ಬೆಂಗಳೂರು [ಜು.07]:  ಬಿಬಿಎಂಪಿ ಸಹಾಯಕ ಆಯುಕ್ತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ತನ್ನ ಅಮಾನತು ಆದೇಶ ರದ್ದುಪಡಿಸಿಕೊಂಡಿದ್ದು ಮಾತ್ರವಲ್ಲದೆ, ಪತ್ನಿ ಮತ್ತು ತಮ್ಮನಿಗೆ ಪಾಲಿಕೆಯಲ್ಲಿ ಕೆಲಸ ನೀಡಿದ ಆರೋಪದ ಮೇರೆಗೆ ಬಿಬಿಎಂಪಿ ದ್ವಿತೀಯ ದರ್ಜೆ ಸಹಾಯಕ ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಯನಗರ 4ನೇ ಬ್ಲಾಕ್‌ ನಿವಾಸಿ ಆನಂದ್‌ ಬಂಧಿತ. ಆರೋಪಿಯಿಂದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಹಣ ದುರ್ಬಳಕೆ ಆರೋಪದ ಮೇರೆಗೆ ಅಮಾನತುಗೊಂಡಿದ್ದ ಆನಂದ್‌, ಬೊಮ್ಮನಹಳ್ಳಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ. ಈ ಬಗ್ಗೆ ಬಿಬಿಎಂಪಿ ಸಹಾಯಕ ಆಯುಕ್ತ (ಆಡಳಿತ) ಡಾ.ಡಿ.ಬಿ.ನಟೇಶ್‌, ಆನಂದ್‌ನ ವರ್ಗಾವಣೆ ಆದೇಶವನ್ನು ಬಗ್ಗೆ ಪರಿಶೀಲಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆನಂದ್‌, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಜೂನ್‌ ತಿಂಗಳಲ್ಲಿ ಆತನ ಮೇಲೆ ಕಚೇರಿ ಹಣ ದುರ್ಬಳಕೆ ಆರೋಪ ಬಂದಿತ್ತು. ಈ ಬಗ್ಗೆ ಆಂತರಿಕ ವಿಚಾರಣೆ ನಡೆಸಿ ವರದಿ ಪಡೆದ ಸಹಾಯಕ ಆಯುಕ್ತರು, ಆನಂದ್‌ನನ್ನು ಅಮಾನುತುಗೊಳಿಸಿದ್ದರು. ಆದರೆ ಜೂ.28ರಂದು ಆನಂದ್‌, ತನಗೆ ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಕಚೇರಿಗೆ ಸಹಾಯಕ ಆಯುಕ್ತರು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿ ಅಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದ.

ಈ ಬಗ್ಗೆ ಸಹಾಯಕ ಆಯುಕ್ತರಿಗೆ ಆರೋಗ್ಯಾಧಿಕಾರಿಗಳು ವರದಿ ಕಳುಹಿಸಿದ್ದರು. ಆದರೆ ‘ತಾವು ಆನಂದ್‌ನ್ನನ್ನು ವರ್ಗಾವಣೆ ಮಾಡಿಲ್ಲ. ಆತನ ಇನ್ನೂ ಅಮಾನತಿನಲ್ಲಿದ್ದಾನೆ ಎಂದು ಹೇಳಿದ ನಟೇಶ್‌, ತಮ್ಮ ಹೆಸರಿನಲ್ಲಿ ಹೋಗಿದ್ದ ವರ್ಗಾವಣೆ ಆದೇಶವನ್ನು ಪರಿಶೀಲಿಸಿದಾಗ ದ್ವಿತೀಯ ದರ್ಜೆ ಸಹಾಯಕನ ವಂಚನೆ ಕೃತ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆನಂತರ ಆನಂದ್‌ನ ಚರಿತ್ರೆ ಕೆದಕಿದಾಗ ಮತ್ತಷ್ಟುಭಾನಗಡಿ ಬೆಳಕಿಗೆ ಬಂದಿವೆ. ಸಹಾಯಕ ಆಯುಕ್ತರ ನಕಲಿ ಸಹಿ ಮಾಡಿ, ತನ್ನ ಪತ್ನಿ ಮತ್ತು ತಮ್ಮನಿಗೆ ಬಿಬಿಎಂಪಿ ವಲಯದಲ್ಲಿ ಕೆಲಸ ಕೊಡಿಸಿದ್ದು, ಆ ಇಬ್ಬರು ಎರಡು ತಿಂಗಳ ವೇತನ ಸಹ ಪಡೆದಿದ್ದರು. ಪತ್ನಿಗೆ ನಟೇಶ್‌ ಹೆಸರಿನಲ್ಲಿ ನೇಮಕಾತಿ ಆದೇಶ ನೀಡಿದ್ದರೆ, ಸೋದರನಿಗೆ ಸಹಾಯಕ ಆಯುಕ್ತ ಲಿಂಗಮೂರ್ತಿ ಹೆಸರಿನಲ್ಲಿ ಪಾಲಿಕೆ ಉದ್ಯೋಗ ಕೊಡಿಸಿದ್ದ. ಈ ಬಗ್ಗೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸಹಾಯಕ ಆಯುಕ್ತ ನಟೇಶ್‌ ಅವರು, ಹಲಸೂರು ಗೇಟ್‌ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಐಪಿಸಿ 420 (ವಂಚನೆ) ಹಾಗೂ 466( ಪೋರ್ಜರಿ) ಸೇರಿದಂತೆ ಇನ್ನಿತರೆ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.