ಬಸವರಾಜ ಹಿರೇಮಠ

ಧಾರವಾಡ[ಅ.4]: ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ದಿನಪೂರ್ತಿ ಹಾಸ್ಟೇಲ್‌ಗಳ ಸಮಸ್ಯೆ ಬಗ್ಗೆ ವಾದ-ವಿವಾದ, ಅಧಿಕಾರಿಗಳ ತರಾಟೆ ಹಾಗೂ ಚರ್ಚೆ ನಡೆಯುತ್ತದೆ ಎಂದ ಮೇಲೆ ಧಾರವಾಡ ಜಿಲ್ಲೆಯು ಎಷ್ಟರ ಮಟ್ಟಿಗೆ ಹಾಸ್ಟೆಲ್‌ಗಳ ಕೊರತೆ ಎದುರಿಸುತ್ತಿದೆ ಎಂಬುದನ್ನು ಊಹಿಸಬಹುದು.

ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ದೂರದ ಊರುಗಳಿಂದ ಧಾರವಾಡ ಜಿಲ್ಲೆಗೆ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಅದರಲ್ಲೂ ಕರ್ನಾಟಕ ವಿವಿ ಸೇರಿದಂತೆ ಮೂರು ವಿಶ್ವವಿದ್ಯಾಲಯ, ಸಾಕಷ್ಟು ಪದವಿ ಕಾಲೇಜುಗಳು ಹಾಗೂ ಅವುಗಳಲ್ಲಿನ ತರಹೇವಾರಿ ಕೋಸ್ ಗರ್ಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಆದರೆ, ಈ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ಚಿಂತೆ ಹಾಸ್ಟೆಲ್. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್‌ಗಳು ಇಲ್ಲದ ಕಾರಣ ಪ್ರತಿ ಬಾರಿ ಹಾಸ್ಟೆಲ್‌ಗಾಗಿ ಪರದಾಟ ಇದ್ದೇ ಇರುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬರೀ ಧಾರವಾಡ ಸುತ್ತಲಿನ ಊರುಗಳಲ್ಲದೇ ವಿಜಯಪುರ, ಬಾಗಲಕೋಟ, ಕೊಪ್ಪಳ, ಗದಗ, ಹಾವೇರಿ ಹಾಗೂ ಬಳ್ಳಾರಿಯಿಂದಲೂ ಧಾರವಾಡಕ್ಕೆ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬರುತ್ತಾರೆ. ತುಸು ಹಣವುಳ್ಳ ಪಾಲಕರು ತಮ್ಮ ಮಕ್ಕಳನ್ನು ಪಿಜಿ ಅಥವಾ ಬಾಡಿಗೆ ಮನೆಯಲ್ಲಿ ಇರಿಸುತ್ತಾರೆ. ಆದರೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅನಿವಾರ್ಯ. ವಸತಿಯೊಂದಿಗೆ ಊಟವೂ ಇರುವುದರಿಂದ ನಿರಾಂತಕವಾಗಿ ಶಿಕ್ಷಣದ ಉದ್ದೇಶವನ್ನು ಈಡೇರಿಸಿಕೊಳ್ಳಬಹುದು. ಶಿಕ್ಷಣ ಕೊಡಿಸುವುದೇ ತ್ರಾಸದಾಯ ಕವಾಗಿರುವ ಸಂದರ್ಭದಲ್ಲಿ ಬಾಡಿಗೆ ಮನೆ ಅಥವಾ ಪಿಜಿಗೆ ಸೇರಿಸುವುದು ಅಸಾಧ್ಯದ ಮಾತು. 

ಡಿಸಿಎಂ ಸಹ ಶಿಫಾರಸ್ಸು: 

ವಿಚಿತ್ರ ಎಂದರೆ, ಸದ್ಯದ ಹಾಸ್ಟೇಲ್ ಪ್ರವೇಶಕ್ಕಾಗಿ ಉಪ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು, ಜಿಪಂ ಸದಸ್ಯರು, ಪಾಲಿಕೆ ಸದಸ್ಯರಿಂದ ಶಿಫಾರಸ್ಸು ಪತ್ರಗಳು ಬಂದರೂ ಸಹ ಪ್ರವೇಶ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಸಿಎಂ ಇಲಾಖೆ ಅಡಿ ಈ ಬಾರಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ಕಳವಳ  ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್‌ಗಳಲ್ಲೂ ಅರ್ಜಿ ಹಾಕಿದ ವಿದ್ಯಾರ್ಥಿಗಳು ಖಾಲಿ ಕೈಯಲ್ಲಿ ಬಂದಿದ್ದಾರೆ. ಶಾಲಾ- ಕಾಲೇಜುಗಳು ಆರಂಭವಾಗಿ ಮೂರು ತಿಂಗಳಾದರೂ ಹಾಸ್ಟೆಲ್ ವ್ಯವಸ್ಥೆ ಆಗದ ಹಿನ್ನೆಲೆಯಲ್ಲಿ ಪಿಜಿಗಳ ಮೊರೆ ಹೋಗಬೇಕಾಗಿದೆ. 

ಎಷ್ಟಿವೆ ಹಾಸ್ಟೆಲ್‌:

ಬಿಸಿಎಂ ಅಡಿ 67, ಸಮಾಜ ಕಲ್ಯಾಣ ಇಲಾಖೆಯಲ್ಲಿ 32 ಹಾಗೂ ಅಲ್ಪಸಂಖ್ಯಾತ ಇಲಾಖೆ ಅಡಿ ಎಂಟು ವಸತಿ ನಿಲಯಗಳು ಜಿಲ್ಲೆಯಲ್ಲಿವೆ. ಆದರೆ, ಬಹುತೇಕ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿವೆ. ಅಲ್ಲದೇ, ಒಂದೊಂದು  ಕೋಣೆಯಲ್ಲಿ ಇಬ್ಬರು ಅಥವಾ ಮೂವರ ಬದಲು ನಾಲ್ಕೈದು ವಿದ್ಯಾರ್ಥಿಗಳನ್ನು ಹಾಕಲಾಗಿದೆ. ಬಿಸಿಎಂ ಇಲಾಖೆ ತಿಂಗಳಿಗೆ  50 ಲಕ್ಷ ಬಾಡಿಗೆ ಕಟ್ಟಡಕ್ಕೆ ವೆಚ್ಚ ಮಾಡುತ್ತಿದೆ. ಇದೇ ಹಣದಲ್ಲಿ ಸ್ವಂತ ಕಟ್ಟಡಗಳೇ ಸಿದ್ಧವಾಗುತ್ತಿದ್ದವು. ಆದರೆ, ಜಾಗದ ಸಮಸ್ಯೆಯಿಂದ ಈ ಕಾರ್ಯವಾಗುತ್ತಿಲ್ಲ. ಹೀಗಾಗಿ ಬಾಡಿಗೆ ಕಟ್ಟಡದಲ್ಲಿ ಇಲಾಖೆಗಳು ಶಾಶ್ವತ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಸ್ವಚ್ಛತೆ, ನೀರು ಹಾಗೂ ಇತರೆ ಸೌಲಭ್ಯಗಳ ಕೊರತೆ ಬಾಡಿಗೆ ಕಟ್ಟಡಗಳಲ್ಲಿ ಸಾಕಷ್ಟಿವೆ. ಈಗಾಗಲೇ ಹಾಸ್ಟೆಲ್‌ಗಳಿಗೆ ಪ್ರವೇಶ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಇರುವ ಸೌಲಭ್ಯಗಳಲ್ಲಿಯೇ ಶಿಕ್ಷಣ ಮುಂದುವರೆಸುತ್ತಿದ್ದಾರೆ.

ಹಾಸ್ಟೆಲ್ ಸಿಗದೇ ಪರದಾಡುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಇನ್ನೊಂದೆಡೆ ಸಿಕ್ಕ ಹಾಸ್ಟೆಲ್‌ಗಳಲ್ಲಿಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುವ ವಿದ್ಯಾರ್ಥಿಗಳು. ಸರ್ಕಾರ ಪ್ರತಿ ವರ್ಷ ಹಾಸ್ಟೆಲ್‌ಗಾಗಿ ಕೋಟಿಗಟ್ಟಲೇ ವೆಚ್ಚ ಮಾಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ದೊರೆಯುತ್ತಿಲ್ಲ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಸಾಕಷ್ಟು ಉದಾಹರಣೆ ಇದೆ.

ಈ ಬಗ್ಗೆ ಮಾತನಾಡಿದ  ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರು, ಹಾಸ್ಟೆಲ್ ಕೋರಿ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಸೀಟು ಸಿಗುತ್ತಿಲ್ಲ ಎಂದು ಹತ್ತಾರು ವಿದ್ಯಾರ್ಥಿಗಳು ತಮ್ಮ ಬಳಿ ಬರುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತ ನದಿಂದ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಗದ ಈ ಸಂದರ್ಭದಲ್ಲಿ ಹೊರ ಜಿಲ್ಲೆಯ ವಿದ್ಯಾರ್ಥಿಗಳ ಸ್ಥಿತಿ ಕೇಳುವಂತಿಲ್ಲ. ನಾವು ನೀಡುವ ಶಿಫಾರಸ್ಸು ಪತ್ರಕ್ಕಂತ ಕಿಮ್ಮತ್ತೇ ಇಲ್ಲ. ನಿಯಮಾವಳಿ ಗಾಳಿಗೆ ತೂರಿ ತಮಗೆ ತಿಳಿದಂತೆ ಅಧಿಕಾರಿಗಳು ಪ್ರವೇಶ ನೀಡುತ್ತಿದ್ದಾರೆ. ಇಷ್ಟಾಗಿಯೂ ಯಾವುದೇ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ವಂಚಿತ ಆಗ ದಂತೆ ನೋಡಿಕೊಳ್ಳಲಾಗುವುದು.