ತಿಪಟೂರಲ್ಲಿ ಸರ್ಕಾರಿ ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವ ರಾಜ್ಯದ ಜನತೆಗೆ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ನಾರಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿಕೊಟ್ಟಿದೆ. ಇದರಿಂದ ಬಸ್‌ಗಳು ಬಂದರೂ ತುಂಬಾ ರಶ್‌ ಇರುವ ಕಾರಣ ವಿದ್ಯಾರ್ಥಿಗಳು ಬಸ್‌ ಹತ್ತಲಾಗದೆ ಪರದಾಡುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

Students protest for government bus in Tiptoor snr

 ತಿಪಟೂರು :  ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವ ರಾಜ್ಯದ ಜನತೆಗೆ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ನಾರಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿಕೊಟ್ಟಿದೆ. ಇದರಿಂದ ಬಸ್‌ಗಳು ಬಂದರೂ ತುಂಬಾ ರಶ್‌ ಇರುವ ಕಾರಣ ವಿದ್ಯಾರ್ಥಿಗಳು ಬಸ್‌ ಹತ್ತಲಾಗದೆ ಪರದಾಡುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

ನಗರದಲ್ಲಿಯೇ ಕೆಎಸ್‌ಆರ್‌ಟಿಸಿ ಡಿಪೋ ಇದ್ದರೂ ತಾಲೂಕಿನಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಅವ್ಯವಸ್ಥೆ ಹೇಳತೀರದಾಗಿದ್ದು, ಇದರ ನಡುವೆ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಮಹಿಳೆಯರೇ ಬಸ್‌ಗಳಲ್ಲಿ ಹೆಚ್ಚು ತುಂಬಿ ತುಳುಕುತ್ತಿದ್ದಾರೆ. ಎಕ್ಸ್‌ಪ್ರೆಸ್‌ ಹಾಗೂ ಸೆಟಲ್‌ ಬಸ್‌ಗಳು ಸಹ ತುಂಬಿ ತುಳುಕುತ್ತಿರುತ್ತವೆ. ಮಹಿಳೆಯರು ಮೊದಲೆಲ್ಲಾ ಆಟೋ, ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಈಗ ಉಚಿತ ಪ್ರಯಾಣದಿಂದ ತಡವಾದರೂ ಪರವಾಗಿಲ್ಲ ಹಣ ಉಳಿತಾಯವಾಗುತ್ತದೆ ಎಂದು ಸಾರಿಗೆ ಬಸ್ಸನ್ನೇ ಕಾಯುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಬಸ್‌ ಬಂದರೂ ಹತ್ತುವುದಕ್ಕೆ ಆಗುತ್ತಿಲ್ಲ. ಕೆಲ ಮಹಿಳೆಯರಂತೂ ವಿದ್ಯಾರ್ಥಿಗಳೂ ಎನ್ನದೆ ಅವರನ್ನೂ ನೂಕಿ ಹತ್ತಿಬಿಡುತ್ತಾರೆ. ಇದರಿಂದ ಬಸ್‌ಗಳಲ್ಲಿ ಗಲಾಟೆಗಳು ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲಾಗದೆ ನಿತ್ಯ 30-50 ರು. ಹಣ ಕೊಟ್ಟು ಆಟೋಗಳಿಗೆ ಹೋಗುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಿ: ಶಾಲಾ-ಕಾಲೇಜುಗಳು ಬೆಳಗ್ಗೆ 7ರಿಂದ 10 ಗಂಟೆಯವರೆಗೆ ತೆರೆಯುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ. ಆದರೆ ಈ ಸಮಯದಲ್ಲಿ ಬಸ್‌ಗಳಿಲ್ಲದೆ ತೀವ್ರ ತೊಂದರೆಯಾಗಿದೆ. ತಿಪಟೂರಿನಲ್ಲಿ ಡಿಪೋ ಇದ್ದರೂ ತಾಲೂಕಿನಾದ್ಯಂತ ಬಸ್‌ಗಳ ವ್ಯವಸ್ಥೆ ಸರಿಯಿಲ್ಲ. ವಿದ್ಯಾರ್ಥಿಗಳಂತೂ ಬೆಳಗ್ಗೆ ಮತ್ತು ಸಂಜೆ ಬಸ್‌ಗಳಿಲ್ಲದೆ ರಾತ್ರಿಯೆಲ್ಲಾ ಪರದಾಡುವಂತಾಗಿದೆ. ಚಿಕ್ಕ-ಚಿಕ್ಕ ಮಕ್ಕಳು ವಿವಿಧ ಶಾಲೆಗಳಿಗೆ ಬರುತ್ತಿದ್ದು ಸಮಯಕ್ಕೆ ಸರಿಯಾಗಿ ಮನೆ ಸೇರಿಕೊಳ್ಳಲಾಗುತ್ತಿಲ್ಲ. ಸಂಜೆ 4 ಗಂಟೆಗೆ ಶಾಲೆಗಳನ್ನು ಬಿಟ್ಟರೆ ಮನೆಗೆ 7 ಗಂಟೆಗೆ ಬರುತ್ತಾರೆಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಮಹಿಳೆಯರ ಉಚಿತ ಪ್ರಯಾಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದ್ದು, ಕೂಡಲೇ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಹೋಗುವಂತೆ ಮಾಡಬೇಕಿದೆ. ಈ ಬಗ್ಗೆ ಶಾಸಕರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನಹರಿಸಬೇಕು. ಇಲ್ಲವಾದಲ್ಲಿ ತಿಪಟೂರು ಡಿಪೋ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ದಿನ ತಿಪಟೂರಿನಿಂದ ತುರುವೇಕೆರೆಗೆ 16 ಎಕ್ಸ್‌ಪ್ರೆಸ್‌ ಹಾಗೂ 30ಕ್ಕೂ ಹೆಚ್ಚು ಲೋಕಲ್‌ ಟ್ರಿಪ್‌ ಸಾರಿಗೆ ಬಸ್‌ಗಳು ಓಡಾಡುತ್ತವೆ. ಆದರೆ ತುರುವೇಕೆರೆಯಿಂದ ತಿಪಟೂರಿಗೆ ಬಸ್‌ ಕೊರತೆ ಇದ್ದರೆ ಅದು ತುರುವೇಕೆರೆ ಡಿಪೋಗೆ ಸಂಬಂಧಪಟ್ಟದ್ದು. ಈ ಸಮಸ್ಯೆಯನ್ನು ತುರುವೇಕೆರೆ ಡಿಪೋ ವ್ಯವಸ್ಥಾಪಕರನ್ನೇ ವಿಚಾರಿಸಬೇಕು. ತಿಪಟೂರು ತಾಲೂಕಿನಲ್ಲಿ ಎಲ್ಲಿಯೂ ಬಸ್‌ಗಳ ಕೊರತೆ ಇಲ್ಲ. ಕೆಲವು ಕಡೆ ಹೊಸದಾಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ನಮ್ಮ ಡಿಪೋಗೆ ಸಂಬಂಧಿಸಿದಂತೆ ಬಸ್‌ ಕೊರತೆ ಇದ್ದರೆ ಸರಿಪಡಿಸುತ್ತೇವೆ.

ರವಿಶಂಕರ್‌ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಡಿಪೋ ತಿಪಟೂರು.

ಶಾಲಾ-ಕಾಲೇಜುಗಳು ಬೆ.9ಕ್ಕೆ ಪ್ರಾರಂಭವಾಗುವುದರಿಂದ ಬೆ.7ಗಂಟೆಗೆಲ್ಲ ಮನೆ ಬಿಟ್ಟು ಸರಿಯಾಗಿ ತಿಂಡಿಯನ್ನೂ ತಿನ್ನದೆ ಬಸ್ಸಿಗಾಗಿ ಕಾಯುತ್ತಾ ಕುಳಿತರೂ ಸಮಯಕ್ಕೆ ಸರಿಯಾಗಿ ಬಸ್‌ಗಳು ಬರಲ್ಲ. ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯ ಕೊಟ್ಟು ಈಗ ಬಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದಂತೆ ಕಾಣುತ್ತಿದೆ. ಪ್ರತಿನಿತ್ಯ ಕಾಲೇಜಿಗೆ ತಡವಾಗಿ ಹೋಗುವಂತ ಪರಿಸ್ಥಿತಿ ಎದುರಾಗಿದೆ. ಬಸ್‌ಪಾಸ್‌ ಮಾಡಿಸಿದ್ದರೂ ಸಹ ಖಾಸಗಿ ಆಟೋಗಳಿಗೆ ಅಥವಾ ಖಾಸಗಿ ವ್ಯಾನ್‌ಗಳಿಗೆ 30-50 ರುಪಾಯಿ ನೀಡಿ ಹೋಗಬೇಕಾಗಿದೆ.

Latest Videos
Follow Us:
Download App:
  • android
  • ios