ಬೆಂಗಳೂರು(ಡಿ.10): ಐಎಂಎ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಐಎಂಎ ಹಗರಣದ ಕುರಿತು ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಈ ಮಾಹಿತಿ ನೀಡಿದೆ.
ಈ ಕುರಿತು ಲಿಖಿತ ಹೇಳಿಕೆ ಸಲ್ಲಿಸಿದ ಸರ್ಕಾರಿ ವಕೀಲರು, ಈ ಹಗರಣದ ಬಗ್ಗೆ ತನಿಖೆ ವೇಳೆ ಆರ್‌.ರೋಷನ್‌ ಬೇಗ್‌ ಐಎಂಎ ಸಂಸ್ಥೆಯ ವಾಣಿಜ್ಯ ಚಟುವಟಿಕೆಗಳ ಫಲಾನುಭವಿಯಾಗಿದ್ದರ ಸಾಕ್ಷ್ಯ ಹಾಗೂ ದಾಖಲೆ ದೊರಕಿದೆಯೇ ಎಂಬ ಮಾಹಿತಿಯನ್ನು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದಿಂದ ಇಂತಹ ದಾಖಲೆಗಳು ಲಭ್ಯವಾದರೆ ರೋಷನ್‌ಬೇಗ್‌ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

ಐಎಂಎ ಬಹುಕೋಟಿ ಹಗರಣ : ರೋಷನ್‌ ಬೇಗ್‌ಗೆ ಜಾಮೀನು

ಠೇವಣಿದಾರರಿಗೆ ಭಾಗಶಃ ಹಣ ಹಿಂತಿರುಗಿಸುವ ಸಂಬಂಧ ಆನ್‌ಲೈನ್‌ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಡಿ.24ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಿಬಿಐ ಪರ ವಾದ ಮಂಡಿಸಿದ ವಕೀಲ ಪಿ.ಪ್ರಸನ್ನ ಕುಮಾರ್‌, 2021ರ ಏಪ್ರಿಲ್‌ ಅಂತ್ಯಕ್ಕೆ ಪ್ರಕರಣದ ತನಿಖೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.