ಪರಿಶೀಲನೆ ನಡೆಸಲಾಗಿದ್ದು, ಜಲಮಂಡಳಿಯ ಕೊಳವೆಗಳಿಂದ ನೀರು ಸೋರಿಕೆ ಆಗುತ್ತಿಲ್ಲ. ಹೀಗಾಗಿ, ರಸ್ತೆ ಗುಂಡಿ ಬೀಳಲು ಜಲಮಂಡಳಿಯ ಪೈಪ್‌ಗಳು ಕಾರಣವಲ್ಲ ಎಂದು ಹೇಳಿದ್ದಾರೆ.
ತುಷಾರ್‌ಗೆ ಜಯರಾಮ್ ಪತ್ರ
ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಗೆ ಜಲಮಂಡಳಿಯ ಕೊಳವೆಯಲ್ಲಿ ನೀರು ಸೋರಿಕೆ ಕಾರಣ ಕೊಟ್ಟಹಿನ್ನೆಲೆಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಎನ್.ಜಯರಾಮ್ ಶುಕ್ರವಾರ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದು ರಸ್ತೆ ಗುಂಡಿ ಜಲಮಂಡಳಿ ಕಾರಣವಲ್ಲ ಎಂದಿದ್ದಾರೆ.
ಪ್ರಧಾನಿ ಕಚೇರಿಗೆ ಸಿಎಸ್ ಮೂಲಕ ವರದಿ: ಪಾಲಿಕೆ
ಪ್ರಧಾನ ಮಂತ್ರಿ ನಗರಕ್ಕೆ ಭೇಟಿ ವೇಳೆ ಅಭಿವೃದ್ಧಿಪಡಿಸಿದ ರಸ್ತೆಗಳಲ್ಲಿ ಗುಂಡಿ ಬಿದ್ದ ಬಗ್ಗೆ ತನಿಖೆ ನಡೆಸಿ ಮುಖ್ಯ ಕಾರ್ಯದರ್ಶಿಗಳ ಮೂಲಕ ವರದಿ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರು ಸಂಚರಿಸಿದ ಮಾರ್ಗಗಳಲ್ಲಿ ಡಾಂಬರೀಕರಣ ಮಾಡಿದ ರಸ್ತೆಯಲ್ಲಿ ಗುಂಡಿ ಬಿದ್ದಿಲ್ಲ. ಆ ರಸ್ತೆಗೆ ಸಮೀಪದಲ್ಲಿರುವ ಜ್ಞಾನಭಾರತಿಯಿಂದ ಮರಿಯಪ್ಪನಪಾಳ್ಯ ಮಾರ್ಗದ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ, ಪ್ರಧಾನ ಮಂತ್ರಿ ಕಚೇರಿಯು ಮಾಹಿತಿ ಕೇಳಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ತನಿಖೆಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಲು ನಿರ್ದೇಶಿಸಿದ್ದೇನೆ. ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
PM Modi visit ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ, ವರ್ಷಗಳಿಂದ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರ್!
ತೇವಾಂಶದಿಂದ ದುರಸ್ತಿ ವಿಫಲ
ಈಗಾಗಲೇ ಯೋಜನಾ ವಿಭಾಗದ ವಿಶೇಷ ಆಯುಕ್ತರು ಮತ್ತು ಬಿಬಿಎಂಪಿ ಟಿವಿಸಿಸಿ ವಿಭಾಗದ ಮುಖ್ಯ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಗುಂಡಿಯ ಕೆಳಭಾಗದಲ್ಲಿ ತೇವಾಂಶ ಇರುವ ಕಾರಣದಿಂದ ದುರಸ್ತಿ ಕಾರ್ಯ ಯಶಸ್ವಿಯಾಗಿಲ್ಲ ಎಂದು ತಿಳಿದು ಬಂದಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಮೂವರಿಗೆ ಎಂಜಿನಿಯರ್‌ಗೆ ನೋಟಿಸ್
ಈ ಸಂಬಂಧಿಸಿದಂತೆ ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಟಿ.ಬಾಲಾಜಿ, ಸಹಾಯಕ ಎಂಜಿನಿಯರ್‌ಗಳಾದ ಎಚ್.ಜೆ.ರವಿ, ಐ.ಕೆ.ವಿಶ್ವಾಸ್ ಅವರಿಗೆ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ನೋಟಿಸ್ ಜಾರಿ ಮಾಡಿದ್ದಾರೆ.