ಬೆಂಗಳೂರು [ಸೆ.09]:  ಇವರು ಬೆಂಗಳೂರು ಮಹಾನಗರ ಸಾರಿಗೆ ನಿಗಮದ(ಬಿಎಂಟಿಸಿ) ಚಾಲಕ! ಮುಖ್ಯಮಂತ್ರಿಗಳು ಸಿಟಿ ರೌಂಡ್ಸ್‌ ಮಾಡುವ ವೋಲ್ವೋ ಬಸ್‌ನ ಸಾರಥಿ. ಈವರೆಗೆ ನಾಲ್ವರು ಮುಖ್ಯಮಂತ್ರಿಗಳನ್ನು 62 ಬಾರಿ ಸಿಟಿ ರೌಂಡ್ಸ್‌ ಮಾಡಿಸಿದ್ದಾರೆ!

ಹೌದು, ಈ ಸೆಲೆಬ್ರಿಟಿಗಳ ಚಾಲಕನ ಹೆಸರು ಸೈಯದ್‌ ನೂರುಲ್ಲಾ. ಬಿಎಂಟಿಸಿಯ ಮೆಜೆಸ್ಟಿಕ್‌ನ ಘಟಕ 7ರಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಸಿಟಿ ರೌಂಡ್ಸ್‌ ವೇಳೆ ಪ್ರಯಾಣಿಸಿದ ಬಿಎಂಟಿಸಿ ವೋಲ್ವೋ ಬಸ್‌ನ ಸಾರಥ್ಯ ವಹಿಸಿದ್ದರು. ವಿಶೇಷವೆಂದರೆ, ಬಿ.ಎಸ್‌.ಯಡಿಯೂರಪ್ಪ ಅವರು ಈ ಹಿಂದೆ ನಡೆಸಿದ್ದ ಏಳು ಬಾರಿ ‘ಸಿಟಿ ರೌಂಡ್ಸ್‌’ ವೇಳೆಯೂ ಇದೇ ನೂರುಲ್ಲಾ ಬಸ್‌ನ ಚಾಲಕರಾಗಿದ್ದರು.

ಕಳೆದ 25 ವರ್ಷಗಳಿಂದ ಬಿಎಂಟಿಸಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೂರುಲ್ಲಾ ಅವರು ಉತ್ತಮ ಚಾಲಕ ಎಂಬ ಹೆಸರು ಪಡೆದಿದ್ದಾರೆ. ಸೇವಾ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಉತ್ತಮ ಚಾಲನೆಗಾಗಿ ಬೆಳ್ಳಿ ಮತ್ತು ಚಿನ್ನದ ಪದಕವನ್ನೂ ಪಡೆದಿದ್ದಾರೆ. ಮುಖ್ಯಮಂತ್ರಿಗಳ ಸಿಟಿ ರೌಂಡ್ಸ್‌ ಎಂದಾಗ ಮೊದಲು ತಲೆಗೆ ಬರುವುದು ಈ ಸೈಯದ್‌ ನೂರುಲ್ಲಾ. ಉತ್ತಮ ಚಾಲನಾ ಕೌಶಲ್ಯ ಮೈಗೂಡಿಸಿ ಕೊಂಡಿರುವುದರಿಂದ ಕ್ಲಿಷ್ಟಕರ ರಸ್ತೆಯಲ್ಲೂ ಅನಾಯಾಸವಾಗಿ ಬಸ್‌ ಚಾಲನೆ ಮಾಡುತ್ತಾರೆ. ಹಾಗಾಗಿ ಸೆಲೆಬ್ರಿಟಿಗಳು ಪ್ರಯಾಣಿಸುವ ನಿಗಮದ ಬಸ್‌ ಚಾಲನೆಗೆ ಇವರನ್ನೇ ಆಯ್ಕೆ ಮಾಡುತ್ತೇವೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.\

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ನಾನು ಪುಣ್ಯವಂತ: ಸೈಯದ್‌

‘ಈವರೆಗೆ ನಾಲ್ವರು ಮುಖ್ಯಮಂತ್ರಿಗಳ ಸಿಟಿ ರೌಂಡ್ಸ್‌ ವೇಳೆ ಬಸ್‌ ಚಲಾಯಿಸಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ 45 ಸಿಟಿ ರೌಂಡ್ಸ್‌, ಡಿ.ವಿ.ಸದಾನಂದ ಗೌಡರಿಗೆ 8, ಜಗದೀಶ್‌ ಶೆಟ್ಟರ್‌ ಅವರಿಗೆ 1 ಹಾಗೂ ಹಾಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ 8 ಬಾರಿ ಸಿಟಿ ರೌಂಡ್ಸ್‌ ವೇಳೆ ನಾನೇ ಬಸ್‌ ಚಲಾಯಿಸಿದ್ದೇನೆ. ದೊಡ್ಡ ವ್ಯಕ್ತಿಗಳನ್ನು ಬಸ್‌ನಲ್ಲಿ ಕರೆದೊಯ್ಯುವುದು ಖುಷಿ ಹಾಗೂ ಹೆಮ್ಮೆ ಎನಿಸುತ್ತದೆ. ಎಷ್ಟುಜನ ಚಾಲಕರಿಗೆ ಈ ಭಾಗ್ಯ ಸಿಗುತ್ತೆ? ಈ ವಿಚಾರದಲ್ಲಿ ನಾನು ಪುಣ್ಯವಂತ’ ಎಂದು ಚಾಲಕ ಸೈಯದ್‌ ನೂರುಲ್ಲಾ ‘ಕನ್ನಡಪ್ರಭ’ದೊಂದಿಗೆ ಸಂತಸ ಹಂಚಿಕೊಂಡರು.

 ಕೊಯ್ಲಿ ಥ್ಯಾಂಕ್ಸ್‌ ಹೇಳಿದ್ದು ಮರೆಯಲಾರೆ!

ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್‌ ತಂಡ ಬೆಂಗಳೂರಿಗೆ ಬಂದಿದ್ದಾಗ ಖಾಸಗಿ ಹೋಟೆಲ್‌ನಿಂದ ಚಿನ್ನಸ್ವಾಮಿ ಸ್ಟೇಡಿಯಂಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿತ್ತು. ಆ ಬಸ್‌ ಚಾಲನೆ ಮಾಡಿದವನು ನಾನೇ. ಆಟಗಾರರನ್ನು ಸುರಕ್ಷಿತವಾಗಿ ಮೈದಾನ ತಲುಪಿಸಿದ ಬಳಿಕ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಥ್ಯಾಂಕ್ಸ್‌ ಹೇಳಿದ್ದರು. ಈ ಘಟನೆಯನ್ನೂ ಮರೆಯಲು ಸಾಧ್ಯವಿಲ್ಲ ಎಂದು ನೂರುಲ್ಲಾ ಸ್ಮರಿಸಿದರು.