ಹರಪನಹಳ್ಳಿಯ ಎಚ್.ಎಂ. ಏಕೋರಾಮರಾಧ್ಯ ಪ್ರೌಢಶಾಲೆಯ 1983-84ನೇ ಸಾಲಿನ ವಿದ್ಯಾರ್ಥಿಗಳು 'ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ' ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಗುರುಗಳನ್ನು ಸನ್ಮಾನಿಸಿ, ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದರು. ತೆಗ್ಗಿನಮಠದ ಶ್ರೀಗಳು ಗುರುವಿನ ಮಹತ್ವವನ್ನು ಸಾರಿದರು.

ವಿಜಯನಗರ: ಗುರು ಎಂದರೆ ಬೆಳಕು. ಜ್ಞಾನದ ಸ್ವರೂಪ. ಸೂರ್ಯ ಉದಯವಾದಾಗ ಕತ್ತಲೆ ಕರಗುವಂತೆ ಗುರುವಿನ ಜ್ಞಾನದ ಅನುಗ್ರಹದಿಂದ ಬೆಳಕು ಲಭಿಸಲಿದೆ ಎಂದು ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ಮೇಗಳಪೇಟೆಯ ಟಿಎಂಎಇ ಸಂಸ್ಥೆಯ ಎಚ್.ಎಂ. ಏಕೋರಾಮರಾಧ್ಯ ಪ್ರೌಢಶಾಲೆಯ 1983-84ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

1983-84ನೇ ಸಾಲಿನ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ಬಾಲ್ಯದಲ್ಲಿ ಅವರಿಗೆ ವಿದ್ಯೆ ಕಲಿಸಿದ ಗುರು ಮತ್ತು ಶಾಲೆಯನ್ನು ಮರೆಯಬಾರದು. ತಾವು ಓದಿದ ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಬೇಕು. ಟಿಎಂಎಇ ಶಿಕ್ಷಣ ಸಂಸ್ಥೆಯ ಮೂಲಕ 68ಕ್ಕೂ ಅಧಿಕ ವಿದ್ಯಾಕೇಂದ್ರಗಳನ್ನು ಹೊಂದಿರುವ ಕೀರ್ತಿ ನಮ್ಮ ಸಂಸ್ಥೆಗಿದೆ ಎಂದು ನುಡಿದರು.

ತೆಗ್ಗಿನಮಠ ಸಂಸ್ಥಾನದ ಆಡಳಿತಾಧಿಕಾರಿ ಡಾ.ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳನ್ನು ಅಭಿನಂಧಿಸುವ ಮೂಲಕ ಮೌಲ್ಯ, ಸಂಸ್ಕಾರವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಭಾವನೆ ಸದಾ ನಮ್ಮೊಡನೆ ಇರುತ್ತದೆ. ಹಿರಿಯ ವಿದ್ಯಾರ್ಥಿಗಳು ಓದಿದ ಶಾಲೆಯ ಬೆಳವಣಿಗೆಗೆ ಪೂರಕವಾಗಿ ಸದಾ ನೆರವಾಗಬೇಕು ಎಂದರು.

ಹಳೆಯ ವಿದ್ಯಾರ್ಥಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸ್ನೇಹ ಸಮ್ಮಿಲನದ ಹೆಸರಿನಲ್ಲಿ ಗೆಳೆಯರೆಲ್ಲ ಒಂದೆಡೆ ಸೇರಿರುವುದು ಹಬ್ಬದ ಸಂಭ್ರಮದಂತೆ ಕಾಣುತ್ತಿದೆ. ಇತ್ತೀಚೆಗೆ ಸಂಸ್ಕಾರ ಕಡಿಮೆಯಗುತ್ತಿದ್ದು, ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣ ಅಗತ್ಯವಿದೆ ಎಂದರು.

ಎಂ.ವಿ. ಲಿಂಗನಗೌಡ,ಕೆ, ಶಂಭುಲಿಂಗಪ್ಪ, ಮಟ್ಟಿ ಚಂದ್ರಪ್ಪ, ಸಿ.ಎಂ.ಕೊಟ್ರಯ್ಯ ಅವರು ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಿಕ್ಷಕರಿಗೆ ಪಟ್ಟಣದ ಈಶ್ವರ ದೇವಾಲಯದಿಂದ ಶಾಲಾ ಆವರಣದವರೆಗೆ ವಾದ್ಯಗಳ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ರಾಜೇಶ್, ಎಂಜಿನಿಯರ್ ಕಂಬಟ್ರಳ್ಳಿ ಸಣ್ಣ ಕೆಂಚಪ್ಪ, ಉಪನ್ಯಾಸಕ ಕೊಟ್ರೇಶ್, ಟಿ.ಎಂ. ವೀರಯ್ಯ, ಬಿ.ವೀರಣ್ಣ, ಕೆ.ದಯಾನಂದ, ಪಟ್ನಾಮದ ನಾಗರಾಜ್ ಮಾತನಾಡಿದರು. ಈ ವೇಳೆ 1983-84ನೇ ಸಾಲಿನಲ್ಲಿದ್ದ ಶಿಕ್ಷಕರು ಮತ್ತು ಸ್ನೇಹಿತರ ನಿಧನವನ್ನ ನೆನೆದು ಮೌನಾಚರಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಪುಷ್ಪಲತಾ, ಜೆ.ಸಿದ್ದೇಶ್, ಫಕೀರಯ್ಯ, ಮಂಜುನಾಥ್, ರವೀಂದ್ರ, ರೇಖಾಪ್ಪ ಸೇರಿದಂತೆ 1983-84ನೇ ಸಾಲಿನ ವಿದ್ಯಾರ್ಥಿಗಳು ಇದ್ದರು.