ಬೆಂಗಳೂರು(ಫೆ.23): ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವಿಕೆ ಹಾಗೂ ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಅಭಿಯಾನ’ ಯೋಜನೆಯ ಅನುದಾನ ದುರುಪಯೋಗ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 2015-16ರಿಂದ 2017-18ರ ವರೆಗೆ ರಸ್ತೆ ಗುಂಡಿ ಮುಚ್ಚಲು 1,116 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ನೂರಾರು ಕೋಟಿ ರು. ಅವ್ಯವಹಾರ ನಡೆದಿದೆ ಹಾಗೂ ಇದೇ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬಿಡುಗಡೆಯಾದ 108 ಕೋಟಿ ಅನುದಾನದಲ್ಲಿ 92 ಕೋಟಿ ಅನುದಾನವನ್ನು ಬೇರೆ ಕಾರ್ಯಕ್ರಮಗಳಿಗೆ ಬಳಸಿ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌ ದೂರು ನೀಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ದೂರಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ದೂರಿನಲ್ಲಿ ಉಲ್ಲೇಖಿಸಿರುವ ಆಪಾದನೆಗಳು ಸಾಬೀತಾಗಿವೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯ ಅನುದಾನವನ್ನು ದುರುಪಯೋಗ ಪಡಿಸಿಕೊಂಡು ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿ ಸೇರಿದಂತೆ ಯೋಜನೆಯ ಮೂಲ ಉದ್ದೇಶೇತರ ಕಾರ್ಯಗಳಿಗೆ ಬಳಸಿ ನೀಡಿ ಜಾಬ್‌ಕೋಡ್‌ ನೀಡಿರುವುದು ದೃಢಪಟ್ಟಿದೆ. ಅಲ್ಲದೆ, ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಬಿಬಿಎಂಪಿ ಅಧಿಕಾರಿಗಳು ಕೂಡ ಅಲ್ಲಗಳೆದಿಲ್ಲ ಹಾಗೂ ಈ ಸಂಬಂಧ ಯಾವುದೇ ವಿವರಣೆಯನ್ನೂ ನೀಡಿಲ್ಲ. ಇನ್ನು, ಈ ಅನುದಾನ ದುರುಪಯೋಗದಲ್ಲಿ ಜನಪ್ರತಿನಿಧಿಗಳ ಪಾತ್ರ ಇರುವ ಬಗ್ಗೆ ದೂರುದಾರರು ಹಾಗೂ ಅಧಿಕಾರಿಗಳು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಮುಖ್ಯ ಜಾಗೃತ ಅಧಿಕಾರಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ವರದಿ ಆಧಾರದ ಮೇಲೆ ಸರ್ಕಾರ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ತನಿಖಾ ದಳಕ್ಕೆ ವಹಿಸಿ ಆದೇಶ ಮಾಡಿದೆ.

ಬೇರೆ ಉದ್ದೇಶಕ್ಕೆ ಅನುದಾನ ಬಳಕೆ

ಕೇಂದ್ರ ಸರ್ಕಾರ 2016-17 ಹಾಗೂ 2017-18ನೇ ಸಾಲಿನಲ್ಲಿ ಬಿಬಿಎಂಪಿಗೆ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ .108 ಕೋಟಿ ಅನುದಾನ ನೀಡಿತ್ತು. ಆದರೆ, ಈ ಹಣದಲ್ಲಿ ಯೋಜನೆಯ ಉದ್ದೇಶಕ್ಕೆ ಕೇವಲ .16 ಕೋಟಿ ಬಳಸಲಾಗಿದ್ದು, ಉಳಿದ .92 ಕೋಟಿಯನ್ನು ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡು ಅವ್ಯವಹಾರ ಎಸಗಲಾಗಿದೆ. ಮಾಜಿ ಸಚಿವ ಕೃಷ್ಣಭೈರೇಗೌಡ, ಎಂ.ಕೃಷ್ಣಪ್ಪ, ಶಾಸಕರಾದ ಬೈರತಿ ಬಸವರಾಜ, ಎನ್‌.ಎ.ಹ್ಯಾರಿಸ್‌, ಎಸ್‌.ಟಿ.ಸೋಮಶೇಖರ್‌, ಪ್ರಿಯಾ ಕೃಷ್ಣ, ದಿನೇಶ್‌ ಗುಂಡೂರಾವ್‌, ಜಮೀರ್‌ ಅಹ್ಮದ್‌ ಅವರು ಪಾಲಿಕೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ‘ಸ್ವಚ್ಛ ಭಾರತ ಅಭಿಯಾನ’ದ ಅನುದಾನವನ್ನು ತಮ್ಮ ಕ್ಷೇತ್ರಗಳ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಮಾಡಿಸಿಕೊಂಡು ಯೋಜನೆಯ ಮೂಲ ಉದ್ದೇಶವನ್ನು ಹಾಳುಮಾಡಿದ್ದಾರೆ ಎಂದು ಎನ್‌.ಆರ್‌.ರಮೇಶ್‌ ದೂರಿನಲ್ಲಿ ಆರೋಪಿಸಿದ್ದರು.