ಕೋವಿಡ್ ಕರ್ತವ್ಯಲೋಪಕ್ಕೆ ಸಸ್ಪೆಂಡಲ್ಲ, ಕಠಿಣ ಕ್ರಮ; ದಾವಣಗೆರೆ ಡಿಸಿ
ಕೊರೋನಾ ಹೋರಾಟದಲ್ಲಿ ಯಾರೇ ಕರ್ತವ್ಯ ಲೋಪ ಎಸಗಿದರೂ ಅಂತಹವರಿಗೆ ಸಸ್ಪೆಂಡ್ ಅಲ್ಲ, ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಎಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಜೂ.06): ಕೋವಿಡ್ ನಿಯಂತ್ರಿಸಲು ಪ್ರತಿಯೊಬ್ಬರೂ ಸೇನಾನಿಗಳಂತೆ ಕಾರ್ಯ ನಿರ್ವಹಿಸಬೇಕಿದ್ದು, ಯಾರೇ ಕರ್ತವ್ಯ ಲೋಪ ಎಸಗಿದರೂ ಅಂತಹವರಿಗೆ ಸಸ್ಪೆಂಡ್ ಅಲ್ಲ, ವಿಪತ್ತು ನಿರ್ವಹಣೆ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಅಧಿಕಾರಿಗಳಿಗೆ ಎಚ್ಚರಿಸಿದರು. ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾರೇ ಆಗಿದ್ದರೂ ಕರ್ತವ್ಯ ಲೋಪ ಎಸಗಿದರೆ ಸುಮ್ಮನಿರುವುದಿಲ್ಲ. ಜಿಲ್ಲೆಯಲ್ಲಿಈವರೆಗೆ 6 ಸಾವು ಸಂಭವಿಸಿದ್ದು, ಈ ಪೈಕಿ 2 ಪ್ರಕರಣಗಳಲ್ಲಿ ವೈದ್ಯರು ಕೈಮೀರಿ ಪ್ರಯತ್ನಪಟ್ಟರೂ ರೋಗಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಪ್ರಯತ್ನಪಟ್ಟೂಜೀವ ಹೋದರೆ ಏನೂ ಮಾಡಲಾಗದು ಎಂದು ಅವರು ಹೇಳಿದರು. ದಾವಣಗೆರೆ ಜಾಲಿ ನಗರ, ಹರಿಹರ ತಾ. ದೇವರ ಬೆಳಕೆರೆ ವೃದ್ಧರನ್ನು ರಕ್ಷಿಸಿಕೊಳ್ಳುವಲ್ಲಿ ಲೋಪವಾಗಿದೆ. ಜಾಲಿನಗರ ಕಂಟೈನ್‌ಮೆಂಟ್ ಝೋನ್‌ನಲ್ಲಿ ಸಕ್ರಿಯ ಸರ್ವೇಕ್ಷಣೆ ನಡೆದಿದೆ, ಆದರೂ, ಈ ವೃದ್ಧೆ ಅಸ್ವಸ್ಥರಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವರಬೆಳಕೆರೆಯ 83 ವರ್ಷದ ಅಜ್ಜಿಯನ್ನು ಅಲ್ಲಿನ ಪಿಎಚ್‌ಸಿಯಲ್ಲಿ ಜಿಲ್ಲಾಸ್ಪತ್ರೆಗೆ ಹೋಗಲು ಸೂಚಿಸಿದ್ದರೂ, ಆಸ್ಪತ್ರೆಗೆ ತಲುಪಿದ ಬಗ್ಗೆ ಫಾಲೋ ಅಪ್ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ವೈದ್ಯರ ಲೋಕವಾಗಿದ್ದು, ಇಲ್ಲಿ ಕೋವಿಡ್ ಲ್ಯಾಬ್, ಎರಡು ವೈದ್ಯಕೀಯ ಕಾಲೇಜು, ಅತ್ಯುತ್ತಮ ತಜ್ಞ ವೈದ್ಯರಿದ್ದಾರೆ. ಈವರೆಗೆ 179 ಪ್ರಕರಣಗಳ ಪೈಕಿ 6 ಬಿಡುಗಡೆ ಸೇರಿದಂತೆ 147 ಜನರು ಬಿಡುಗಡೆ ಹೊಂದಿದ್ದಾರೆ. 8 ತಿಂಗಳ ಮಗುವೂ ಸೇರಿದಂತೆ ಅನೇಕ ಹಿರಿಯರು ಚೇತರಿಸಿಕೊಂಡು, ಬಿಡುಗಡೆ ಹೊಂದಿದ್ದಾರೆ. 2.5 ತಿಂಗಳ ಮಗುವಿಗೂ ಚಿಕಿತ್ಸೆ ಮುಂದುವರಿದಿದ್ದು, ಮಗು ಚೆನ್ನಾಗಿದೆ. ಯಾರೂ ಕೋವಿಡ್ ಬಗ್ಗೆ ಭಯಪಡಬೇಕಿಲ್ಲ ಎಂದು ತಿಳಿಸಿದರು.
ಒಂದೇ ದಿನ ದೇಶದಲ್ಲಿ 10600 ಜನಕ್ಕೆ ವೈರಸ್!
ಜಿಲ್ಲಾ ಪೊಲೀಸ್ ವರಿಷ್ಟಹನುಮಂತಪ್ಪ ಮಾತನಾಡಿ, ಮನಸ್ಸು ಮಾಡಿದರೆ ಕೊರೋನಾ ಹಿಮ್ಮೆಟ್ಟಿಸುವುದು ಕಷ್ಟವಲ್ಲ. ಕ್ಷೇತ್ರಗಳಲ್ಲಿ ವೈದ್ಯರು ಇತರೆ ಸಿಬ್ಬಂದಿ ಆಸಕ್ತಿ ತೋರಿಸಿ, ಕೆಲಸ ಮಾಡಬೇಕು. ಜಾಲಿ ನಗರ ಮುಂಬೈನ ದಾರಾವಿಯಂತಹ ಪ್ರದೇಶವೇನಲ್ಲ. ಇಡೀ ಏರಿಯಾ ಸರ್ವೇ ಮಾಡಿ, ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ಕೊಂಚ ಹಿಂದೆ ಬಿದ್ದಿದೆ ಎಂದರು.
ಸರ್ವೇ ಸೇರಿ ಎಲ್ಲಾ ಕಾರ್ಯಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಆಶಾ, ವೈದ್ಯಕೀಯ ಸಿಬ್ಬಂದಿಗೆ ಎಲ್ಲಾದರೂ ಏನಾದರೂ ತೊಂದರೆಯಾದರೆ ನಿಮ್ಮ ರಕ್ಷಣೆಗೆ ನಾವಿದ್ದೇವೆ. ಶ್ರದ್ಧೆ, ನಿಷ್ಟೆಯಿಂದ ಕರ್ತವ್ಯ ನಿರ್ವಹಣೆ ಆಗಬೇಕು. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳು ಪ್ರತಿದಿನ ಬದಲಾಗುತ್ತಿರುತ್ತವೆ. ಇದನ್ನು ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗುವುದು. ಅದನ್ನು ಓದಿ, ಅಪ್‌ಡೇಟ್ ಆಗಿ, ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ಜಿಪಂ ಸಿಇಓ ಪದ್ಮಾ ಬಸವಂತಪ್ಪ, ಅಪರ ಡಿಸಿ ಪೂಜಾರ ವೀರಮಲ್ಲಪ್ಪ, ಡಿಎಚ್‌ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ.ನಾಗರಾಜ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಎಎಸ್ಪಿ ಎಂ.ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಕುಮಾರಸ್ವಾಮಿ, ನೋಡಲ್ ಅಧಿಕಾರಿ ಪ್ರಮೋದ ನಾಯಕ ಇದ್ದರು.