ರೈತರಿಗೆ ಸಂಸತದ ಸುದ್ದಿ: ಕಬ್ಬಿನ ಬಿಲ್ ರೈತರ ಖಾತೆಗೆ ಜಮಾ
ನಿರಾಣಿ ಶುಗರ್ಸ್‌ನಿಂದ ಪ್ರತಿ ಟನ್ ಕಬ್ಬಿಗೆ 2700 ರು.| ಕಬ್ಬು ಪೂರೈಸಿದ 10 ದಿನಗಳೊಳಗಾಗಿ ಮೊದಲ ಕಂತಿ ರೈತರ ಖಾತೆಗೆ: ಸಂಗಮೇಶ ನಿರಾಣಿ| 2019 ಡಿಸೆಂಬರ್ 15 ರೊಳಗಾಗಿ ಕಳಿಸಿದ ಕಬ್ಬಿನ ಬಿಲ್ಲನ್ನು ಶೀಘ್ರದಲ್ಲೆ ರೈತರ ಖಾತೆಗೆ ಜಮಾ ಮಾಡಲಾಗುವುದು|
ಮುಧೋಳ(ಡಿ.19): ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿಗೆ ಪೂರೈಸುವ ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ಮೊದಲನೇ ಕಂತು 2500 ದ್ವಿತೀಯ ಕಂತು 200 ಸೇರಿ ಒಟ್ಟು 2700 ಬೆಲೆ ನೀಡಲಾಗುವುದು ಎಂದು ನಿರಾಣಿ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಘೋಷಣೆ ಮಾಡಿದರು.
ಬುಧವಾರ ಸಂಜೆ ಸ್ಥಳೀಯ ಜಿಎಲ್‌ಬಿಸಿ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕಬ್ಬು ಬೆಳೆಗಾರರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಅಪೇಕ್ಷೆಯಂತೆ ಪ್ರಸಕ್ತ ಹಂಗಾಮಿಗೆ ಪೂರೈಸುವ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ಪ್ರಥಮ ಕಂತು 2500, ದ್ವಿತೀಯ ಕಂತು 200 ಸೇರಿದಂತೆ ಒಟ್ಟು 2700 ಬೆಲೆ ನೀಡಲು ಕಾರ್ಖಾನೆಯ ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಹೇಳಿದ ಅವರು, 2019 ನವೆಂಬರ್ 30ರೊಳಗಾಗಿ ಪೂರೈಸಿದ ಕಬ್ಬಿನ ಬಿಲ್ಲನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. 2019 ಡಿಸೆಂಬರ್ 15 ರೊಳಗಾಗಿ ಕಳಿಸಿದ ಕಬ್ಬಿನ ಬಿಲ್ಲನ್ನು ಶೀಘ್ರದಲ್ಲೆ ರೈತರ ಖಾತೆಗೆ ಜಮಾ ಮಾಡಲಾಗುವುದು. 2017-18 ಮತ್ತು 2018-19ನೇ ಹಂಗಾಮಿನ ಎಲ್ಲ ಹಳೆ ಬಾಕಿ ಹಣವನ್ನು ಕೂಡಾ ಈಗಾಗಲೇ ರೈತರ ಖಾತೆಗೆ ಜಮಾ ಮಾಡಲಾಗಿದೆ. ಇನ್ನು ಮೇಲೆ ಕಬ್ಬು ಪೂರೈಸಿ 10 ದಿನದೊಳಗೆ ಮೊದಲನೇ ಕಂತಿನ ಬಿಲ್‌ನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬರ, ಪ್ರವಾಹ, ನಿರಂತರವಾದ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬು ಬೆಳೆಗಾರರ ಸಂಘ,ರೈತ ಸಂಘ ಹಾಗೂ ರೈತ ಮುಖಂಡರ ಒತ್ತಾಯ ಹಾಗೂ ಅಪೇಕ್ಷೆಯಂತೆ ಕಾರ್ಖಾನೆಯ ಆಡಳಿತ ಮಂಡಳಿಯು ರೈತರ ನೈಜ ಸಮಸ್ಯೆಗಳನ್ನು ಅರಿತು ಅವರ ಕಷ್ಟಕ್ಕೆ ನೆರವಾಗುವ ಸದುದ್ದೇಶದಿಂದ ಸುದೀರ್ಘವಾಗಿ ಹಾಗೂ ಸೌಹಾರ್ದಯುತವಾಗಿ ಚರ್ಚಿಸಿ ಪ್ರಸಕ್ತ ಹಂಗಾಮಿಗಾಗಿ ಇಷ್ಟೊಂದು ಬೆಲೆ ಘೋಷಣೆ ಮಾಡಿದೆ ಎಂದರು.
ಇಲ್ಲಿಯವರೆಗೂ ರೈತರು ಕಡಿಮೆ ರಿಕವರಿ ಕಬ್ಬನ್ನು ಪೂರೈಸಿದರೂ ಉತ್ತಮ ಬೆಲೆಯನ್ನು ಕಾರ್ಖಾನೆಯು ನೀಡಿದೆ. ಇನ್ನು ಮೇಲೆ ಹೆಚ್ಚಿನ ರಿಕವರಿ ಇರುವ ಕಬ್ಬನ್ನು ಪೂರೈಸಿದರೆ ತಾವು ಹೆಚ್ಚಿಗೆ ಬೆಲೆ ಕೊಡಲು ಸಾಧ್ಯವಾಗುವುದು. ರೈತ ಬಾಂಧವರ ಹಿತ ಕಾಯುವ ದೃಷ್ಟಿಯಿಂದ ತೆಗೆದುಕೊಂಡ ಈ ನಿರ್ಧಾರಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂಬುದು ಕಾರ್ಖಾನೆಯ ಆಶಯವಾಗಿದೆ. ನಿರಾಣಿ ಸಕ್ಕರೆ ಕಾರ್ಖಾನೆ ರೈತರ ಕಾರ್ಖಾನೆಯಾಗಿದ್ದು, ಕಾರ್ಖಾನೆಯು ಸದೃಢವಾದರೆ, ರೈತರಿಗೆ ಹೆಚ್ಚಿನ ರೀತಿಯಲ್ಲಿ ನೆರವು ನೀಡಲು ಸಾಧ್ಯವಾಗಲಿದೆ. ರೈತ ಕುಟುಂಬಗಳಿಗಾಗಿ ಎಂ.ಆರ್.ಎನ್ (ನಿರಾಣಿ) ಆರೋಗ್ಯ ಯೋಜನೆ ಯಡಿ ಹೆಲ್ತ್ ಕಾರ್ಡಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆಯಬೇಕೆಂದರು. ಇದೇ ಸಂದರ್ಭದಲ್ಲಿ ನಿರಾಣಿ ಕಾರ್ಖಾನೆಯ ಬೆಲೆ ನಿಗದಿ ಪತ್ರವನ್ನು ರೈತ ಮುಖಂಡರಿಗೆ ಸಂಗಮೇಶ ನಿರಾಣಿ ಹಸ್ತಾಂತರಿಸಿದರು.
ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಖಂಡ ಕೆ.ಟಿ ಪಾಟೀಲ ಮಾತನಾಡಿ, ನಿರಾಣಿ ಕಾರ್ಖಾನೆಗೆ ಉತ್ತಮ ಗುಣಮಟ್ಟದ ಕಬ್ಬು ಪೂರೈಸುವುದಾಗಿ ಮತ್ತು ಎಲ್ಲ ರೀತಿಯ ಸಹಕಾರ ನೀಡುವುದಾಗಿ ರೈತರ ಪರವಾಗಿ ಆಶ್ವಾಸನೆ ನೀಡಿದರು. ರೈತರ ಬೇಡಿಕೆಗೆ ಸ್ಪಂದಿಸಿರುವ ಸಂಗಮೇಶ ನಿರಾಣಿ ಅವರನ್ನು ಕಬ್ಬು ಬೆಳೆಗಾರರ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಖಂಡರಾದ ಗೋವಿಂದಪ್ಪ ಗುಜ್ಜನ್ನವರ, ಉದಯಕುಮಾರ ಸಾರವಾಡ, ಎಸ್.ಎಸ್.ಅಕ್ಕಿಮರಡಿ, ಸುಭಾಸ ಶಿರಬೂರ, ಆರ್.ಎಂ.ಪಾಟೀಲ, ದುಂಡಪ್ಪ ಲಿಂಗರಡ್ಡಿ,ಪಾಂಡಪ್ಪ ಮಂಟೂರ, ಬಸವಂತ ಕಾಟೆ, ವಿಶ್ವನಾಥ ಉದಗಟ್ಟಿ, ಜಯವಂತ ಘೋರ್ಪಡೆ, ದುಂಡಪ್ಪ ಯರಗಟ್ಟಿ,ಹಣಮಂತ ಅಡವಿ,ರಾಜೇಂದ್ರ ಚಂದನಶಿವ, ಶೇಖರ ಗಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಐಸಿಪಿಎಲ್ ಸಕ್ಕರೆ ಕಾರ್ಖಾನೆಯಿಂದಲೂ 2700
ತಾಲೂಕಿನ ಉತ್ತೂರ ಗ್ರಾಮ ಬಳಿ ಇರುವ ಐಸಿಪಿಎಲ್ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತು ಪಡಿಸಿ ಪ್ರಸಕ್ತ ಹಂಗಾಮಿಗೆ ಪೂರೈಸುವ ಕಬ್ಬಿಗೆ ಮೊದನೇ ಕಂತು .2500 ಮತ್ತು ಎರಡನೇ ಕಂತು .200 ಸೇರಿ ಒಟ್ಟು .2700 ಬೆಲೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಖಂಡ ಉದಯಕುಮಾರ ಸಾರವಾಡ ತಿಳಿಸಿದ್ದಾರೆ. ಬುಧವಾರ ಈ ವಿಷಯ ತಿಳಿಸಿದ ಅವರು, ಐಸಿಪಿಎಲ್ ಶುಗರ್ಸ್ ಅಧಿಕಾರಿಗಳ ಜತೆ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಖಂಡರ ಜತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆಂದು ಹೇಳಿದ ಅವರು, 2018-19ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ 2250 ದರ ನೀಡಲಾಗಿತ್ತು. ಈಗ ಮತ್ತೆ ಪ್ರತಿ ಟನ್ ಕಬ್ಬಿಗೆ ರು.150 ದಂತೆ ರೈತರ ಖಾತೆಗೆ ಜಮಾ ಮಾಡಲಾಗುವುದು ರು.2250 ಮತ್ತು ರು.150 ಸೇರಿದಂತೆ ಒಟ್ಟು ರು. 2400 ಬೆಲೆ ನೀಡಿದಂತಾಗುವುದು ಎಂದು ಹೇಳಿದರು.