Asianet Suvarna News Asianet Suvarna News

ಶಿವಮೊಗ್ಗ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ; ಸಚಿವ ಭೈರತಿ ಬಸವರಾಜ್

ದೇಶದ ಸ್ಮಾರ್ಟ್‌ಸಿಟಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಶಿವಮೊಗ್ಗ ಸಮಗ್ರ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

State govt gives Full support to Shivamogga Comprehensive Development Says Minister Byrathi Basavaraj
Author
Shivamogga, First Published Jun 2, 2020, 8:46 AM IST

ಶಿವಮೊಗ್ಗ(ಜೂ.02): ನಗರದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ಮಾರ್ಟ್‌ಸಿಟಿ ಕಾಮಗಾರಿ ಹಾಗೂ ಮಹಾನಗರ ಪಾಲಿಕೆಯ ಅಮೃತ್‌ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ವಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಸಲಹೆ-ಸೂಚನೆಗಳನ್ನು ಪಡೆದು, ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ವೇಗ ನೀಡಲಾಗುವುದು ಎಂದರು.

ಸುಮಾರು 80 ಕೋಟಿ ರು. ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಿದ ಅವರು, ಕಾಮಗಾರಿ ವೇಳೆ ಎದುರಾಗುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿ, ಅಲ್ಪಾವಧಿಯಲ್ಲಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲಾಗುವುದು. ಜನೋಪಯೋಗಿ ಹಾಗೂ ರಚನಾತ್ಮಕವಾದ ಕಾರ್ಯಕ್ರಮಗಳಲ್ಲಿ ಎಲ್ಲರೂ ಜನಹಿತ ಗಮನದಲ್ಲಿಟ್ಟುಕೊಂಡು ಚಿಂತಿಸಬೇಕು. ಜಾತಿಬೇಧ ಮತ್ತು ಪಕ್ಷ ಮರೆತು ಕಾಮಗಾರಿಗಳು ಯಶಸ್ವಿಯಾಗಿ ಮುಗಿಯುವಂತೆ ಹಾಗೂ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಅವರು, ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ಎರಡನೇ ಹಂತದಲ್ಲಿ ಮಂಜೂರಾಗಿದ್ದರೂ ದೇಶದಲ್ಲಿ 18ನೆಯ ಹಾಗೂ ರಾಜ್ಯದಲ್ಲಿ ಮೂರನೆಯ ಸ್ಥಾನದಲ್ಲಿ ಗುರುತಿಸುವಂತಾಗಿರುವುದು ಸಂತಸದ ವಿಷಯ. ಕಾಮಗಾರಿಗಳು ಅಚ್ಚುಕಟ್ಟಾಗಿ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಕಾರಣಾಂತರಗಳಿಂದ ಕಾಮಗಾರಿಯ ಮಧ್ಯೆ ಕೈಕೊಟ್ಟು ಹೋಗುವ ಗುತ್ತಿಗೆದಾರರನ್ನು ದೂರವಿಟ್ಟು ಶಾಶ್ವತ ಕೆಲಸಕ್ಕೆ ಮುಂದಾಗುವವರನ್ನು ಆಯ್ಕೆ ಮಾಡಬೇಕು. ಇದರಿಂದ ನಗರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ಹೇಳಿದರು.

ಪರಿಹಾರಕ್ಕೆ 1.77 ಲಕ್ಷ ಆಟೋ, ಟ್ಯಾಕ್ಸಿ ಚಾಲಕರ ಅರ್ಜಿ!

ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವ ಕೆ. ಎಸ್‌. ಈಶ್ವರಪ್ಪ ಅವರು, ಕಾಮಗಾರಿ ನಡೆಸುವಾಗ ಎಲ್ಲರಲ್ಲೂ ಹೊಂದಾಣಿಕೆ ಇರಬೇಕು. ಪಕ್ಷಬೇಧ ಮರೆತು ಶಿವಮೊಗ್ಗದಲ್ಲಿ ಕೆಲಸ ನಡೆಯುತ್ತಿದೆ. ಚುನಾವಣೆಯಲ್ಲಿ ಮಾತ್ರ ರಾಜಕೀಯ. ಆ ನಂತರ ಸಮಗ್ರ ಬೆಳವಣಿಗೆಯೇ ಎಲ್ಲರ ಗುರಿಯಾಗಿರುತ್ತದೆ. ಪಾಲಿಕೆ ಎಲ್ಲ ಸದಸ್ಯರು ಅಭಿವೃದ್ಧಿಗೆ ಉತ್ತಮ ಸಹಕಾರ ಕೊಡುತ್ತಿದ್ದಾರೆ. ಏನೇ ಸಮಸ್ಯೆ ಇದ್ದರೂ ಸಚಿವರ ಎದುರು ಮನಬಿಚ್ಚಿ ಅದನ್ನು ನಿವೇದಿಸಿಕೊಳ್ಳಲು ಅವಕಾಶವಿದೆ. ಒಟ್ಟಿನಲ್ಲಿ ಕಾಮಗಾರಿಗಳು ಸುಲಲಿತವಾಗಿ, ನಿರ್ದಿಷ್ಟಸಮಯದಲ್ಲಿ ಮುಗಿಯುವಂತಾಗಬೇಕು ಎಂದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ, ಮೇಯರ್‌ ಸುವರ್ಣಶಂಕರ್‌, ಉಪಾಧ್ಯಕ್ಷೆ ಸುರೇಖಾ ಮುರಳೀಧರ್‌, ವಿಪ ಸದಸ್ಯ ಆಯನೂರು ಮಂಜುನಾಥ್‌, ಆರ್‌.ಪ್ರಸನ್ನಕುಮಾರ್‌, ಶಾಸಕ ಕೆ.ಬಿ.ಅಶೋಕನಾಯ್ಕ, ಆರ್ಯವೈಶ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿ.ಎಸ್‌.ಅರುಣ್‌, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಇದ್ದರು.

ಆಯಕ್ತ ಚಿದಾನಂದ ವಟಾರೆ ಸ್ವಾಗತಿಸಿದರು. ಸಾರ್ಟ್‌ ಸಿಟಿ ನಡೆದುಬಂದ ದಾರಿ ಮತ್ತು ಶಿವಮೊಗ್ಗದಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಮಾಹಿತಿ ನೀಡಿದರು. ವಾರ್ತಾ ಇಲಾಖೆಯ ಆರ್‌. ಮಾರುತಿ ಸ್ವಾಗತಿಸಿದರು. ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಶಿವಯೋಗಿ ವಂದಿಸಿದರು.
 

Follow Us:
Download App:
  • android
  • ios