ಯಮಕನಮರಡಿ(ಜೂ. 27):  ಇತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಜ್ಜಾಗಿ ನಿಂತ ಮಗಳು. ಇನ್ನೊಂದೆಡೆ ಹೊಲಕ್ಕೆ ಹೋಗಿದ್ದ ತಂದೆ ವಿದ್ಯುತ್‌ ಅಪಘಾತಕ್ಕೆ ಬಲಿ. ತಂದೆ ಹೊಲದಲ್ಲಿ ಕುಸಿದು ಬಿದ್ದಿದ್ದನ್ನು ಕಣ್ಣಾರೆ ಕಂಡಾಗಲೂ ಏನೂ ಆಗಿಲ್ಲವೆಂಬ ಸ್ಥಳೀಯರ ಮಾತು ಕೇಳಿ ಹೋಗಿ ಪರೀಕ್ಷೆ ಬರೆದು ಮರಳಿದವಳಿಗೆ ಬರಸಿಡಿಲಿನಂತೆ ಬಡಿದಿದ್ದು ತಂದೆಯ ವಿಯೋಗದ ಸುದ್ದಿ.

ಇಂಥದ್ದೊಂದು ಮನಕಲಕುವ ಸನ್ನಿವೇಶ ನಡೆದಿದ್ದು ಗುರುವಾರ ಬೆಳಗ್ಗೆ ಇಲ್ಲಿನ ರೈತ ಕುಟುಂಬವೊಂದರಲ್ಲಿ. ರೈತ ರಮೇಶ ಬಸವಣ್ಣಿ ಗುರವ (43) ನಿತ್ಯದಂತೆ ಬೆಳಗಿನ 6.30ರ ಸುಮಾರಿಗೆ ತಮ್ಮ ಹೊಲಕ್ಕೆ ಹೋಗಿದ್ದರು. ಅಲ್ಲಿ ಕೊಳವೆಬಾವಿ ಮೋಟಾರ್‌ ಬಟನ್‌ ಒತ್ತಲು ಹೋದಾಗ ವಿದ್ಯುತ್‌ ತಗುಲಿ ಸ್ಥಳದಲ್ಲಿಮೃತಪಟ್ಟಿದ್ದಾರೆ. ಕುಟುಂಬಕ್ಕೆ ಸುದ್ದಿ ತಿಳಿದಾಗ ಪತ್ನಿ ವಿದ್ಯಾಶ್ರೀ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಯಲ್ಲಿದ್ದ ಪುತ್ರಿ ಅಂಜಲಿ, ತಂಗಿ ಸ್ನೇಹಾ ಹಾಗೂ ತಮ್ಮ ಹೊಲಕ್ಕೆ ಹೋಗಿದ್ದಾರೆ. ಅಲ್ಲಿ ಸೇರಿದ್ದ ಸ್ಥಳೀಯರು ಏನೂ ಆಗಿಲ್ಲ, ಆಸ್ಪತ್ರೆಗೆ ಸಾಗಿಸಿ ಎಂದು ಹೇಳಿದ್ದರಿಂದ ತಂದೆ ಸಾವಿನ ಪರಿವೆಯಿಲ್ಲದೆ ಮತ್ತೆ ಮನೆಗೆ ಮರಳಿದ ಅಂಜಲಿ, ಅಲ್ಲಿಂದ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾಳೆ.

ಕಾಲ ಬೆರಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಭೇಷ್‌ ಎಂದ ಸಚಿವ ಸುರೇಶ್‌ ಕುಮಾರ್‌

ಪರೀಕ್ಷೆ ಬರೆದು ಹೊರಬರುತ್ತಲೇ ತಂದೆಯ ಸಾವಿನ ಸುದ್ದಿ ತಿಳಿದ ಅಂಜಲಿ ಅಕ್ಷರಶಃ ಕುಸಿದುಹೋಗಿದ್ದಾಳೆ. ಸಂಬಂಧಿಯೊಬ್ಬರ ಬೈಕ್‌ನಲ್ಲಿ ಮನೆಗೆ ಮರಳಿದ ಆಕೆ, ಕಣ್ಣೀರಿಡುತ್ತ ತಂದೆಯ ಅಂತಿಮ ದರ್ಶನ ಪಡೆಯುತ್ತಿದ್ದ ದೃಶ್ಯ ನೋಡುವವರ ಕರುಳು ಹಿಂಡುವಂತಿತ್ತು. ರೈತ ಮೃತಪಟ್ಟ ಘಟನೆ ಕುರಿತು ಯಮನಕಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.