Asianet Suvarna News Asianet Suvarna News

Tumakur : ವಿದ್ಯಾರ್ಥಿ ಜೀವನ ಪವಿತ್ರವಾದ ನದಿ ಇದ್ದಂತೆ

ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.

Student Life Is Like Pure River snr
Author
First Published Nov 8, 2022, 4:44 AM IST

  ತುಮಕೂರು (ನ.08):  ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.

ಈ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು (Students)  ಸನ್ಮಾನಿಸಿ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರು, ವಿದ್ಯಾರ್ಥಿ ಜೀವನ ಒಂದು ಪವಿತ್ರವಾದ ನದಿ (River)  ಇದ್ದ ಹಾಗೆ. ಅದರಲ್ಲಿ ಕಲ್ಲು, ಬಂಡೆ, ಏರು ಪೇರು, ಮುಳ್ಳು ಕಂಟಿಗಳು ಇರುತ್ತವೆ. ಅದರಂತೆ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ಹಲವಾರು ಅಡೆ ತಡೆಗಳು, ಕಷ್ಟಕಾರ್ಪಣ್ಯಗಳು ಬಂದೇ ಬರುತ್ತವೆ. ಇವುಗಳನ್ನು ಎದುರಿಸಿ ಆತ್ಮಸ್ಥೈರ್ಯದಿಂದ ಮುಂದೆ ಬರಬೇಕು. ಉತ್ತಮ ಯಶಸ್ಸು ದೊರೆಯಬೇಕಾದರೆ ಮೊದಲು ಸೋಲು ಬಂದೇ ಬರುತ್ತದೆ. ಸೋಲಿನಿಂದ ಅವಮಾನಗೊಂಡ ವ್ಯಕ್ತಿಗೆ ಮುಂದೊಂದು ದಿನ ಸನ್ಮಾನ ಖಚಿತ. ಆದ್ದರಿಂದ ಸೋಲನ್ನು ಧೈರ್ಯದಿಂದ ಎದುರಿಸಬೇಕು. ಸತತ ಅಧ್ಯಯನ ಮತ್ತು ಅನುಭವದಿಂದ ಬುದ್ದಿ ಮತ್ತು ವಿದ್ಯೆ ಬರುತ್ತದೆ. ಈ ನಿಟ್ಟಿನಲ್ಲಿ ಮಾಡುವ ಕಾರ್ಯದಲ್ಲಿ ಶ್ರದ್ಧೆಯನ್ನು ತುಂಬಿಕೊಂಡಿರಬೇಕು. ವಿದ್ಯಾರ್ಥಿಗಳಿಗೆ ಸಂಸ್ಕಾರ ಮುಖ್ಯವಾಗಿದ್ದು ಅಹಂಕಾರ ತೊರೆದು ಗುರುಗಳನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.

ತುಮಕೂರು ಜಿಲ್ಲೆಯಲ್ಲಿರುವ ಕಂಪನಿಗಳ ಸಿಎಸ್‌ಆರ್‌ ನಿಧಿಯನ್ನು ತುಮಕೂರು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕೊಡಿ ಎಂದು ಶೀಘ್ರದಲ್ಲೇ ಅಭಿಯಾನ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಮುಂದಿನ ವಾರ ಸಭೆ ಕರೆದು ಚರ್ಚಿಸಲಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಕಂಪನಿಗಳ ಸಿಎಸ್‌ಆರ್‌ ನಿಧಿ ಕೊಟ್ಟರೆ ಶಾಲಾ ಕಾಲೇಜುಗಳು ಸಹ ಯಾವುದೇ ಖಾಸಗಿ ಕಾಲೇಜುಗಳನ್ನು ಮೀರಿಸುವಂತಹ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಶಿಕ್ಷಣ ಲಭಿಸುತ್ತದೆ ಎಂದರು.

ಪ್ರಾಂಶುಪಾಲ ಪೊ›.ಬಿ.ಕರಿಯಣ್ಣ ಮಾತನಾಡಿ, ಪತ್ರಿಕೋದ್ಯಮ ವಿಭಾಗ ನಿರುದ್ಯೋಗ ಸೃಷ್ಠಿ ಮಾಡುವ ವಿಭಾಗವಲ್ಲ, ಅನ್ನ ಹುಟ್ಟಿಸಿಕೊಟ್ಟು ತನ್ನ ಕಾಲಮೇಲೆ ತಾನು ನಿಲ್ಲುವಂತಹ ಶಕ್ತಿಯನ್ನು ರೂಪಿಸಲಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರತಿಭಾನ್ವಿತರಾಗಲು ಅನೇಕ ಸವಲತ್ತುಗಳನ್ನು ನೀಡಿದೆ. ಇವುಗಳನ್ನು ಪ್ರಮಾಣಿಕವಾಗಿ ಉಪಯೋಗಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಕೆ.ವಿ.ಸಿಬಂತಿ ಪದ್ಮನಾಭ ಮಾತನಾಡಿ, ಮುರಳೀಧರ ಹಾಲಪ್ಪ ಅವರು ತಮ್ಮ ತಂದೆಯವರ ಹೆಸರಿನಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗಾಗಿ ತುಮಕೂರು ವಿವಿಯಲ್ಲಿ ಚಿನ್ನದ ಪದಕ ಸ್ಥಾಪಿಸಿದ್ದಾರೆ. ಕಳೆದ 5 ವರ್ಷಗಳಿಂದ ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರಾರ‍ಯಂಕ್‌ ಪಡೆದು ಚಿನ್ನದ ಪದಕ ಪಡೆಯುತ್ತಿರುವುದು ಸಂತಸ ತಂದಿದೆ. ಇದೇ ರೀತಿ ಇನ್ನೂ ಹೆಚ್ಚಿನ ಚಿನ್ನದ ಪದಕಗಳನ್ನು ಗಳಿಸುವಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಸಲಹೆ ನೀಡಿದರು.

2020ರಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಶಿಪ್ನಾ ರೆಹಮಾನ್‌ ಮತ್ತು 2021-22ನೇ ಸಾಲಿನಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಪ್ರಣವ್‌ ಅನಿರುದ್‌್ಧ ಅವರನ್ನು ಮುರಳೀಧರ ಹಾಲಪ್ಪ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಈ ಇಬ್ಬರೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮುಖಂಡರಾದ ರೇವಣಸಿದ್ದಯ್ಯ, ಮರಿಚನ್ನಮ್ಮ, ಸಂಜೀವ್‌ ಕುಮಾರ್‌, ನಟರಾಜ್‌, ಪ್ರಕಾಶ್‌, ಮಂಜುನಾಥ್‌, ಗೀತ, ಯುಕ್ತ ಕೌಶಲ್ಯ ಸಂಸ್ಥೆಯ ದಿಲೀಪ್‌, ದೀಪಿಕಾ, ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಕೋಕಿಲ, ಸನ್ಮಾನಿತ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಂದು ಪತ್ರಿಕೋದ್ಯಮ ವಿಭಾಗದಲ್ಲಿ ಬಹುತೇಕರು ಹಳ್ಳಿಯಿಂದ ದಿಲ್ಲಿವರೆಗೆ ಹೋಗಿ ಸಾಧನೆ ಮಾಡಿದ್ದಾರೆ. ಅಂತಹವರ ಆದರ್ಶ ಮತ್ತು ಮಾರ್ಗದರ್ಶನ ಪಡೆದರೆ ನೀವೂ ಸಹ ಉನ್ನತ ಹುದ್ದೆಗೇರುವುದರಲ್ಲಿ ಯಾವುದೇ ಸಂಶಯವಿಲ್ಲ. ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕ ಪಡೆಯುವುದು ನಿಮ್ಮ ಗುರಿಯಾಗಬೇಕು, ಸತತ ಅಭ್ಯಾಸದೊಂದಿಗೆ ಪ್ರಾಯೋಗಿಕವಾಗಿಯೂ ಕಲಿತರೆ ನಿಮಗಿಂತ ಹೆಚ್ಚು ನಿಮ್ಮ ಪೋಷಕರು ಸಂತೋಷ ಪಡುತ್ತಾರೆ.

ಮುರಳೀಧರ ಹಾಲಪ್ಪ ಅಧ್ಯಕ್ಷ, ಹಾಲಪ್ಪ ಪ್ರತಿಷ್ಠಾನ

Follow Us:
Download App:
  • android
  • ios