ಬಳ್ಳಾರಿ: ಮೃತ ಬಾಣಂತಿಯರ ಕುಟುಂಬಕ್ಕೆ ನೀಡಿದ ಪರಿಹಾರ ಸಾಕಾಗುವುದಿಲ್ಲ, ಡಾ.ನಾಗಲಕ್ಷ್ಮಿ ಚೌಧರಿ

ಮಕ್ಕಳ ಬೆಳವಣಿಗೆಗೆ ಹಾಗೂ ಅವರ ವಿದ್ಯಾಭ್ಯಾಸ ಸೇರಿದಂತೆ ಸಂಪೂರ್ಣ ಜವಾಬ್ದಾರಿ ಸರ್ಕಾರ ವಹಿಸಬೇಕು. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

State Women's Commission President Dr Nagalakshmi Chaudhary Visited to Ballari District Hospital grg

ಬಳ್ಳಾರಿ(ಡಿ.13):  ಸರ್ಕಾರವು ಮೃತ ಬಾಣಂತಿಯರಿಗೆ ಘೋಷಿಸಿದ ಪರಿಹಾರದಲ್ಲಿ ₹2 ಲಕ್ಷದಿಂದ ₹5 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಸರ್ಕಾರ ನೀಡಿರುವ ಪರಿಹಾರ ಸಾಕಾಗುವುದಿಲ್ಲ. ಪರಿಹಾರ ಹೆಚ್ಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಗ್ರಹಿಸಿದರು. 

ಬಾಣಂತಿಯರ ಸಾವು ಪ್ರಕರಣ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಮಕ್ಕಳ ಬೆಳವಣಿಗೆಗೆ ಹಾಗೂ ಅವರ ವಿದ್ಯಾಭ್ಯಾಸ ಸೇರಿದಂತೆ ಸಂಪೂರ್ಣ ಜವಾಬ್ದಾರಿ ಸರ್ಕಾರ ವಹಿಸಬೇಕು. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು. 

ಬಾಣಂತಿ ಸಾವಿಗೆ ಕಾರಣರಾದವರ ಮೇಲೆ ಕ್ರಮ: ಸಚಿವ ದಿನೇಶ್ ಗುಂಡೂರಾವ್

ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಈ ತರಹದ ಘಟನೆ ಸಂಭವಿಸಿರಲಿಲ್ಲ. ಬಾಣಂತಿಯರ ಸಾವಿಗೆ ಐವಿ ರಿಂಗರ್ ದ್ರಾವಣ ಕೂಡ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆಗ ಸರಬರಾಜು ಆದ ಎಲ್ಲ ಐವಿ ರಿಂಗರ್‌ ಲ್ಯಾಕ್ಟೇಟ್ ದ್ರಾವಣ ಬ್ಯಾಚ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಪಾಸಿಟಿವ್ ವರದಿ ಬಂದಿದೆ. ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಐವಿ ದ್ರಾವಣ ಔಷಧ ಸರಬರಾಜು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿಸಿದರು. 

ಜನಸಾಮಾನ್ಯರ ಆರೋಗ್ಯದ ಕಾಳಜಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಗುಣಮಟ್ಟದ ಔಷಧಿ ಸರಬರಾಜು ಮಾಡಬೇಕು. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಜಿಲ್ಲಾಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಶಸ್ತ್ರಚಿಕಿತ್ಸಾ ಕೇಂದ್ರಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ, ಹೆರಿಗೆ ಕೋಣೆಗಳ ಸಮುಚ್ಚಯ, ಶಸ್ತ್ರಚಿಕಿತ್ಸೆ ಕೊಠಡಿ, ಬಾಣಂತಿಯರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ ಮತ್ತು ಆರೈಕೆ ಕ್ರಮಗಳ ಕುರಿತು ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್. ಬಸರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾ‌ರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಬಳ್ಳಾರಿ ತಾಲೂಕು ತಹಶೀಲ್ದಾರ ಗುರುರಾಜ ಸೇರಿದಂತೆ ಜಿಲ್ಲಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಇದ್ದರು.

ಮೃತ ಬಾಣಂತಿಯ ಮನೆಗೆ ಅಧ್ಯಕ್ಷೆ ಭೇಟಿ

ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಣಂತಿ ನಂದಿನಿ ಅವರ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಗುರುವಾರ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮಕ್ಕಳಿಗೆ ಉನ್ನತ ಶಿಕ್ಷಣ, ಭದ್ರತೆ ಮತ್ತು ಮೃತ ಬಾಣಂತಿಯರ ಮಕ್ಕಳ ಜವಾಬ್ದಾರಿಯನ್ನು ಸರ್ಕಾರ ವಹಿಸುವಂತೆ, ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಇತರೆ ಸೌಲಭ್ಯ ಸರ್ಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿಯೇ 6 ತಿಂಗಳಲ್ಲಿ 29 ಬಾಣಂತಿಯರು, 1 ವರ್ಷದಲ್ಲಿ 322 ನವಜಾತ ಶಿಶುಗಳ ಸಾವು

ಸರ್ಕಾರವು ಘೋಷಿಸಿದ ಪರಿಹಾರವನ್ನು ₹2 ಲಕ್ಷದಿಂದ 5 ಲಕ್ಷದವರೆಗೆ ನೀಡಲು ಪರಿಷ್ಕರಿಸಿ ಆದೇಶಿಸಿದೆ. ಮಕ್ಕಳ ಆರೈಕೆ, ಸಮಗ್ರ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಧೈರ್ಯ ತುಂಬಿದರು. ಇದಕ್ಕೂ ಮುನ್ನ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆ ಗೆ ಆಗಮಿಸಿದ್ದ ಹೊರ ರೋಗಿಗಳೊಂದಿಗೆ ಮಾತನಾಡಿ, ಆರೋಗ್ಯ ವಿಚಾರಿಸಿದರು.

ನಂತರ ಮೋಕಾದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ದಾಸ್ತಾನು ಮಾಡಲಾಗಿರುವ ಆಹಾರ, ಮಕ್ಕಳಿಗೆ ವಿತರಿಸಿರುವ ಆಹಾರ, ಮಕ್ಕಳ ಆರೋಗ್ಯ ಮತ್ತು ಮಕ್ಕಳ ಹಾಜರಾತಿ ಕುರಿತಂತೆ ಮಾಹಿತಿ ಪಡೆದುಕೊಂಡರು. ಮೆನು ಪ್ರಕಾರ ಮಕ್ಕಳಿಗೆ ಆಹಾರ ನೀಡಬೇಕು. ಅಂಗನವಾಡಿ ಕಾಪಾಡಿಕೊಳ್ಳಬೇಕು ನೀಡಿದರು. ಕೇಂದ್ರದಲ್ಲಿ ಶುಚಿತ್ವ ಎಂದು ನಿರ್ದೇಶನ ಈ ವೇಳೆ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‌ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ತಹಶೀಲ್ದಾರ ಗುರುರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios