ಹೊಸಕೋಟೆ (ನ.18):  ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ, ಜನಪರ ಆಡಳಿತ ನೀಡುತ್ತಿದ್ದು ಒಂದೆರಡು ದಶಕಗಳ ಕಾಲ ಬಿಜೆಪಿ ಪಕ್ಷ ಸುಭದ್ರವಾದ ಆಡಳಿತ ನೀಡಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಹೇಳಿದರು.

ಹೊಸಕೋಟೆ ತಾಲೂಕಿನ ಚೋಳಪ್ಪನಹಳ್ಳಿ ಗ್ರಾಮದಲ್ಲಿ ಸ್ವಾಭಿಮಾನ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

ಬಿಜೆಪಿ ಒಂದು ಶಿಸ್ತಿನ ಹಾಗೂ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ, ಅವಕಾಶ ಹಾಗೂ ಜವಾಬ್ದಾರಿ ನೀಡುವ ಪಕ್ಷ. ದೇಶದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಧರ್ಮಾತೀತವಾಗಿ ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದೆ. ಕೊರೋನಾ ಸಂದರ್ಭದಲ್ಲೂ ಸಹ ಜವಾಬ್ದಾರಿಯುತವಾಗಿ ದಿನದ 24 ಗಂಟೆ ಕೆಲಸ ಮಾಡಿದೆ. ಕೊರೋನಾ ಈಗ ಅಭಿವೃದ್ದಿಗೆ ಮತ್ತಷ್ಟುವೇಗ ಪಡೆದುಕೊಳ್ಳಲಿದೆ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷ ಸ್ವಾಗತಿಸುತ್ತದೆ ಎಂದರು.

ಸಿಎಂಗಿಂತ ಮೊದಲೇ ಹೋಗಿ ಕುಂತ ಸಾಹುಕಾರ: ದಿಲ್ಲಿಯಲ್ಲಿ ಜಾರಕಿಹೊಳಿ ನಡೆ ಕುತೂಹಲ ...

ಹೊಸಕೋಟೆ ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌ ಮಾತನಾಡಿ, ಕೆಲವೇ ಪ್ರಭಾವಿಗಳ ಕಪಿಮುಷ್ಠಿಯಲ್ಲಿದ್ದ ತಾಲೂಕನ್ನು ಭೇದಿಸುವ ಮೂಲಕ ಎಂಟಿಬಿ ನಾಗರಾಜ್‌ ನಿಜವಾದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಆದ್ದರಿಂದ, ಗ್ರಾ.ಪಂ. ಚುನಾವಣೆಗಳು ಸಮೀಪಿಸುತ್ತಿದ್ದು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಸ್ವಾಭಿಮಾನಿ ಬಣ ಕೇಬಲ್‌ ಲೋಕೇಶ್‌, ರಾಜ್‌ಗೋಪಾಲ್‌, ರಮೇಶ್‌, ಕೃಷ್ಣಪ್ಪ ಸೇರಿದಂತೆ ಅವರ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೆಡಿಸಿ ಸದಸ್ಯ ವಸಂತ್‌ಕುಮಾರ್‌, ಗ್ರಾ.ಪಂ ಮಾಜಿ ಸದಸ್ಯ ಬೀರೇಶ್‌, ಮುಖಂಡರಾದ ರಾಜು, ಹರೀಶ್‌, ಅನಿಲ್‌ ರಾಜಣ್ಣ, ಚಿಕ್ಕಹುಲ್ಲೂರು ನಾಗರಾಜ್‌, ಪ್ರಪುಲ್‌ಗೌಡ ಇದ್ದರು.