ಸಿದ್ಧಾಪುರದ ಸುಮಾ ಎಂಬುವವರು ಕಮಲಾಕರ ಭಟ್ಟನಿಗೆ ಸುಚಿತ್ರಾಳನ್ನು ಪರಿಚಯ ಮಾಡಿಸಿದ್ದರು. ಶನಿಶಾಂತಿ ಪೂಜೆಯ ನೆಪದಲ್ಲಿ ಶುರುವಾದ ಈ ಸಂಬಂಧ, ಭಟ್ಟನು ತನ್ನ ಮೊದಲ ಪತ್ನಿಗೆ 50 ಲಕ್ಷ ಸೆಟಲ್ಮೆಂಟ್ ನೀಡಿ, ಸುಚಿತ್ರಾಳೊಂದಿಗೆ ದಂಪತಿಗಳಂತೆ ಹೋಮ-ಹವನಗಳಲ್ಲಿ ಭಾಗವಹಿಸುವ ಹಂತಕ್ಕೆ ತಲುಪಿತು.

ಕಮಲಾಕರ ಭಟ್‌ಗೆ ಸುಚಿತ್ರಾಳನ್ನು ಪರಿಚಯ ಮಾಡಿದ್ದೇ ಈ ಸುಮಾ; ಶನಿಶಾಂತಿ ಮಾಡಿ ಅಂದತೆ, ಶನಿಯಂತೆ ಹೆಗಲೇರಿದ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಮೂಲದ ಸುಚಿತ್ರಾ ಹಾಗೂ ಸ್ವಯಂ ಘೋಷಿತ ಸ್ವಾಮೀಜಿ ಕಮಲಾಕರ್ ಭಟ್ ಅವರ ಜೀವನದ ಹಿಂದಿನ ಕರಾಳ ಮತ್ತು ಕುತೂಹಲಕಾರಿ ಸಂಗತಿಗಳು ಇದೀಗ ಒಂದೊಂದಾಗಿ ಹೊರಬರುತ್ತಿವೆ. ಸಿದ್ಧಾಪುರದ ನಿವಾಸಿ, ಎಣ್ಣೆ ಮತ್ತು ತುಪ್ಪ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಸುಮಾ ಎಂಬುವವರು ಏಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಈ ಇಬ್ಬರ ನಡುವಿನ ಅಕ್ರಮ ಸಂಬಂಧ ಮತ್ತು ಅವರ ಹಿನ್ನೆಲೆಯ ಬಗ್ಗೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಪರಿಚಯವೇ ಮುಳುವಾಯ್ತು:

ಸುಮಾ ಅವರು ಮೊದಲು ಕಮಲಾಕರ್ ಭಟ್‌ನನ್ನು ಟಿವಿಯಲ್ಲಿ ನೋಡಿ, ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ 'ಶನಿಶಾಂತಿ' ಪೂಜೆ ಮಾಡಿಸಲು ಸಂಪರ್ಕಿಸಿದ್ದರು. ಇದಾದ ನಂತರ ಹೋಮ-ಹವನಗಳಿಗೆ ಬೇಕಾದ ಎಣ್ಣೆ ಮತ್ತು ತುಪ್ಪವನ್ನು ಸುಮಾ ಅವರಿಂದಲೇ ಭಟ್ಟ ಖರೀದಿಸುತ್ತಿದ್ದ. ಇದೇ ಸಮಯದಲ್ಲಿ ಸುಮಾ ಅವರು ತಮ್ಮೂರಿನವಳೇ ಆದ 'ಅಪ್ಪು ಮೆಲೊಡೀಸ್' ಆರ್ಕೆಸ್ಟ್ರಾ ನಡೆಸುತ್ತಿದ್ದ ಸುಚಿತ್ರಾಳನ್ನು ಭಟ್ಟನಿಗೆ ಪರಿಚಯ ಮಾಡಿಕೊಟ್ಟಿದ್ದರು. ಈ ಪರಿಚಯವೇ ಮುಂದೆ ದೊಡ್ಡ ಹಗರಣಕ್ಕೆ ನಾಂದಿಯಾಗುತ್ತದೆ ಎಂದು ಸುಮಾ ಊಹಿಸಿರಲಿಲ್ಲ.

ಕೊಲೆ ಯತ್ನ ಮತ್ತು ಸುಚಿತ್ರಾಳ ವರ್ತನೆ:

ಸುಚಿತ್ರಾಳ ಅಕ್ರಮ ಸಂಬಂಧದ ವಿಚಾರವಾಗಿ ಆಕೆಯ ಪತಿ ಮಹೇಶ್ ಈ ಹಿಂದೆ ಕೊಲೆಗೆ ಯತ್ನಿಸಿದ್ದರು. ಈ ಘಟನೆಗೆ ಸುಮಾ ಅವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಂದು ಸುಮಾ ಅವರೇ ಸುಚಿತ್ರಾಳನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದರು. ಆದರೆ ವಿಚಿತ್ರವೆಂದರೆ, ನಂತರ ಸುಚಿತ್ರಾ ತನ್ನದೇ ತಪ್ಪು ಎಂದು ಹೇಳಿ ಗಂಡನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಳು. ಮನೆಯ ಕಲಹ ಶಾಂತಿಯಾಗಲೆಂದು ಸುಮಾ ಅವರು ಸುಚಿತ್ರಾಳನ್ನು ಕಮಲಾಕರ್ ಭಟ್ ಬಳಿ ಕಳುಹಿಸಿದ್ದರು.

ಮೊದಲ ಪತ್ನಿಗೆ 50 ಲಕ್ಷ ಸೆಟಲ್ಮೆಂಟ್:

ಕಮಲಾಕರ್ ಭಟ್ ಈಗಾಗಲೇ ಸಾಗರದ ತಸ್ಮಾ ಸಾಬ್ ಎಂಬ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದ. ಆದರೆ ಸುಚಿತ್ರಾಳ ಪರಿಚಯವಾದ ಮೇಲೆ ಆಕೆಯಿಂದ ದೂರವಾಗಿದ್ದ. ಬೆಂಗಳೂರಿನ ಕಾವ್ಯ ಗೌಡ ಎಂಬವರ ಮಧ್ಯಸ್ಥಿಕೆಯಲ್ಲಿ ಬರೋಬ್ಬರಿ 50 ಲಕ್ಷ ರೂ. ನೀಡಿ ಮೊದಲ ಪತ್ನಿಗೆ ಸೆಟಲ್ಮೆಂಟ್ ಮಾಡಿದ್ದ ಎಂಬ ಆಘಾತಕಾರಿ ವಿಚಾರವನ್ನು ಸುಮಾ ಬಹಿರಂಗಪಡಿಸಿದ್ದಾರೆ. ಸುಚಿತ್ರಾಳಿಂದಲೇ ಫೋನ್ ಮಾಡಿಸಿ ಮೊದಲ ಪತ್ನಿಗೆ ಅವಾಚ್ಯವಾಗಿ ನಿಂದಿಸುವಷ್ಟು ಇವರು ಕೆಳಮಟ್ಟಕ್ಕೆ ಇಳಿದಿದ್ದರು.

ಪೂಜೆಯ ಹೆಸರಲ್ಲಿ ಅಕ್ರಮ:

ದಿನಕಳೆದಂತೆ ಭಟ್ಟ ಮತ್ತು ಸುಚಿತ್ರಾ ಹತ್ತಿರವಾದರು. ಪತಿ ಮಹೇಶ್ ಜೊತೆಗಿದ್ದಾಗ ಸಣ್ಣ ಕರಿಮಣಿ ಕೂಡ ಹಾಕದ ಸುಚಿತ್ರಾ, ಭಟ್ಟನ ಜೊತೆ ಸೇರಿದ ಮೇಲೆ ದಪ್ಪನೆಯ ಕರಿಮಣಿ ಸರ ಧರಿಸಲಾರಂಭಿಸಿದಳು. ಹೋಮಗಳಲ್ಲಿ ಇಬ್ಬರೂ ದಂಪತಿಗಳಂತೆ ಕುಳಿತು ಪೂರ್ಣಾಹುತಿ ನೀಡುತ್ತಿದ್ದರು. ಈ ಬಗ್ಗೆ ಸುಮಾ ಪ್ರಶ್ನಿಸಿದಾಗ "ಆಕೆ ಪೂಜೆಗಾಗಿ 5,000 ರೂ. ನೀಡಿದ್ದಾಳೆ" ಎಂದು ಭಟ್ಟ ಹಾರಿಕೆಯ ಉತ್ತರ ನೀಡುತ್ತಿದ್ದ. ಸುಚಿತ್ರಾ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ವಿಲಕ್ಷಣ ರೀಲ್ಸ್‌ಗಳಿಗೆ ಭಟ್ಟನ ಪೂರ್ಣ ಬೆಂಬಲವಿತ್ತು. ಸುಮಾ ಅವರು ಭಟ್ಟನಿಗೆ ಎಚ್ಚರಿಕೆ ನೀಡಿದ್ದರೂ ಸಹ, ಆತ ಸುಮಾ ಅವರಿಗೇ ಬೈಯುವಂತೆ ಸುಚಿತ್ರಾಳನ್ನು ಪ್ರಚೋದಿಸುತ್ತಿದ್ದ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.