ಗುರುರಾಜ ವಾಳ್ವೇಕರ 

ಜಮಖಂಡಿ(ಮಾ.12): ಕಳೆದ ವರ್ಷದ ಮಳೆಗಾಲ ಋತುವಿನಲ್ಲಿ ಕೃಷ್ಣಾ ನದಿ ತನ್ನ ಒಡಲನ್ನು ಮೀರಿ ಹರಿದಿತ್ತು. ಪರಿಣಾಮ ಸಾವಿರಾರು ಕುಟುಂಬಗಳು, ಜಾನುವಾರುಗಳು, ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಬಡವರ ಬದುಕು ಕೃಷ್ಣೆಯ ಒಡಲು ಸೇರಿಹೋಗಿದ್ದವು. ಅಂದಿನ ಆ ರೌದ್ರನರ್ತನ ಆರ್ತನಾದ ಇನ್ನೂ ಸಂತ್ರಸ್ತರ ಮನದಿಂದ ದೂರವಾಗಿಲ್ಲ. ಅಷ್ಟೇ ಏಕೆ ಅಂದು ಪ್ರವಾಹದ ಸಂದರ್ಭದಲ್ಲಿ ಕಳೆದುಕೊಂಡಿದ್ದ ಸಂತ್ರಸ್ತರ ಬದುಕು ಇನ್ನೂ ಸರಿಯಾಗಿಲ್ಲ. ಹೀಗಾಗಿ ಅವರದು ಇನ್ನೂ ಬೀದಿಯೇ ಬದುಕು ಎಂಬಂತಾಗಿದೆ. 

ಸರ್ಕಾರವೆನೋ ಅಂದೆ ಪರಿಹಾರವನ್ನು ಘೋಷಣೆ ಮಾಡಿತು. ಆದರೆ, ಅದು ಸಂತ್ರಸ್ತರಿಗೆ ತಲುಪಿತಾ ಎಂದು ಕಣ್ಣುಬಿಟ್ಟು ನೋಡಲು ಇನ್ನೂ ಹೋಗಿಲ್ಲ. ಹಲವಾರು ವರ್ಷಗಳಿಂದ ಮಳೆ, ಗಾಳಿ, ಬಿಸಿಲೆನ್ನದೆ ತಮ್ಮ ಕುಟುಂಬವನ್ನೇ ಕಾಪಿಟ್ಟಿದ್ದ ಸೂರು, ಜೀವನಕೊಟ್ಟ ಜಮೀನು ತಮ್ಮ ಕಣ್ ಮುಂದೆಯೇ ಕೊಚ್ಚಿ ಹೋಗು ವುದನ್ನು ಕಂಡ ಸಂತ್ರಸ್ತರ ಮನಸು ಮರುಗದೇ ಇರದು. ತಮ್ಮ ಜೀವವನ್ನೇ ತೇಯ್ದು ಕಟ್ಟಿಕೊಂಡಿದ್ದ ಸೂರು ಕ್ಷಣಾರ್ಧದಲ್ಲಿ ಕಣ್ಮರೆಯಾಯಿತು. ಮಾತ್ರವಲ್ಲ, ಬದುಕು ಕೂಡ ಬೀದಿಗೆ ಬಂತು. ಈಗ ನೆರೆ ಇಲ್ಲ. ಬದುಕು ಕಟ್ಟಿಕೊಂಡಿದ್ದ ಸೂರು ಇಲ್ಲ. ಅತ್ತ ಸರ್ಕಾರ ಘೋಷಣೆ ಮಾಡಿದ ಪರಿಹಾರ, ಬಿಳಿ ಹಾಳೆಯಲ್ಲಿಯೇ ಇದೆ. ಅದಿನ್ನೂ ಕೈಸೇರಿಲ್ಲ. ಹೊಟ್ಟೆ ಸೇರಬೇಕಿದ್ದ ಬೆಳೆಗಳು ಭೂತಾಯಿ ಮಡಿಲ ನ್ನೇ ಅಪ್ಪಿಕೊಂಡು ಜೀವನ ಮತ್ತಷ್ಟು ದುಸ್ತರ ಎನ್ನುವಂತೆ ಮಾಡಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆರೆಯ ಹೊಡೆತಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ, ಇದು ಬಂದು ಹೋಗಿ ಎಂಟು ತಿಂಗಳಾದರೂ ಅದರ ಬಾಧೆಯಿಂದ ಸಂತ್ರಸ್ತರು ಇನ್ನೂ ಹೊರಬಂದಿಲ್ಲ. ಬದುಕು ಮರುನಿರ್ಮಿಸಬೇಕು ಎಂದರೆ ಸೂಕ್ತ ಪರಿಹಾರ ಕೂಡ ಸಿಕ್ಕಿಲ್ಲ. ಇದರಿಂದ ಮನೆ, ಬೆಳೆ, ಆಸ್ತಿ-ಪಾಸ್ತಿ ಕಳೆದುಕೊಂಡಿ ರುವ ರೈತ ಕುಟುಂಬಗಳು ಜಾನುವಾ ರುಗಳೊಂದಿಗೆ ಬೇರೆಯವರ ಸ್ಥಳದಲ್ಲಿ ಪುಟ್ಟ ಗುಡಿಸಲು ಹಾಕಿಕೊಂಡು ವಾಸವಾಗಿದ್ದಾರೆ. ಇವರ ಸ್ಥಿತಿ ನೋಡಿದರೆ, ಪ್ರಕೃತಿಯ ಮುನಿಸು ಎಷ್ಟೊಂದು ಘೋರವಿತ್ತು ಎಂಬುದು ಈಗಲೂ ತಿಳಿಯುತ್ತದೆ. 

ಬೀದಿಪಾಲು: 

ಅನಿರೀಕ್ಷಿತವಾಗಿ ಬಂದ ಕೃಷ್ಣಾ ನದಿ ಪ್ರವಾಹಕ್ಕೆ ಜಮಖಂಡಿ ತಾಲೂಕಿನ ಶಿರಗುಪ್ಪಿ- ಮುತ್ತೂರು-ಮೈಗೂರು ಗ್ರಾಮಗಳಲ್ಲಿ ಹಲವಾರು ಕುಟುಂಬಗಳು ಮನೆ ಕಳೆದುಕೊಂಡು ಬೀದಿಪಾ ಲಾಗಿವೆ. ಆದರೆ, ಇವರಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಪರಿಣಾಮ, ಪರಿಹಾರವಿಲ್ಲದೆ ಪೇಚಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಗಳಲ್ಲಿನ ರೈತ ಕುಟುಂಬಗಳು ಹಣಕಾಸು ಸಮಸ್ಯೆಯಿಂದ ಮನೆಗಳ ದುರಸ್ತಿಗೆ ಮುಂದಾಗಿಲ್ಲ. 

ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಘೋಷಿಸಿರುವ ಸರ್ಕಾರ, ಅದರಲ್ಲಿ ಕೇವಲ 1 ಲಕ್ಷ ಸಂತ್ರಸ್ತರ ಖಾತೆಗಳಿಗೆ ಜಮೆ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಇಲ್ಲಿರುವ ಕೆಲ ಸಂತ್ರಸ್ತರು ತಮಗೆ ಹಣ ಬಂದಿಲ್ಲ ಎಂದು ದೂರುತ್ತಿದ್ದಾರೆ. ಜಾನುವಾರುಗಳಿಗೆ ಮೇವು ತರಲು ಊರು ದಾಟಿ ಹೋಗಬೇಕಾದ ಸ್ಥಿತಿ ಬಂದಿದೆ. ಇನ್ನೂ ಹಲವು ಹೊಲ-ಗದ್ದೆಗಳಲ್ಲಿ ಪ್ರವಾಹದ ನೀರು ಇಂಗಿಲ್ಲ. 

ತಾರತಮ್ಯ ನೀತಿ: 

ತಾಪಂ ಉಪಾಧ್ಯಕ್ಷೆ ಶಿರಗುಪ್ಪಿ ಗ್ರಾಮದ ಸುಂದ್ರವ್ವ ಬೆಳಗಲಿ ಅವರ ಸಂಬಂಧಿ ಹಣಮಂತ ದುಂಡಪ್ಪ ಬೆಳಗಲಿ ಅವರ ಮನೆ ಸಂಪೂರ್ಣ ನೆಲಸಮವಾಗಿದ್ದರೂ ಅವರಿಗೆ ಇದು ವರೆಗೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಅಲ್ಲದೇ ಮುತ್ತಪ್ಪ ಶಂಕರೆಪ್ಪ ಕುಲಗೋಡ, ಸಿದ್ದಪ್ಪ ಪರಗೊಂಡ ಪಾಟೀಲ್, ನಾಗಪ್ಪ ಸದ್ದಗಿರಿ ಪಾಟೀಲ್, ಬಾಬುಗೌ ಡ ಪಾಟೀಲ್ ಇವರ ಮನೆಗಳು ಬಿದ್ದಿದ್ದರೂ ಯಾ ವುದೇ ಪರಿಹಾರ ನೀಡದ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಮನೆಗಳ ಸರ್ವೆ ಕಾರ್ಯದಲ್ಲಿ ತಾರತಮ್ಯ ನೀತಿ ಅನುಸರಿಸಿದ್ದರ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ನಾಲ್ಕು ಜನ ಅಧಿಕಾರಿಗಳ ಸರ್ವೆ ಕಾರ್ಯ ಅಪೂರ್ಣಗೊಳಸಿದವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು. ತಾಲೂಕಿನಲ್ಲಿ ಸಂತ್ರಸ್ತರು ಮನೆಗಳ ನಿರ್ಮಾಣ ಕಾರ್ಯ ಚುರುಕುಗೊಳಿಸಿದ್ದು, ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಶೀಘ್ರದಲ್ಲೇ ನೀಡಲಾಗುವುದು ಎಂದು ತಹಸೀಲ್ದಾರ್ ಸಂಜಯ ಇಂಗಳೆ ಹೇಳಿದ್ದಾರೆ. 

ಕಾಲು ರಾಡಿಯಾಗುತ್ತವೆಂದು ಗ್ರಾಮಕ್ಕೆ ಬಂದ ನೋಡಲ್ ಅಧಿಕಾರಿ ಹಾಗೂ ಸರ್ವೆ ಮಾಡುವ ಎಂಜಿನಿಯರ್ ನಮ್ಮ ಮನೆಗೆ ಬರಲಿಲ್ಲ. ಇಲ್ಲಿ ನೆಲ ಹಸಿ ಇದೆ. ಕಾಲು ರಾಡಿಯಾಗುತ್ತದೆ. ನಾನು ನಿಮ್ಮ ಹೆಸರು ಬರೆದುಕೊಂಡಿದ್ದೇನೆ. ಪರಿಹಾರ ಕೊಡಿಸುತ್ತೇನೆಂದು ಹೇಳಿ ಹೋಗಿದ್ದಾರೆ. ತಹಸೀಲ್ದಾರ ಕಚೇರಿಗೆ ಹೋಗಿ ಮನವಿ ನೀಡಿದರೂ ಪರಿಹಾರ ಸಿಕ್ಕಿಲ್ಲ. ಪಿಡಿಒರನ್ನು ವಿಚಾರಿಸಿದರೇ ಸರ್ವೆ ಮಾಡಿದವರನ್ನು ಕೇಳಿ, ಯಾರು ಮಾಡಿದ್ದಾರೇ ನನಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಇರಲು ಮನೆ ಇಲ್ಲದ ಸುಸ್ಥಿತಿ ಬಂದಿದೆ ಎಂದು ರೈತ ಬಾಬುಗೌಡ ಪಾಟೀಲ ಶಿರಗುಪ್ಪಿ ತಿಳಿಸಿದ್ದಾರೆ.

ಇಲ್ಲಿನ ನೋಡಲ್ ಅಧಿಕಾರಿ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಎಂಜಿನಿಯರ್ ಸೇರಿ ಒಬ್ಬರ ಮೇಲೊಬ್ಬರು ಹಾರಿಕೆ ಉತ್ತರಿಸುತ್ತಿದ್ದು, ನಿಜವಾದ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ. ಪೂರ್ತಿಮನೆ ಹಾಳಾಗಿದ್ದರೂ ಕೆಲವರಿಗೆ ಪರಿಹಾರ ಸಿಕ್ಕಿಲ್ಲ. ಇನ್ನು ಕೆಲವರಿಗೆ ಎ ಮತ್ತು ಬಿ ಗ್ರೇಡ್‌ನಲ್ಲಿ ಸೇರಿಸಬೇಕಾದವರಿಗೆ ಸಿ ಗ್ರೇಡ್‌ನಲ್ಲಿ ಹಾಕಿದ್ದಾರೆ. ಅವೈಜ್ಞಾನಿಕ ಸಮೀಕ್ಷೆ ಮಾಡಿದ್ದು, ಇನ್ನೊಮ್ಮೆ ಸಮೀಕ್ಷೆ ಮಾಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕಲ್ಲಪ್ಪ ಬಿರಾದಾರ ಹೇಳಿದ್ದಾರೆ.