ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ನಡೆದ ಘಟನೆ 

ಬೆಂಗಳೂರು(ನ.05): ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಶುಕ್ರವಾರ ರಾಮಚಂದ್ರಪುರದ ನಿವಾಸಿ ನಾಗೇಂದ್ರ ಹಾಗೂ ಸರಸ್ವತಿ ದಂಪತಿ ಪುತ್ರಿ, 4ನೇ ತರಗತಿ ವಿದ್ಯಾರ್ಥಿನಿ ನಿಶ್ಚಿತಾ (10) ಮೃತಪಟ್ಟಿದ್ದು, ಜಾಲಹಳ್ಳಿ ಸಮೀಪದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.

ಶಾಲೆಯ ಬೋಧನಾ ಕೊಠಡಿಯಲ್ಲಿ ಪಾಠದ ವೇಳೆ ನಿಶ್ಚಿತಾ ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ್ದರು. ಇದರಿಂದ ಪ್ರಜ್ಞಾಹೀನಳಾಗಿ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸಮೀಪದ ಎಂ.ಎಸ್‌.ಆಸ್ಪತ್ರೆಗೆ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್: ಬೆಚ್ಚಿಬಿದ್ದ ಕಲಬುರಗಿ

ಖಾಸಗಿ ಕಂಪನಿಯಲ್ಲಿ ಉದೋಗ್ಯದಲ್ಲಿರುವ ನಾಗೇಂದ್ರ ಅವರು, ತಮ್ಮ ಪತ್ನಿ ಹಾಗೂ ಇಬ್ಬರ ಮಕ್ಕಳ ಜತೆ ರಾಮಚಂದ್ರಪುರದಲ್ಲಿ ನೆಲೆಸಿದ್ದಾರೆ. ಮನೆ ಸಮೀಪದ ಶಾಲೆಯಲ್ಲಿ ಅವರ ಪುತ್ರಿ ನಿಶ್ಚಿತಾ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಆಕೆ ಪ್ರಜ್ಞೆ ತಪ್ಪಿಬಿದ್ದಿದ್ದಾಳೆ. ಕೂಡಲೇ ಸಮೀಪದ ಆಸ್ಪತ್ರೆಗೆ ನಿಶ್ಚಿತಾಳನ್ನು ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆ ಮೃತಪಟ್ಟಿದ್ದಾಳೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ನಿಶ್ಚಿತಾ ತಂದೆ ನಾಗೇಂದ್ರ ಅವರು ದೂರು ನೀಡಿದ್ದಾರೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿನಿ ನಿಶ್ಚಿತಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೋಷಕರಿಂದ ದೂರು ದಾಖಲಾಗಿದೆ. ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಅಂತ ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ವಸಂತರಾವ್‌ ಪಾಟೀಲ್‌ ತಿಳಿಸಿದ್ದಾರೆ.