ಕೊಪ್ಪಳ(ಆ.26): ತುಂಗಭದ್ರಾ ಹಿನ್ನೀರು ಪ್ರದೇಶ ವ್ಯಾಪ್ತಿಯ ನೀರಿನಲ್ಲಿ ಚಕ್ಕಡಿಯನ್ನು ಹೊಡೆದುಕೊಂಡು ಹೋಗುವ ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದೆ. ಸ್ಥಳಕ್ಕೆ ತಹಸೀಲ್ದಾರ್‌ ಜೆ.ಬಿ. ಮಜ್ಜಿಗಿ ಅವರು ಭೇಟಿ ನೀಡಿ, ತಪ್ಪಿತಸ್ಥರಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ಮಾಡಿಸಿ, ಸೋಷಿಯಲ್‌ ಮೀಡಿಯಾಕ್ಕೆ ಹರಿಬಿಟ್ಟವರ ವಿರುದ್ಧ ಕ್ರಮಕ್ಕಾಗಿ ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರೆ.

ಏನಿದು ವಿವಾದ?

ಕಾತರಗಿ- ಗುಡ್ಲಾನೂರು ಗ್ರಾಮದ ಬಸಯ್ಯ ರುದ್ರಯ್ಯ ಎನ್ನುವವರು ತುಂಗಭದ್ರಾ ಹಿನ್ನೀರಿನಲ್ಲಿ ಚಕ್ಕಡಿಯನ್ನು ಹೊಡೆದುಕೊಂಡು ಹೋಗುವ ವಿಡಿಯೋ ಮಾಡಿಸಿದ್ದಾರೆ. ಅಷ್ಟೇ ಅಲ್ಲ, ನಮ್ಮ ಗೋಳು ನೋಡ್ರಪ್ಪೋ ಎಂದು ಸಹ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಜೆ.ಬಿ. ಮಜ್ಜಿಗಿ ಅವರು ಸತ್ಯಾಸತ್ಯತೆ ಪರಿಶೀಲನೆ ಮಾಡಿದ್ದಾರೆ. ಹಿನ್ನೀರಿನಲ್ಲಿನ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿ​ದೆ. ಅಲ್ಲಿ ಸುತ್ತಾಡುವುದು ತಪ್ಪು. ಈ ಕುರಿತು ಡಂಗುರ ಸಾರಿ ಜಾಗೃತಿಯನ್ನು ಮೂಡಿಸಲಾಗಿದೆ. ಇವರ ಹೊಲಕ್ಕೆ ಹೋಗಲು ಪ್ರತ್ಯೇಕ ರಸ್ತೆ ಸಹ ಇದೆ. ಹೀಗಿದ್ದಾಗ್ಯೂ ತಪ್ಪು ಸಂದೇಶ ನೀಡಿ, ಆತಂಕವನ್ನುಂಟು ಮಾಡಿರುವುದು ತಪ್ಪಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳ ತಪಾಸಣೆ ಮಾಡಿ, ಜಿಲ್ಲಾಧಿಕಾರಿಗೆ ವರದಿಯನ್ನು ಸಲ್ಲಿಸಿದ್ದಾರೆ. ಸ್ಥಳೀಯರು ಪಂಚನಾಮೆ ಬರೆಯಿಸಿಕೊಟ್ಟಿದ್ದಾರೆ. ನಮಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಎಸಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾಗಲೇ ಕೊರೋನಾ ಬಂತು: ಶಾಸಕರ ಅನುಭವದ ಮಾತಿದು..!

ಇದಾದ ಬಳಿಕ ಈ ರೀತಿಯ ವಿಡಿಯೋ ಮಾಡಿಸಿ, ವೈರಲ್‌ ಮಾಡಿ ಆತಂಕವನ್ನುಂಟು ಮಾಡಿದ ಬಸಯ್ಯ ರುದ್ರಯ್ಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಅಳವಂಡಿ ಪೊಲೀಸ್‌ ಠಾಣೆಗೆ ಮೌಖಿಕವಾಗಿ ದೂರು ನೀಡಲಾಗಿದೆ.
ಹಿನ್ನೀರಿನಲ್ಲಿ ಸಂಚಾರ ಮಾಡುವುದು ತಪ್ಪು ಮತ್ತು ಅನಿವಾರ್ಯವಲ್ಲವೇ ಅಲ್ಲ. ಹೀಗಿದ್ದರೂ ಈ ರೀತಿ ಮಾಡಿರುವುದು ವಿವಾದಕ್ಕೆ ಈಡಾಗಿರುವುದಂತು ಸತ್ಯ.