ಉಡುಪಿ ಮಠದ ಭಕ್ತರೆ ಇಲ್ಲೊಮ್ಮೆ ಗಮನಿಸಿ : ಇನ್ಮುಂದೆ ಈ ವಸ್ತುಗಳ ಬಳಕೆ ಇಲ್ಲ
ಪ್ರಸಿದ್ಧ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಭಕ್ತರೇ ಇಲ್ಲೊಮ್ಮೆ ಗಮನಿಸಿ
ಉಡುಪಿ [ನ.27]: ಕೃಷ್ಣಮಠದಲ್ಲಿ ಕೃಷ್ಣನಿಗೆ ನೈವೇದ್ಯ, ಭಕ್ತರಿಗೆ ಪ್ರಸಾದ, ಮಧ್ಯಾಹ್ನದೂಟ ಇತ್ಯಾದಿಗಳಲ್ಲಿ ಕಳೆದ ಕೆಲವು ದಿನಗಳಿಂದ ಸಕ್ಕರೆ ಮತ್ತು ಮೈದಾ ಬಳಕೆಯನ್ನು ನಿಲ್ಲಿಸಲಾಗಿದೆ.
ಇತ್ತೀಚೆಗೆ ಯೋಗ ಶಿಬಿರವನ್ನು ನಡೆಸಿದ ಬಾಬಾ ರಾಮ್‌ದೇವ್, ಸಕ್ಕರೆ ಮತ್ತು ಮೈದಾ ಬಳಕೆ ಆರೋಗ್ಯಕ್ಕೆ ಬಹಳ ಹಾನಿಕರ ಎಂದು ಹೇಳಿದ್ದರು. ಅವರ ಈ ಸಲಹೆಯಂತೆ ಕೃಷ್ಣ ಮಠದಲ್ಲಿ ಅವೆರಡನ್ನೂ ಬಳಸದಿರಲು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥರು ಸೂಚಿಸಿದ್ದಾರೆ.
ಶ್ರೀಕೃಷ್ಣನಿಗೆ ಸಮರ್ಪಿಸುವ ನೈವೇದ್ಯ ಹಾಗೂ ಭಕ್ತರಿಗೆ ನೀಡುವ ಪ್ರಸಾದಗಳಲ್ಲೂ ಸಕ್ಕರೆ ಮತ್ತು ಮೈದಾದಿಂದ ಮಾಡಿವ ಯಾವುದೇ ಪದಾರ್ಥಗಳಿರುವುದಿಲ್ಲ, ಭಕ್ತರಿಗೂ ಅಂತಹ ಪ್ರಸಾದ ನೀಡಲಾಗುವುದಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.
ಕೃಷ್ಣ ಮಠದಲ್ಲಿ ಹಿಂದಿನಿಂದಲೂ ವಿದೇಶಿ ಮೂಲದ ತರಕಾರಿಗಲಾದ ಟೊಮೆಟೊ, ಕ್ಯಾಬೇಜ್, ಹೂಕೋಸು, ಬೀಟ್ರೂಟ್, ಮೂಲಂಗಿ ಮೊದಲಾದ ಬಳಕೆ ಇಲ್ಲ. ಮಠಾಧೀಶರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಈ ಪಾಲನೆ ನಡೆಯುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗ ಆ ಸಾಲಿಗೆ ಸಕ್ಕರೆ ಮತ್ತು ಮೈದಾ ಸೇರ್ಪಡೆಯಾಗಿದೆ. ಮಠದಲ್ಲಿ ಸಿದ್ಧಪಡಿಸುವ ನೈವೇದ್ಯ, ಖಾದ್ಯಗಳಿಗೆ ಸಕ್ಕರೆ ಮತ್ತು ಮೈದಾದ ಬದಲಿಗೆ ಬೆಲ್ಲ ಮತ್ತು ಅಕ್ಕಿಹಿಟ್ಟು ಬಳಸಿ ಪ್ರಸಾದ ಸಿದ್ಧಪಡಿಸಲಾಗಿದೆ.
ಕಷ್ಟವಾದರೂ ಪಾಲನೆ:
ಬಾಬಾ ರಾಮದೇವ್ ಶಿಬಿರದಲ್ಲಿ ಜನರಿಗೆ ಸಕ್ಕರೆ, ಮೈದಾ ತ್ಯಜಿಸಲು ಹೇಳಿದ್ದು, ಅದನ್ನು ಮಠದಲ್ಲಿಯೂ ಪಾಲಿಸಲು ಶ್ರೀಗಳು ನಿರ್ಧರಿಸಿದರು. ಆದರೆ, ಅದನ್ನು ಒಮ್ಮೆಲೇ ಪಾಲಿಸುವುದು ಕಷ್ಟ. ಆದರೂ ಪ್ರಾಯೋಗಿಕವಾಗಿ ನಿಷೇಧಿಸಲಾಗಿದೆ. ರಾಮದೇವ್ ಸಕ್ಕರೆ ಬದಲು ಕಪ್ಪು ಬೆಲ್ಲ ಬಳಸಲು ಸೂಚಿಸಿದರು. ಅದು ರುಚಿಕರವಾಗಿದ್ದರೂ, ಅದರಿಂದ ಮಾಡಿದ ಪ್ರಸಾದ ಕಪ್ಪಾಗಿರುತ್ತದೆ. ಆದ್ದರಿಂದ ಬಿಳಿ ಬೆಲ್ಲವನ್ನು ಬಳಸಬೇಕಾಗಿದೆ. ಕೆಲವು ಸಿಹಿ ಪ್ರಸಾದಗಳಿಗೆ ಸ್ವಲ್ಪವಾದರೂ ಮೈದಾ ಹಾಕದಿದ್ದರೆ ಆಗುವುದಿಲ್ಲ. ಅಂತಹ ಸಿಹಿಗಳ ತಯಾರಿಯನ್ನೇ ನಿಲ್ಲಿಸಬೇಕಾಗಿದೆ. ವಿತರಿಸುವ ಲಡ್ಡುಗಳನ್ನು ಬೆಲ್ಲದಿಂದ ಮಾಡುವ ಬಗ್ಗೆ ಚಿಂತನೆ ಇದೆ ಎಂದು ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ ಆಚಾರ್ಯ ತಿಳಿಸಿದ್ದಾರೆ.