ಪದವಿ ದಾಖಲಾತಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ
ಕೊರೋನಾ ಮಹಾಮಾರಿ ಅಟ್ಟಹಾಸದಿಂದ ಶಿಕ್ಷಣ ವ್ಯವಸ್ಥೆಯೂ ಬುಡಮೇಲಾಗಿದೆ. ಶಾಲಾ ಕಾಲೇಜುಗಳು ಮುಚ್ಚಿ 5 ತಿಂಗಳುಗಳೇ ಕಳೆದಿವೆ. ಇದೀಗ ಮತ್ತೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಆದರೆ ದಾಖಲಾಗುವ ವಿದ್ಯಾರ್ಥಿಗಳ ಸಮಖ್ಯೆ ಮಾತ್ರ ಕುಸಿದಿದೆ.
ವರದಿ : ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ (ಆ.31): ಕೊಡಗು ಜಿಲ್ಲೆಯ ಹಲವು ಪದವಿ ಕಾಲೇಜುಗಳಲ್ಲಿ ದಾಖಲಾತಿ ಆರಂಭವಾಗಿ ತಿಂಗಳೇ ಕಳೆದಿದ್ದರೂ ಕೂಡ ದಾಖಲಾತಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೋವಿಡ್‌ನಿಂದಾಗಿ ಈ ಬಾರಿ ಕಾಲೇಜು ಆರಂಭವಾಗುತ್ತದೆಯೋ ಇಲ್ಲವೋ ಎಂಬ ಗೊಂದಲ ಹಾಗೂ ಬಸ್ ವ್ಯವಸ್ಥೆ ಇಲ್ಲದಿರುವುದು ದಾಖಲಾತಿ ಪ್ರಮಾಣದ ಹಿನ್ನೆಡೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ಬಿ.ಕಾಂ ಕೋರ್ಸ್‌ಗೆ ಮಾತ್ರ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಉತ್ಸುಕರಾಗಿ ದಾಖಲಾಗುತ್ತಿದ್ದಾರೆ. ಉಳಿದ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಕೆಲವು ಕೋರ್ಸ್‌ಗಳು ಸ್ಥಗಿತಗೊಳ್ಳುವ ಆತಂಕ ಉಂಟಾಗಿದೆ.
ಕೊಡಗು ಜಿಲ್ಲೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು, ಕಾವೇರಿ ಕಾಲೇಜು ವಿರಾಜಪೇಟೆ, ಪೊನ್ನಂಪೇಟೆ, ಸಾಯಿ ಶಂಕರ್ ವಿದ್ಯಾ ಸಂಸ್ಥೆ, ಸಂತ ಅನ್ನಮ್ಮ ಕಾಲೇಜು ವಿರಾಜಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಾದ ವಿರಾಜಪೇಟೆ, ನಾಪೋಕ್ಲು, ಮಡಿಕೇರಿ, ಮೂರ್ನಾಡು, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ ಸರ್ಕಾರಿ ಮಹಿಳಾ ಕಾಲೇಜು ಮಡಿಕೇರಿ, ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ, ಎಂಜಿಎಂ ಕಾಲೇಜು ಕುಶಾಲನಗರ, ಅನುಗ್ರಹ ಪ್ರಥಮ ದರ್ಜೆ ಕಾಲೇಜು ಕುಶಾಲನಗರ, ಬಿಟಿಸಿಜಿ ಕಾಲೇಜು ಸೋಮವಾರಪೇಟೆ ಸೇರಿದಂತೆ ಜಿಲ್ಲೆಯಲ್ಲಿ 15ಕ್ಕೂ ಅಧಿಕ ಪದವಿ ಕಾಲೇಜುಗಳಿವೆ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಬಿಎ ಎಚ್‌ಆರ್‌ಡಿ, ಹಿಂದಿ ಐಚ್ಛಿಕ, ಬಿಎಸ್‌ಡಬ್ಲ್ಯೂ ಹಾಗೂ ವಿಜ್ಞಾನ ವಿಭಾಗದಲ್ಲೂ ವಿದ್ಯಾರ್ಥಿಗಳ ದಾಖಲಾತಿ ಕಳೆದ ವರ್ಷಕ್ಕಿಂತ ತೀರಾ ಕಡಿಮೆಯಿದೆ. ಕಾಮರ್ಸ್ ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿದ್ದು, ಈ ಬಾರಿ ಬಿ.ಕಾಂ. ಜನರಲ್ ಕೋರ್ಸ್‌ಗೆ ಒಂದು ಹೊಸ ಬ್ಯಾಚ್‌ಕೂಡ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪದವಿ ಕಾಲೇಜಿನ ಯಾವುದೇ ವಿಷಯದ ಕೋರ್ಸ್‌ಗಳಿಗೆ 15 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದರೆ, ಅಂತಹ ಕೋರ್ಸ್‌ಗಳನ್ನು ಮುಂದುವರಿಸುವಂತಿಲ್ಲ ಎನ್ನುವ ವಿಶ್ವ ವಿದ್ಯಾನಿಲಯದ ಆದೇಶವಿದೆ. ಆದ್ದರಿಂದ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿರುವ ಕೋರ್ಸ್‌ಗಳನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಮತ್ತು ಆತಂಕ ಉಂಟಾಗಿದೆ. ಇದರಿಂದಾಗಿ ತಮ್ಮ ಇಚ್ಛೆಯ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೂ ಸಂಕಷ್ಟಉಂಟಾಗಲಿದ್ದು, ಒಂದು ವೇಳೆ ಕೋರ್ಸ್ ಸ್ಥಗಿತಗೊಂಡರೆ ಆ ವಿದ್ಯಾರ್ಥಿ ಮತ್ತೊಂದು ಕೋರ್ಸ್ ಅನ್ನು ತೆಗೆದುಕೊಳ್ಳುವಂತೆ ದಾಖಲಾತಿಯ ಸಂದರ್ಭವೇ ಮೊದಲೇ ಸೂಚನೆ ನೀಡಲಾಗಿದೆ.
ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಒಳಪಡುವ ಪದವಿ ಕಾಲೇಜುಗಳಿಗೆ ಸೆ.9ರ ವರೆಗೂ ದಾಖಲಾತಿಗೆ ಅವಕಾಶ ನೀಡಲಾಗಿದೆ. ಇಲ್ಲದೆ ಸಪ್ಲಿಮೆಂಟರಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗಳಿಗೂ ದಾಖಲಾತಿಗೆ ಅವಕಾಶ ನೀಡಲಾಗುತ್ತದೆ. ಆದರೆ ಇದೀಗ ದಾಖಲಾಗಿ ಆರಂಭವಾಗಿ ತಿಂಗಳೇ ಕಳೆದಿದ್ದರೂ ಕೂಡ ದಾಖಲಾತಿ ಪ್ರಮಾಣ ಏರಿಕೆ ಕಂಡಿಲ್ಲ.
ವಿವಿಧೆಡೆ ಇದೇ ಪರಿಸ್ಥಿತಿ:
ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 440 ಹೊಸ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ ಮೊದಲೆಲ್ಲ 600ರಷ್ಟುವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ 300 ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ ಈ ಬಾರಿ ಕೇವಲ 130 ಮಂದಿ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ ಈ ಬಾರಿ 80 ಮಂದಿ ಮಾತ್ರ ದಾಖಲಾಗಿದ್ದಾರೆ. ಜಿಲ್ಲೆಯ ಹಲವು ಪದವಿ ಕಾಲೇಜುಗಳಲ್ಲಿ ಇಂತಹದ್ದೇ ಪರಿಸ್ಥಿತಿಯಾಗಿದೆ.
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಆದರೆ ಕೊರೋನಾದಿಂದಾಗಿ ನಷ್ಟಕ್ಕೆ ತುತ್ತಾದ ಖಾಸಗಿ ಬಸ್ ಗಳು ಸಂಚಾರ ಇಂದಿಗೂ ಇಲ್ಲ. ಆದ್ದರಿಂದ ಬಸ್‌ಗಳಿಲ್ಲದೆ ತಮ್ಮ ವಿದ್ಯಾರ್ಥಿಗಳನ್ನು ಕಾಲೇಜಿಗೆ ಹೇಗೆ ಕಳುಹಿಸುವುದು ಎಂಬುದು ಪೋಷಕರ ಪ್ರಶ್ನೆಯಾಗಿದೆ.
ಕಳೆದ ವರ್ಷ ನಮ್ಮ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು, ಈ ಬಾರಿ 400 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಮುಂದೆ 50 ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆಯಿದೆ. ವಿಜ್ಞಾನಕ್ಕೆ ಈ ಬಾರಿ ಹೆಚ್ಚಿನ ಬೇಡಿಕೆ ಇಲ್ಲ. ಬದಲಾಗಿ ಕಾಮರ್ಸ್‌ಗೆ ಬೇಡಿಕೆಯಿದ್ದು, ವಿಶ್ವ ವಿದ್ಯಾನಿಲಯಕ್ಕೆ ಮಾತನಾಡಿ ಒಂದು ಹೊಸ ಬ್ಯಾಚ್ ಕೂಡ ಆರಂಭಿಸಲು ತೀರ್ಮಾನಿಸಿದ್ದೇವೆ. 120 ತೆಗೆದುಕೊಳ್ಳುವಲ್ಲಿ 180 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿದ್ದೇವೆ.
-ಡಾ. ಜಗತ್ ತಿಮ್ಮಯ್ಯ, ಪ್ರಾಂಶುಪಾಲರು ಫೀ. ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ
ಇಷ್ಟುವರ್ಷಕ್ಕೆ ಹೋಲಿಸಿದರೆ ದಾಖಲಾತಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. 250ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾಗುತ್ತಿದ್ದ ಕಾಲೇಜಲ್ಲಿ ಈ ಬಾರಿ 80 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಇದಕ್ಕೆ ಬಸ್‌ಗಳ ಸಂಪರ್ಕ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಈ ಬಾರಿ ಕೋವಿಡ್‌ನಿಂದಲೂ ಕೂಡ ಆತಂಕ ಉಂಟಾಗಿದ್ದು, ದಾಖಲಾತಿ ಕಡಿಮೆಯಾಗಿದೆ.
-ಟಿ.ಕೆ. ಬೋಪಯ್ಯ, ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ
ನಮ್ಮ ಕಾಲೇಜಿನಲ್ಲಿ ಪ್ರತೀ ವರ್ಷ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಥಮ ಪದವಿಯ ವಿವಿಧ ಕೋಸ್‌ಗಳಿಗೆ ದಾಖಲಾಗುತ್ತಿದ್ದರು. ಆದರೆ ಈ ಬಾರಿ ಕೇವಲ 130 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಕಾಲೇಜು ಆರಂಭವಾಗುತ್ತದೆಯೋ ಇಲ್ಲವೇ ಎನ್ನುವ ಗೊಂದಲದಿಂದಾಗಿ ಹಾಗೂ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಸೆ.9ರಂದು ದಾಖಲಾತಿಗೆ ಕೊನೆಯ ದಿನವಾಗಿದೆ. ಇದೀಗ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಕೂಡ ಸಮಸ್ಯೆಯಾಗಿದೆ.
-ಕುಸುಮಾಧರ, ಪ್ರಭಾರ ಪ್ರಾಂಶುಪಾಲ, ಕಾವೇರಿ ಕಾಲೇಜು ಗೋಣಿಕೊಪ್ಪಲು
ಅ. 1 ರಿಂದ ಪದವಿ, ಸ್ನಾತಕೋತ್ತರ ಪದವಿ ಪ್ರಾರಂಭಕ್ಕೆ ಸಿದ್ಧತೆ; ಹೀಗಿರಲಿವೆ ತರಗತಿಗಳು...
"