ಬೆಂಗಳೂರು [ಫೆ.29]:  ಕೌಟುಂಬಿಕ ಸಮಸ್ಯೆ ಬಗೆಹರಿಸುವುದಾಗಿ ಮಹಿಳೆಗೆ ನಿಂಬೆ ಹಣ್ಣು ಕೊಟ್ಟು ಸುಮಾರು 27 ಕೋಟಿ ರು. ವಂಚಿಸಿದ ಪ್ರಕರಣದಲ್ಲಿ ಕೋಲಾರದ ನಕಲಿ ಮಂತ್ರವಾದಿಯ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಮಮೂರ್ತಿ ನಗರ ನಿವಾಸಿ 48 ವರ್ಷದ ಮಹಿಳೆ ಕೊಟ್ಟದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಮಂತ್ರವಾದಿ ನಾಗರಾಜ್‌ನ ಬಾಮೈದ ಪೆರುಮಾಳ್‌ (40) ಹಾಗೂ ಆತನ ಸಹಚರರಾದ ದೇವರಾಜ್‌ (38), ಹೊಸೂರು ಮಂಜು (36) ಹಾಗೂ ಸಾಯಿಕೃಷ್ಣ (39) ಬಂಧಿತರು.

ಗುರುವಾರ ಬಂಗಾರಪೇಟೆಯ ಬೆಂಗನೂರು ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ನಕಲಿ ಮಂತ್ರವಾದಿ ನಾಗರಾಜ್‌ ಹಾಗೂ ಆತನ ಪತ್ನಿ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ ನಗದು ಹಣ ಮತ್ತು ಕೆಲ ದಾಖಲೆ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

48 ವರ್ಷದ ಮಹಿಳೆ ಮೂವರು ಮಕ್ಕಳೊಂದಿಗೆ ರಾಮಮೂರ್ತಿ ನಗರ ನಿವಾಸಿಯಾಗಿದ್ದು, ಆರ್ಥಿಕವಾಗಿ ಸದೃಢರಾಗಿದ್ದರು. 2009ರಲ್ಲಿ ಪತಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ರಾಜೇಶ್‌ ಎಂಬ ವ್ಯಕ್ತಿ ತಾನು ಎರಡನೇ ಹೆಂಡತಿಯ ಪುತ್ರ, ತನಗೆ ಆಸ್ತಿಯಲ್ಲಿ ಪಾಲು ಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದ್ದ. ಕೆಲಸದಾಳು ಮಂತ್ರವಾದಿ ನಾಗರಾಜ್‌ ಬಳಿ ಹೋಗುವಂತೆ ಸೂಚಿಸಿದ್ದಳು. ಪರಿಚಯಸ್ಥರೊಬ್ಬರ ಮೂಲಕ ಮಹಿಳೆ 10 ವರ್ಷದ ಹಿಂದೆ ಬಂಗಾರಪೇಟೆಯ ಸೊಲ್ಲಾಪುರದಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ಆರ್ಚಕನ ಪರಿಚಯವಾಗಿತ್ತು. ಆರೋಪಿ ನಾಗರಾಜ್‌ ದೇವರ ಹೆಸರಿನಲ್ಲಿ ಮಹಿಳೆಯನ್ನು ಹೆದರಿಸಿದ್ದ.

ನನ್ನ ಮುಂಬೈಗೆ ಕಳಿಸಬೇಡಿ: ರವಿ ಪೂಜಾರಿ ರಚ್ಚೆ!..

ಪ್ರತಿ ತಿಂಗಳ ಮೊದಲ ಶುಕ್ರವಾರ ಮಹಿಳೆಯ ಮನೆಗೆ ಹೋಗುತ್ತಿದ್ದ ಪೂಜಾರಿ ನಾಗರಾಜ್‌ ಶಾಂತಿ ಪೂಜೆ ಮಾಡುತ್ತಿದ್ದ. ಬಳಿಕ ದೇವಿ ಮೈಮೇಲೆ ಬಂದಂತೆ ನಟಿಸುತ್ತಿದ್ದ. ತಲಾ ಒಂದು ಕೆ.ಜಿ. ತೂಕದ ಮೂರು ಚಿನ್ನದ ಗಟ್ಟಿಪಡೆದುಕೊಂಡಿದ್ದ. ಎರಡನೇ ವಾರದ ಪೂಜೆ ವೇಳೆ ಆಸ್ತಿಗಳನ್ನು ತಾನು ಹೇಳುವ ವ್ಯಕ್ತಿಗೆ ಮಾರುವಂತೆ ಸೂಚಿಸಿದ್ದ. ಬೇಗೂರು, ತಾವರೆಕೆರೆ ಗ್ರಾಮದಲ್ಲಿನ ಜಮೀನನ್ನು ನಿವೇಶನವಾಗಿ ಪರಿವರ್ತಿಸಿ, ಬಳಿಕ ತನ್ನ ಪತ್ನಿ ಲಕ್ಷ್ಮಮ್ಮ, ಸಂಬಂಧಿಕ ಪೆರುಮಾಳ ಹಾಗೂ ಸಹಚರರಾದ ದೇವರಾಜ್‌, ಹೊಸೂರು ಮಂಜು ಮತ್ತು ಸಾಯಿಕೃಷ್ಣ ಎಂಬುವರ ಮೂಲಕ 10ಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿಸಿದ್ದ. ಮನೆಯಲ್ಲಿದ್ದ 5 ಕೋಟಿ ರು. ದೇವಿ ಹೆಸರಿನಲ್ಲಿ ತೆಗೆದುಕೊಂಡು ವಂಚಿಸಿದ್ದ.

ಮಕ್ಕಳಿಗೆ ವಿಚಾರ ತಿಳಿಸಿರಲಿಲ್ಲ

ಮನೆಯಲ್ಲಿ ಪೂಜೆ ಮಾಡಿಸುತ್ತಿರುವ ವಿಚಾರವನ್ನು ಸಂತ್ರಸ್ತೆ ತನ್ನ ಪುತ್ರರಿಗೆ ತಿಳಿಸಿರಲಿಲ್ಲ. ಇತ್ತೀಚೆಗೆ ಹಣಕಾಸಿನ ತೊಂದರೆಯಾದಾಗ ತಾಯಿಯನ್ನು ಮಕ್ಕಳು ಪ್ರಶ್ನಿಸಿದ್ದರು. ಆಗ ಮಂತ್ರವಾದಿಯ ವಂಚನೆಯ ಬಯಲಾಗಿದೆ. ಆತನಿಗೆ ನಗದು, ಚಿನ್ನಾಭರಣ ಕೊಟ್ಟಿದ್ದರು ಸೇರಿ ಎಲ್ಲ ವಿವರಗಳನ್ನು ಸಂತ್ರಸ್ತೆ ಡೈರಿಯಲ್ಲಿ ಬರೆದಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.