Asianet Suvarna News Asianet Suvarna News

ಹಾವೇರಿ: ಕಾಲೇಜು ಆರಂಭವಾದ್ರೂ ಬಾರದ ಬಸ್‌, ವಿದ್ಯಾರ್ಥಿಗಳ ಪರದಾಟ..!

* ಹಾವೇರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ 
* ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ 
* ನಡೆದುಕೊಂಡೇ ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳು

Students Faces Problems for Not Bus Facility in Haveri grg
Author
Bengaluru, First Published Aug 4, 2021, 3:19 PM IST
  • Facebook
  • Twitter
  • Whatsapp

ಹಾವೇರಿ(ಆ.04): ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆ ಅನುಕೂಲವಾಗುವಂತೆ ಸಮರ್ಪಕ ಬಸ್‌ ಸೇವೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌(ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿಯಿಂದ ಮಂಗಳವಾರ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ಪ್ರತಿದಿನ ವಿದ್ಯಾಭ್ಯಾಸದ ಉದ್ದೇಶದಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಜಿಲ್ಲಾ ಕೇಂದ್ರದ ಕಾಲೇಜುಗಳಿಗೆ ಬರಬೇಕಾಗಿದೆ. ಇಷ್ಟು ದಿನ ಕೋವಿಡ್‌-19 ನಿಂದ ಗ್ರಾಮೀಣ ಪ್ರದೇಶದ ಸಾರಿಗೆಯನ್ನು ನಿಲ್ಲಿಸಲಾಗಿತ್ತು. ಪದವಿ ಕಾಲೇಜುಗಳನ್ನು ಸರ್ಕಾರ ಪ್ರಾರಂಭಿಸಿ ತರಗತಿಗಳಿಗೆ ಹಾಗೂ ಪರೀಕ್ಷೆಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಇಷ್ಟಾದರೂ ಸಾರಿಗೆ ಇಲಾಖೆ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್‌ ಸೇವೆ ಒದಗಿಸಲು ವಿಳಂಬ ಧೋರಣೆ ತೋರುತ್ತಿದೆ. ಇದರಿಂದ ನಿತ್ಯ ಹಾವೇರಿ ಕೇಂದ್ರಕ್ಕೆ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಸಾರ್ವಜನಿಕರಿಗೆ ಸರ್ಕಾರಿ ಬಸ್‌ ಸೌಲಭ್ಯ ಇಲ್ಲದೆ ಖಾಸಗಿ ವಾಹನಗಳನ್ನು ಅವಲಂಭಿಸುವಂತಾಗಿದೆ ಎಂದು ದೂರಿದರು.

'ಬೊಮ್ಮಾಯಿ ಆಡಳಿತದಲ್ಲಿ ಬಿಜೆಪಿಗೆ ಹೆಚ್ಚು ಬಲ'

ಬಸ್‌ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳು ಕೋವಿಡ್‌ ಮೂರನೇ ಅಲೆಯ ಮುನ್ನ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿದ್ದು, ಇದರ ಪರಿಣಾಮವಾಗಿ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತಿದೆ. ಆದ್ದರಿಂದ ಕೂಡಲೇ ಸಮರ್ಪಕವಾಗಿ ಬಸ್‌ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ಮುಖಂಡ ಬೀರೇಶ ನೆಟಗಲ್ಲಣ್ಣನವರ ಮಾತಾನಾಡಿ, ಹಾವೇರಿ ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಿಂದ ನಗರಕ್ಕೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಪ್ರಸ್ತುತ ಪದವಿ ಕಾಲೇಜುಗಳು ಪ್ರಾರಂಭವಾಗಿ ಒಂದು ವಾರ ಕಳೆದರೂ ಹಿರೇಲಿಂಗದಹಳ್ಳಿಗೆ ಬಸ್‌ ಬಿಡುತ್ತಿಲ್ಲ. ನಿತ್ಯವು ನೂರಾರು ವಿದ್ಯಾರ್ಥಿಗಳು ಹಿರೇಲಿಂಗದಹಳ್ಳಿಯಿಂದ ಸುಮಾರು 4 ಕಿ.ಮೀ. ನಡೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ತರಗತಿಗಳಿಗೆ ನಿಗದಿತ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ವಿದ್ಯಾರ್ಥಿಗಳ ಹಾಗೂ ರೈತರ, ಕಾರ್ಮಿಕರು, ಗ್ರಾಹಕರ ಹಿತದೃಷ್ಟಿಯಿಂದ ಹಾವೇರಿ ನಗರದಿಂದ ಹಿರೇಲಿಂಗದಹಳ್ಳಿ ಗ್ರಾಮಕ್ಕೆ ಬೆಳಗ್ಗೆ 8 ಗಂಟೆಗೆ, ಮಧ್ಯಾಹ್ನ 1.30ಕ್ಕೆ ಹಾಗೂ ಸಂಜೆ 5 ಗಂಟೆಗೆ ಬಸ್‌ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಿರಣ ಗುಬ್ಬೇರ, ಪ್ರಕಾಶ ಮನೆಗಾರ, ಆಕಾಶ ಬಾಸೂರ, ಮಹೇಶ ಕಳಸೂರ, ನಂದೇಶ ಹರಿಜನ, ಮಂಜು ಪಿಚ್ಚಿ, ಸುರೇಶ ಮಾಳಗಿ, ರಾಜು ಕಾಶಂಬಿ , ಸುನೀಲ ನಾಗನೂರ ಸೇರಿದಂತೆ ಇತರರು ಇದ್ದರು.
 

Follow Us:
Download App:
  • android
  • ios