ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ: ಕೊಡಗಿನ ಕಗ್ಗೋಡ್ಲಿನಲ್ಲಿ ಆಡಿ ಸಂಭ್ರಮಿಸಿದ ಮಕ್ಕಳು ಮಹಿಳೆಯರು ಪುರುಷರು
ಕೃಷಿ ಚಟುವಟಿಕೆಗೆ ಸಿದ್ಧಗೊಂಡ ಗದ್ದೆಗಳಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳು ಸಂಘಟನೆಗೊಳ್ಳುತ್ತಿದ್ದು ಪುಟ್ಟ ಬಾಲಕರಿಂದ ಹಿಡಿದು ಎಲ್ಲಾ ವಯೋಮಾನದ ಜನರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.11): ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಭರ್ಜರಿ ಮಳೆ ಸುರಿದು ಇದೀಗ ಬಿಡುವು ನೀಡಿರುವುದರಿಂದ ಕೃಷಿ ಚಟುವಟಿಕೆಯೂ ಆರಂಭವಾಗಿವೆ. ಕೃಷಿ ಚಟುವಟಿಕೆಗೆ ಸಿದ್ಧಗೊಂಡ ಗದ್ದೆಗಳಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳು ಸಂಘಟನೆಗೊಳ್ಳುತ್ತಿದ್ದು ಪುಟ್ಟ ಬಾಲಕರಿಂದ ಹಿಡಿದು ಎಲ್ಲಾ ವಯೋಮಾನದ ಜನರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಯುವ ಒಕ್ಕೂಟಗಳ ಸಹಯೋಗದಲ್ಲಿ ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲಿನಲ್ಲಿ ನಡೆದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ನೂರಾರು ಕ್ರೀಡಾಪ್ರೇಮಿಗಳು ಕೆಸರು ಕ್ರೀಡೆಯಲ್ಲಿ ಭಾಗವಹಿಸಿ ಮಿಂದೆದ್ದರು.
ಮಹಿಳೆಯರಿಗಾಗಿ ವಾಲಿಬಾಲ್, ಥ್ರೋಬಾಲ್, ನೂರು ಮೀಟರ್ ಓಟ ಸೇರಿದಂತೆ ವಿವಿಧ ಕ್ರೀಡೆಗಳು ನಡೆದವು. ಪುರುಷರಿಗಾಗಿ ಸಾಂಪ್ರದಾಯಿಕ ಕ್ರೀಡೆಯಾದ ಹಗ್ಗ ಜಗ್ಗಾಟದ ಜೊತೆಗೆ ವಾಲಿಬಾಲ್ ಮತ್ತು ಓಟದ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಕೆರಸು ಗದ್ದೆ ಓಟದ ಸ್ಪರ್ಧೆ, ವಾಲಿಬಾಲ್ ಸ್ಪರ್ಧೆಗಳು ನಡೆದವು. ಪ್ರಾಥಮಿಕ ಶಾಲಾ ಬಾಲಕಿಯರ ನೂರು ಮೀಟರ್ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರಿಗಾಗಿ 200 ಮೀಟರ್ ಓಟದ ಸ್ಪರ್ಧೆ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರಿಗಾಗಿ 400 ಮೀಟರ್ ಓಟದ ಸ್ಪರ್ಧೆಗಳು ನಡೆದವು.
ಅಲ್ಲದೆ ಪದವಿ ಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳ ವಿಭಾಗದಲ್ಲೂ ಹಲವು ಕೆಸರು ಗದ್ದೆ ಕ್ರೀಡೆಗಳು ನಡೆದವು. ಸುಳ್ಯ, ಪುತ್ತೂರು, ಉಡುಪಿ, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಸಾಮಾನ್ಯ ಮೈದಾನದಲ್ಲಿ ನಡೆಯುವ ಕ್ರೀಡೆಗಳಂತೆಯೇ ಕೆಸರು ಗದ್ದೆಗಳ ಕ್ರೀಡೆಯಲ್ಲೂ ಭಾಗವಹಿಸಿ ಸಖತ್ ಪೈಪೋಟಿ ನಡೆಸಿದರು. ಅದರಲ್ಲೂ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ನಡೆದ ಹಗ್ಗ ಜಗ್ಗಾಟದ ಸ್ಪರ್ಧೆ ರೋಚಕವಾಗಿತ್ತು. ಹಗ್ಗ ಹಿಡಿದ ಬಲಿಷ್ಠ ತಂಡಗಳು ಗೆಲುವಿಗಾಗಿ ಒಂದಿಂಚು ಹಗ್ಗವನ್ನು ಅತ್ತಿಂದಿತ್ತ ಬಿಡದೆ ಬಿಡದೆ ಸೆಣಸಿದವು.
ದೇವೇಗೌಡರ ವಯಸ್ಸಿಗೆ ಮರ್ಯಾದೆ ಕೊಡುವುದು ಕಲಿಯಬೇಕು: ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್
ಅದರಲ್ಲೂ ಮಹಿಳೆಯರ ಥ್ರೋಬಾಲ್ ಪಂದ್ಯದಯ ಸೆಣೆಸಾಟ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕ್ರೀಡಾಪಟುಗಳ ವಿವಿಧ ಪಂದ್ಯಗಳನ್ನು ನೋಡಿದ ಕ್ರೀಟವಡಾಪಟುಗಳು ಶಿಳ್ಳೆ ಕೇಕೆ ಹಾಕಿ ಕಣ್ತುಂಬಿಕೊಂಡು ಎಂಜಾಯ್ ಮಾಡಿದರು. ಕ್ರೀಡೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಕ್ರೀಡೆಯನ್ನು ಎಂಜಾಯ್ ಮಾಡುತ್ತಿದ್ದೇವೆ ಎಂದು ಅಭಿಪ್ರಾಯಿಸಿದರು.