Asianet Suvarna News Asianet Suvarna News

ಕಬ್ಬು ಬೆಳೆಗಾರರ ಹೋರಾಟ: ಜೀವಂತ ರೈತನ ಕೂರಿಸಿ ಶವಯಾತ್ರೆ

ಸಿಎಂ ಮನೆಯತ್ತ ಹೊರಟಾಗ ಪೊಲೀಸರ ತಡೆ, ಬೆಂಗಳೂರಲ್ಲಿ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪ್ರಹಸನ

Sugarcane Growers Held Protest in Bengaluru grg
Author
First Published Nov 27, 2022, 9:00 AM IST

ಬೆಂಗಳೂರು(ನ.27):  ಕಬ್ಬಿನ ಬೆಳೆಗೆ ನ್ಯಾಯ ಮತ್ತು ಮೌಲ್ಯಾಧಾರಿತ ದರ (ಎಫ್‌ಆರ್‌ಪಿ) ನಿಗದಿಗೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರು ಶವಯಾತ್ರೆಗೆಂದು ರೂಪಿಸಿದ್ದ ಬೊಂಬೆಯನ್ನು ಪೊಲೀಸರು ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನೇ ಶವದ ರೂಪದಲ್ಲಿ ಕೂರಿಸಿ ಬೆಳೆಗಾರರು ಪ್ರತಿಭಟಿಸಿದರು. ಬಳಿಕ ಮೆರವಣಿಗೆಗೆ ಮುಂದಾದಾಗ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಕಬ್ಬಿನ ಬೆಳೆಗೆ ಎಫ್‌ಆರ್‌ಪಿ ನಿಗದಿಗೆ ಆಗ್ರಹಿಸಿ ಕಳೆದ ಐದು ದಿನಗಳಿಂದ ನಡೆಸುತ್ತಿರುವ ಧರಣಿ ಶನಿವಾರ ನಾನಾ ಪ್ರಹಸನಕ್ಕೆ ಕಾರಣವಾಯಿತು. ಅಣಕು ಶವಯಾತ್ರೆ ಧರಣಿಗಾಗಿ ರೈತರು ಬೊಂಬೆ ಸಿದ್ಧಪಡಿಸಿಕೊಂಡಿದ್ದರು. ಆದರೆ, ಪೊಲೀಸರು ಶವಯಾತ್ರೆಗೆ ಅನುಮತಿ ನೀಡದೆ ಬೊಂಬೆಯನ್ನು ಜಪ್ತಿ ಮಾಡಿದರು. ಇದರಿಂದ ಕುಪಿತರಾದ ಪ್ರತಿಭಟನಾಕಾರರು ರೈತನೊಬ್ಬನನ್ನು ಶವದ ರೀತಿ ಕೂರಿಸಿ ಭಜನೆ ಮಾಡಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬಳಿಕ ಮುಖ್ಯಮಂತ್ರಿಗಳ ನಿವಾಸಕ್ಕೆ ಶವಯಾತ್ರೆ ಮೆರವಣಿಗೆ ನಡೆಸಲು ಮುಂದಾದರು. ಸ್ವಾತಂತ್ರ್ಯ ಉದ್ಯಾನ ದಾಟುತ್ತಲೇ ಪೊಲೀಸರು ರೈತರನ್ನು ತಡೆದರು.

ಬೆಂಗಳೂರು: ಧರಣಿ ವೇಳೆ ಕಬ್ಬು ಬೆಳೆಗಾರನಿಂದ ಆತ್ಮಹತ್ಯೆ ಬೆದರಿಕೆ ಪ್ರಹಸನ

ಈ ಹಂತದಲ್ಲಿ ಎರಡೂ ಕಡೆ ಮಾತಿನ ಚಕಮಕಿ, ತಳ್ಳಾಟ ನಡೆಯಿತು. ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ಬಸ್‌ನಲ್ಲಿ ಮೈಸೂರು ರಸ್ತೆ ಸಿಎಆರ್‌ ಮೈದಾನಕ್ಕೆ ಕರೆದೊಯ್ದರು. ಸಂಜೆ ಬಳಿಕ ಬಿಡುಗಡೆ ಮಾಡಿದರು. ಆದರೆ, ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾಗ ವಶಕ್ಕೆ ಪಡೆದಿದ್ದನ್ನು ಖಂಡಿಸಿದ ರೈತರು ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವೊಲಿಸಿದರು.

ಎಫ್‌ಆರ್‌ಪಿ ನಿಗದಿಗೆ ಒತ್ತಾಯ:

ಧರಣಿ ವೇಳೆ ಮಾತನಾಡಿದ ಮುಖಂಡ ಕುರುಬೂರು ಶಾಂತಕುಮಾರ್‌, ಇಂದು ಸಂವಿಧಾನ ದಿನ. ಕಳೆದ ವರ್ಷ ನ. 26ರಂದು ಪ್ರಧಾನಿ ಮೋದಿ ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆ ರದ್ದುಪಡಿಸಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ರೂಪಿಸುವುದಾಗಿ ತಿಳಿಸಿದ್ದರು. ಆದರೆ, ಒಂದು ವರ್ಷವಾದರೂ ಜಾರಿಗೆ ತಂದಿಲ್ಲ. ಇದರ ವಿರುದ್ಧ ಹೋರಾಡಿದರೆ ಪೊಲೀಸರ ಮೂಲಕ ಸರ್ಕಾರ ನಮ್ಮನ್ನು ದಮನಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಕಟಾವು ಸಾಗಾಣಿಕೆ ದರ ಪ್ರತಿ ಟನ್‌ಗೆ 250 ರಿಂದ 300 ರು.ಗೆ ಏರಿಕೆಯಾಗಿದೆ. ರಸಗೊಬ್ಬರ ಡೀಸೆಲ್‌ ಬೆಲೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ನಿಗದಿಸಿರುವ ಎಫ್‌ಆರ್‌ಪಿ ದರ ನ್ಯಾಯಸಮ್ಮತವಾಗಿಲ್ಲ, ಕಬ್ಬಿನಿಂದ ಬರುವ ಇತರೆ ಉತ್ವನ್ನಗಳ ಲಾಭ ಪರಿಗಣಿಸಿ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು ಎಂದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ರಾಜ್ಯ ಉಪಾಧ್ಯಕ್ಷ ಸುರೇಶ್‌ ಪಾಟೀಲ, ಹತ್ತಳ್ಳಿ ದೇವರಾಜ್‌, ಪಿ. ಸೋಮಶೇಖರ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಬರಡನಪುರ ನಾಗರಾಜ ಸೇರಿ ಇತರರಿದ್ದರು.
 

Follow Us:
Download App:
  • android
  • ios