Mandya : ಬಿಜೆಪಿ ನೆಲೆ ವಿಸ್ತರಣೆಗೆ ರಣತಂತ್ರ

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಹಳೇ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಶತಾಯಗತಾಯ ಕನಿಷ್ಠ 25 ಸ್ಥಾನಗಳಲ್ಲಿ ಗೆಲ್ಲುವ ಸಂಕಲ್ಪ ಮಾಡಿದೆ.

Strategy for expansion of BJP base snr

ಮಂಡ್ಯ :  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಹಳೇ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಶತಾಯಗತಾಯ ಕನಿಷ್ಠ 25 ಸ್ಥಾನಗಳಲ್ಲಿ ಗೆಲ್ಲುವ ಸಂಕಲ್ಪ ಮಾಡಿದೆ.

ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಜನಸಂಕಲ್ಪ ಯಾತ್ರೆ ಅದ್ಧೂರಿ ಯಶಸ್ಸನ್ನು ಕಂಡಿದ್ದು, ಕಾರ್ಯಕರ್ತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಚುನಾವಣಾ ಸಮರಕ್ಕೆ ಸೀಮಿತವಾಗಿದ್ದ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಈಗಾಗಲೇ ನೆಲೆ ಕಂಡುಕೊಂಡಿದ್ದು, ಅದನ್ನು ವಿಸ್ತರಿಸಿಕೊಳ್ಳುವ ಪೂರ್ವಸಿದ್ಧತೆ ಆರಂಭಿಸಿದೆ.

ಹಳೇ ಮೈಸೂರಿನಿಂದ ಆರಂಭ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂಬ ಹಠಕ್ಕೆ ಬಿದ್ದಿರುವ ಕೇಂದ್ರ ನಾಯಕರು ಹಳೇ ಮೈಸೂರು ಭಾಗದಿಂದಲೇ ಹೆಚ್ಚು ಸ್ಥಾನಗಳನ್ನು ಪಡೆಯಲು ನಿರ್ಧರಿಸಿದ್ದು, ಈ ಭಾಗದಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿರುವ ಜೆಡಿಎಸ್‌ ವಿರುದ್ಧ ನೇರವಾಗಿ ಚುನಾವಣಾ ಸಮರ ಘೋಷಿಸಿದ್ದಾರೆ.

ಈ ಹಿಂದಿನಿಂದಲೂ ಬಿಜೆಪಿ ಈ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿತ್ತಾದರೂ ಕನಿಷ್ಠ ಮತಗಳಿಕೆಗೆ ಸೀಮಿತವಾಗಿತ್ತು. ಬಿಜೆಪಿಯಲ್ಲಿ ಒಕ್ಕಲಿಗ ನಾಯಕರೆಂದು ಬಿಂಬಿಸಿಕೊಳ್ಳುತ್ತಿದ್ದ ಸಚಿವ ಆರ್‌.ಅಶೋಕ್‌ ಮತ್ತಿತರರು ಜೆಡಿಎಸ್‌ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹೋಗುತ್ತಿದ್ದುದೇ ಬಿಜೆಪಿ ಹಿನ್ನಡೆಗೆ ಕಾರಣ ಎಂಬುದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಂಡಿರುವ ಕೇಂದ್ರ ನಾಯಕರು 2023ರ ಚುನಾವಣೆಗೆ ಹೊಸ ನಾಯಕತ್ವವನ್ನು ಸೃಷ್ಟಿಸಿದ್ದಾರೆ.

ಹೊಸ ನಾಯಕತ್ವ ಸೃಷ್ಠಿ: ಸಚಿವ ಡಾ.ಸಿ.ಎನ್‌.ಅಶ್ವಥನಾರಾಯಣ, ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌, ಹಾಸನ ಶಾಸಕ ಪ್ರೀತಂಗೌಡ ಮತ್ತಿತರ ಪಕ್ಷನಿಷ್ಠರನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ನಿಯೋಜನೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮಂಡ್ಯದಲ್ಲಿ ಅಮಿತ್‌ ಶಾ ನೇತೃತ್ವದ ಜನಸಂಕಲ್ಪ ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಂತಹ ಪ್ರಭಾವಿ ನಾಯಕರನ್ನು ಹಳೇ ಮೈಸೂರು ಪ್ರಾಂತ್ಯಕ್ಕೆ ಕರೆತಂದು ಪ್ರಚಾರ ನಡೆಸುವ ಮೂಲಕ ಬಿಜೆಪಿ ಪರವಾದ ವಾತಾವರಣ ಸೃಷ್ಟಿಸುವ ಲೆಕ್ಕಾಚಾರಗಳು ನಡೆದಿವೆ.

ಗೆಲ್ಲುವ ಅಭ್ಯರ್ಥಿಗಳಿಗೆ ಹುಡುಕಾಟ: ಈಗಾಗಲೇ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದು, ಚುನಾವಣೆ ಅಂತಿಮ ಘಟ್ಟತಲುಪುವ ವೇಳೆ ಇನ್ನಷ್ಟುಪ್ರಭಾವಿ ಹಾಗೂ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ತರುವ ಪ್ರಯತ್ನಗಳು ನಡೆದಿವೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಪಕ್ಷವನ್ನೇ ತನ್ನ ನೇರ ಎದುರಾಳಿ ಎಂದು ಘೋಷಿಸಿರುವ ಬಿಜೆಪಿ ಪರೋಕ್ಷವಾಗಿ ಜೆಡಿಎಸ್‌ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ಸಿಗರನ್ನೂ ಸೆಳೆಯುವ ಲೆಕ್ಕಾಚಾರವೂ ಇದರಲ್ಲಿ ಅಡಗಿದ್ದು, ಸ್ವತಃ ಕೇಂದ್ರ ನಾಯಕರೇ ಹಳೇ ಮೈಸೂರು ಭಾಗದ ಉಸ್ತುವಾರಿ ವಹಿಸಿರುವುದು ಸಹಜವಾಗಿಯೇ ಬಿಜೆಪಿಯೊಳಗಿನ ಹೊಂದಾಣಿಕೆ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

ಹದ್ದಿನ ಕಣ್ಣು: ಇಷ್ಟುದಿನಗಳ ಕಾಲ ಹಳೇ ಮೈಸೂರು ಭಾಗದ ಮೇಲೆ ದೃಷ್ಟಿಬೀರದಿದ್ದವರು ಈಗ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವ ಯಾವ ಕ್ಷೇತ್ರಗಳಲ್ಲಿ ಬಿಜೆಪಿಯೊಳಗಿದ್ದುಕೊಂಡು ಜೆಡಿಎಸ್‌ಗೆ ರಕ್ಷಣೆ ನೀಡುತ್ತಿದ್ದರೋ ಆ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸುವ ಕೆಲಸಕ್ಕೆ ಕೇಂದ್ರ ನಾಯಕರೇ ಮುಂದಾಗಿದ್ದಾರೆ. ಬಿಜೆಪಿ ಬಲವರ್ಧನೆಗೆ ಹಳೇ ಮೈಸೂರು ಭಾಗದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಪಕ್ಷಕ್ಕೆ ಆದ ನಷ್ಟದ ಬಗ್ಗೆ ಅರಿತುಕೊಂಡು ಈ ಭಾಗಕ್ಕೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದಾರೆ. ರಾಜ್ಯ ನಾಯಕರಿಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸುವ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಹಳೇ ಮೈಸೂರು ಭಾಗದ ಮೇಲೆ ಕೇಂದ್ರ ನಾಯಕರ ಕಣ್ಣು ಬಿದ್ದಿರುವುದು ಮುಂಬರುವ ಚುನಾವಣೆ ಬಗ್ಗೆ ಹೆಚ್ಚಿನ ಕುತೂಹಲ ಮೂಡುವಂತೆ ಮಾಡಿದೆ.

ಕೇಂದ್ರ ನಾಯಕರ ಕಟ್ಟಾಜ್ಞೆ

ಹಳೇ ಮೈಸೂರು ಭಾಗದಲ್ಲಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದ ಬಿಜೆಪಿಗೆ ಶಕ್ತಿ ತುಂಬಲು ಮತ್ತು ಈ ಭಾಗದಿಂದಲೇ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಬೇಕೆಂಬ ಕಟ್ಟಾಜ್ಞೆಯನ್ನು ಕೇಂದ್ರದ ನಾಯಕರು ರಾಜ್ಯದ ನಾಯಕರಿಗೆ ಹೊರಡಿಸಿದ್ದು, ಇದರಿಂದಾಗಿ ಈ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಹಿಂದೆಲ್ಲಾ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟಲು ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಬಂದಿದ್ದ ಸ್ಥಳೀಯ ನಾಯಕರು ಈಗ ವರಿಷ್ಠರ ಆದೇಶದನ್ವಯ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಿಂದ ಕೆ.ಸಿ.ನಾರಾಯಣಗೌಡರು ಗೆಲುವು ಸಾಧಿಸಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದಂತಾಗಿದೆ. ಈ ಚುನಾವಣೆಯಲ್ಲಿ ಶ್ರೀರಂಗಪಟ್ಟಣ, ಮಂಡ್ಯ ಸೇರಿದಂತೆ ಕನಿಷ್ಠ 3 ಸ್ಥಾನಗಳಲ್ಲಿ ಗೆಲ್ಲುವ ಹಠಕ್ಕೆ ಬಿದ್ದಿದೆ. ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಗಳು ಸಾಕಷ್ಟುಸಂಖ್ಯೆಯಲ್ಲಿರುವುದೇನೋ ನಿಜ. ಆದರೆ, ಗೆಲ್ಲುವ ಹುಲಿಗಳ ಹುಡುಕಾಟದಲ್ಲಿರುವ ಬಿಜೆಪಿ ನಾಯಕರು ತಾವು ಗೆಲ್ಲಲು ಗುರಿಯಾಗಿಟ್ಟುಕೊಂಡಿರುವ ಕ್ಷೇತ್ರಗಳಲ್ಲಿ ಕೊನೆಯ ಹಂತದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

Latest Videos
Follow Us:
Download App:
  • android
  • ios