Asianet Suvarna News Asianet Suvarna News

ಬಾಗಲಕೋಟೆ: ಸುಡುಗಾಡ ಸಿದ್ದರ ಸಮಾವೇಶ, ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಮನವಿ

ರಾಜ್ಯದಲ್ಲಿ ಸರ್ಕಾರಗಳು ಬದಲಾದ್ರೂ ಸುಡುಗಾಡು ಸಿದ್ದರ ಜನಾಂಗದ ಬದುಕು ಮಾತ್ರ ಬದಲಾಗಿಲ್ಲ. ಹೀಗಾಗಿ ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಇರುವ ಎಲ್ಲ ತಾಲೂಕುಗಳಲ್ಲಿ ಜಾಗೃತಿ ಸಮಾವೇಶ ನಡೆಸಲು ಮುಂದಾಗಿದ್ದು, ಇವುಗಳ ಮಧ್ಯೆ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ತಾಲೂಕ ಮಟ್ಟದ ಸುಡುಗಾಡ ಸಿದ್ದರ ಸಮಾವೇಶವನ್ನ ನಡೆಸಲಾಯಿತು. 

Sudugada Sidda's Request to the Government of Karnataka to Provide Facilities in Bagalkot grg
Author
First Published Aug 9, 2023, 10:36 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ 

ಬಾಗಲಕೋಟೆ(ಆ.09): ಅವರೆಲ್ಲಾ ನಿತ್ಯ ಮಳೆ ಬರಲಿ, ಬಿಸಿಲೇ ಇರಲಿ, ಅವರಿಗೆ ಆಸರೆಯಾಗಿರೋದು ಟೆಂಟ್‌ಗಳು ಮಾತ್ರ, ಯಾಕಂದ್ರೆ ಊರೂರು ತಿರುಗುವ ಇವರಿಗೆ ಇರೋಕೆ ಶಾಶ್ವತ ನೆಲೆ ಇಲ್ಲ, ಇನ್ನು ಇವರ ತಿರುಗಾಟದಿಂದ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಸರ್ಕಾರಗಳು ಬದಲಾದರೂ ಸುಡುಗಾಡ ಸಿದ್ದರ ಜನಾಂಗದ ಬದುಕು ಮಾತ್ರ ಬದಲಾಗಿಲ್ಲ, ನಿತ್ಯದ ಬದುಕಿಗಾಗಿ ಹೆಣಗಾಡುವ ಸುಡುಗಾಡ ಸಿದ್ದರು ತಮಗೆ ಸೌಲಭ್ಯಗಳನ್ನ ನೀಡುವಂತೆ ಸರ್ಕಾರಕ್ಕೆ ಗೋಗರೆದಿದ್ದಾರೆ. ಈ ಕುರಿತ ವರದಿ ಇಲ್ಲಿದೆ...

ಒಂದೆಡೆ ಜಿಲ್ಲೆಯಲ್ಲಿ ಅಲ್ಲಲ್ಲಿ  ಕಾಣಸಿಗುವ ಟೆಂಟ್‌ಗಳು, ವಯೋವೃದ್ದರಾದಿಯಾಗಿ ಟೆಂಟ್‌ಗಳ ಮುಂದೆ ನಿಂತಿರೋ ತಾಯಂದಿರು, ವೇಷಭೂಷಣ ತೊಟ್ಟು ಊರೂರು ತಿರುಗುವ ಪುರುಷರು, ಇವುಗಳ ಮಧ್ಯೆ ಸಮಾವೇಶದ ಮೂಲಕ ಸರ್ಕಾರಕ್ಕೆ ಬೇಡಿಕೆ ಮುಂದಿಡುತ್ತಿರೋ ಮುಖಂಡರು. ಅಂದಹಾಗೆ ಇಂತಹವೊಂದು ದಯನೀಯ ಸ್ಥಿತಿ ಹೊಂದಿರೋರು ಬಾಗಲಕೋಟೆ ಜಿಲ್ಲೆಯ ನಾಗರಾಳ ಮತ್ತು ಲೋಕಾಪೂರದ ಸುಡುಗಾಡ ಸಿದ್ದರು. 

ಬಾಗಲಕೋಟೆ: ಕಬ್ಬಿಗಿಂತ ತಾಳೆ ಬೆಳೆ ಲಾಭದಾಯಕ, ಎಂಎಲ್‌ಸಿ ಪಿ.ಎಚ್.ಪೂಜಾರ

ಹೌದು, ಈ ಅಲೆಮಾರಿ ಜನಾಂಗ ಬಾಗಲಕೋಟೆ ಜಿಲ್ಲೆಯಾದ್ಯಂತ ಅಂದಾಜು 30 ರಿಂದ 40 ಸಾವಿರ ಇದ್ದು, ಶಾಶ್ವತವಾಗಿ ಮನೆ ಇಲ್ಲದೆ ನಿತ್ಯ ಊರೂರು ತಿರುಗುವುದೇ ಇವರದ್ದು ನಿತ್ಯದ ಕಾಯಕವಾಗಿದೆ. ಹೋದ ಕಡೆಗೆಲ್ಲಾ ಟೆಂಟ್ಗಳನ್ನ ಹಾಕೋದು, ಮಕ್ಕಳು ಮರಿ ಕಟ್ಟಿಕೊಂಡು ಅಲ್ಲಿಯೇ ಜೀವನ ಮಾಡೋದು ಒಂದು ಭಾಗವಾದ್ರೆ, ಈ ಜನಾಂಗದ ಗಂಡು ಮಕ್ಕಳು ಮಾತ್ರ ವಿವಿಧ ವಸ್ತುಗಳನ್ನ ಮಾರಾಟ ಮಾಡುತ್ತಾ ಹಳ್ಳಿ ಹಳ್ಳಿಗಳಿಗೆ ತಿರುಗಾಟ ಮಾಡ್ತಾರೆ. ಹೀಗಾಗಿ ಇವರ ಮಕ್ಕಳು ಇಂದು ಶಿಕ್ಷಣದಿಂದಲೂ ವಂಚಿತರಾಗೋ ಪರಿಸ್ಥಿತಿ ಎದುರಾಗಿದೆ. ಆಧುನಿಕತೆಯಲ್ಲೂ ಎಲ್ಲರಿಗೂ ವಸತಿ, ಶಿಕ್ಷಣ ಸಿಗುವಂತಹ ಇಂದಿನ ದಿನಮಾನಗಳಲ್ಲೂ ಸಹ ನಮ್ಮ ಜನಾಂಗ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿರೋದು ದುರಂತದ ಸಂಗತಿಯಾಗಿದ್ದು, ಕೂಡಲೇ ಸರ್ಕಾರ ಈ ಸಂಬಂದ ಕಾರ್ಯಪ್ರವೃತ್ತರಾಗಬೇಕು ಅಂತಾರೆ ಸಮಾಜದ ಮುಖಂಡ ಭರಮಣ್ಣ.                             

ರಾಜ್ಯಾದ್ಯಂತ ಸಮುದಾಯದ ಸಮಾವೇಶಗಳ ಮೂಲಕ ಜಾಗೃತಿ 

ಇನ್ನು ರಾಜ್ಯದಲ್ಲಿ ಸರ್ಕಾರಗಳು ಬದಲಾದ್ರೂ ಸುಡುಗಾಡು ಸಿದ್ದರ ಜನಾಂಗದ ಬದುಕು ಮಾತ್ರ ಬದಲಾಗಿಲ್ಲ. ಹೀಗಾಗಿ ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಇರುವ ಎಲ್ಲ ತಾಲೂಕುಗಳಲ್ಲಿ ಜಾಗೃತಿ ಸಮಾವೇಶ ನಡೆಸಲು ಮುಂದಾಗಿದ್ದು, ಇವುಗಳ ಮಧ್ಯೆ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ತಾಲೂಕ ಮಟ್ಟದ ಸುಡುಗಾಡ ಸಿದ್ದರ ಸಮಾವೇಶವನ್ನ ನಡೆಸಲಾಯಿತು. ಇದಕ್ಕೂ ಮುನ್ನ ಸುಡುಗಾಡ ಸಿದ್ದರು ವಿವಿಧ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ಸಮಾವೇಶದಲ್ಲಿ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಯಲ್ಲಪ್ಪ, ಬಾಗಲಕೋಟೆ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ, ಈಗಾಗಲೇ ನಿವೇಶನಕ್ಕಾಗಿಯೂ ಸಹ ನಾವು ಪ್ರಯತ್ನಿಸುತ್ತಿದ್ದು, ಇದಕ್ಕೆ ಸರ್ಕಾರವೂ ಸಹ ನಮಗೆ ಸಹಕರಿಸಿ ಶಾಶ್ವತ ಸೂರು ಕಲ್ಪಿಸಲು ಮುಂದಾಗಬೇಕು ಎಂದರು.

ಒಟ್ಟಿನಲ್ಲಿ ಶಾಶ್ವತ ಸೂರಿಲ್ಲದೆ ಊರೂರು ತಿರುಗಿ ಬದುಕು ಸಾಗಿಸುತ್ತಿರೋ ಅಲೆಮಾರಿಯ ಸುಡುಗಾಡ ಸಿದ್ದರ ಕುಟುಂಬಗಳು ಇದೀಗ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಮಾವೇಶ ಆಯೋಜಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಈ ಮೂಲಕ ಸರ್ಕಾರ ತಮ್ಮತ್ತ ಕಣ್ತೆರೆಯಲಿ ಎಂಬ ಆಶಯವನ್ನ ಹೊತ್ತಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೇ ಅಂತ ಕಾದು ನೋಡಬೇಕಿದೆ.

Follow Us:
Download App:
  • android
  • ios