ಜೆಡಿಎಸ್ ಪಕ್ಷದಲ್ಲಿ ಇನ್ನೂ ಕೂಡ  ಸೂಟ್‌ ಕೇಸ್ ರಾಜಕಾರಣ ಇದೆ. ಈ ಹಿಂದೆ ಸ್ವತಃ ಜೆಡಿಎಸ್ ಸಂಸದರೇ ಈ ಬಗ್ಗೆ ಹೇಳಿದ್ದರು. ಇದರಿಂದ ಅನೇಕರು ಅಸಮಾಧಾನಗೊಂಡು ಹೊರ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೋರ್ವರು ಹೇಳಿದರು.

ಬೇಲೂರು (ಏ.19):  ಹಣವಿದ್ದವರಿಗೆ ಪುರಸಭೆ ಟಿಕೆಟ್‌ ನೀಡಿರುವುದು ಜೆಡಿಎಸ್‌ ಸೂಟ್‌ ಕೇಸ್‌ ರಾಜಕಾರಣಕ್ಕೆ ಸಾಕ್ಷಿ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ,ಶಿವರಾಂ ಹೇಳಿದರು.

ಪಟ್ಟಣದ ಹೊಸನಗರ 1ನೇ ವಾರ್ಡ್‌ ನಲ್ಲಿ ಭಾನುವಾರ ಬೇಲೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಬಿ.ಮೋಹನ್‌ ಕುಮಾರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಷ್ಠಾವಂತರಿಗೆ, ಪ್ರಾಮಾಣಿಕರಿಗೆ, ಪಕ್ಷ ನಿಷ್ಠೆ ಉಳ್ಳವರಿಗೆ ಜೆಡಿಎಸ್‌ ಪಕ್ಷದಲ್ಲಿ ಬೆಲೆಇಲ್ಲ ಎಂಬುವುದಕ್ಕೆ 20 ವರ್ಷದಿಂದ ಜೆಡಿಎಸ್‌ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದ ಡಿಬಿ ಮೋಹನ್‌ ಕುಮಾರ್‌ ಅವರಿಗೆ ಹಣಬಲವಿಲ್ಲ ಎಂಬ ಏಕೈಕ ಕಾರಣಕ್ಕೆ ಟಿಕೇಟ್‌ ತಪ್ಪಿಸಲಾಗಿದೆ. ಈ ಹಿಂದೆ ಸಂಸದ ಪ್ರಜ್ವಲ್‌ ರೇವಣ್ಣ ಹುಣಸೂರು ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿ ಸೂಟ್‌ ಕೇಸ್‌ ರಾಜಕಾರಣ ಇದೆ ಎಂದು ಹೇಳಿಕೆ ನೀಡಿದ್ದರು. ಈಗ ಪಟ್ಟಣದ ಪುರಸಭೆ ಟಿಕೆಟ್‌ ವಿಚಾರದಲ್ಲಿ ಸಂಸದರ ಹೇಳಿಕೆಯಂತೆ ಸೂಟ್‌ ಕೇಸ್‌ ರಾಜಕಾರಣ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು.

ಆನೆ ಬಲ ಬಂದಂತಾಗಿದೆ:

ನಂತರ ಮಾತನಾಡಿದ ಜಿಪಂ ಸದಸ್ಯ ಸೈಯದ್‌ ತೌಫಿಕ್‌, ಜೆಡಿಎಸ್‌ನಲ್ಲಿ ಕಳೆದ 20 ವರ್ಷದಿಂದ ಸೇವೆ ಸಲ್ಲಿಸಿದ್ದ ಡಿ.ಬಿ.ಮೋಹನ್‌ ಕುಮಾರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಆನೆ ಬಲ ಬಂದಂತಾಗಿದೆ. ಜೆಡಿಎಸ್‌ ಹಣಬಲಕ್ಕೆ ವಿರುದ್ಧವಾಗಿ 1 ನೇ ವಾರ್ಡಿನ ಜನತೆ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಮೂಲಕ ಜನಬಲ ತೋರಿಸಬೇಕು. ಪುರಸಭೆಯಲ್ಲಿ ಲೆಕ್ಕಾ​ಧಿಕಾರಿಯಾಗಿ ಲಂಚ ಪಡೆದು ಜನರಿಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಪತ್ನಿಯನ್ನು 1ನೇ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಮಾಡಿದ್ದು ಹಣವಿರುವವರಿಗೆ ಮಣೆ ಹಾಕುತ್ತಿರುವುದು ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಜೆಡಿಎಸ್‌ ಭದ್ರಕೋಟೆ ಸಾಬೀತು : ಸೂರಜ್ ರೇವಣ್ಣ ಎಂಟ್ರಿ ...

ಟಿಕೆಟ್‌ ಭರವಸೆ ನೀಡಿ ಕೈಕೊಟ್ಟರು:

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಬಿ.ಮೋಹನ್‌ ಕುಮಾರ್‌ ಮಾತನಾಡಿ, ಕಳೆದ 20 ವರ್ಷದಿಂದ ನಾನು ಜೆಡಿಎಸ್‌ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿಯ ಪುರಸಭೆ ಚುನಾವಣೆಯಲ್ಲಿ 1ನೇ ವಾರ್ಡಿಗೆ ಮೀಸಲಾತಿ ಬಂದಿದ್ದರಿಂದ ತಮ್ಮ ಪತ್ನಿಗೆ ಟಿಕೆಟ್‌ ಕೇಳಿದ್ದೆ, ಈ ಬಗ್ಗೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಅನಂತ ಸುಬ್ಬರಾಯ್‌ ಖಡಾಖಂಡಿತವಾಗಿ ನಿಮಗೆ ಟಿಕೆಟ್‌ ಎಂದು ಭರವಸೆ ನೀಡಿದ್ದರು. ಆದರೆ ಕೊನೇ ಗಳಿಗೆಯಲ್ಲಿ ತಮ್ಮ ಬಳಿ ಆರ್ಥಿಕ ಸಂಪನ್ಮೂಲ ಇಲ್ಲ ಎಂಬ ಹಿನ್ನೆಲೆಯಲ್ಲಿ ಟಿಕೆಟ್‌ ತಪ್ಪಿಸಿದ್ದಾರೆ. ಈಗಾಗಲೇ ವಾರ್ಡ್‌ನ ಮತದಾರರು ತಮ್ಮ ಪತ್ನಿ ಡಿಂಪಲ್‌ ರಾಣಿ ಅವರನ್ನು ಬೆಂಬಲಿಸಿದ್ದರು. ಟಿಕೆಟ್‌ ಕೈತಪ್ಪಿದ್ದರಿಂದ ನಿವಾಸಿಗಳ ಅಪೇಕ್ಷೆಯಂತೆ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು, 1ನೇ ವಾರ್ಡಿನಿಂದ ಈ ಬಾರಿ ಪುರಸಭೆಗೆ ಕಾಂಗ್ರೆಸ್‌ ಅಭ್ಯರ್ಥಿ ಮೀನಾಕ್ಷಿ ವೆಂಕಟೇಶ್‌ ಪುರಸಭೆ ಪ್ರವೇಶ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.