Asianet Suvarna News Asianet Suvarna News

ಬಾಗಲಕೋಟೆ: ಐತಿಹಾಸಿಕ ತಾಣಗಳ ಸ್ಥಳಾಂತರಕ್ಕೆ ಸರ್ವೆ ಕಾರ್ಯ ಶುರು!

ಐತಿಹಾಸಿಕ ಐಹೊಳೆ, ಪಟ್ಟದಕಲ್ಲು ಸೇರಿ ಬಾದಾಮಿಯ ಕೆಲವು ಮನೆಗಳ ಸ್ಥಳಾಂತರದ ಸರ್ವೆ ಕಾರ್ಯ ಆರಂಭ| ಐಹೊಳೆಯ 1032, ಬಾದಾಮಿಯ 96 ಸೇರಿ ಪಟ್ಟದಕಲ್ಲು ಗ್ರಾಮ ಸಂಪೂರ್ಣ ಸ್ಥಳಾಂತರ|ಈ ಕುರಿತು ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚನೆ|

Started the Survey for Relocation of Historical Sites in Bagalkot District
Author
Bengaluru, First Published Nov 21, 2019, 2:47 PM IST

ಮಲ್ಲಿಕಾರ್ಜುನ ಹೊಸಮನಿ‌

ಬಾಗಲಕೋಟೆ(ನ.21): ಪದೇ ಪದೇ ಪ್ರವಾಹಕ್ಕೆ ತುತ್ತಾಗಿ, ಇತ್ತ ಇರಲು ಆಗದೇ, ಅತ್ತ ಹೋಗಲು ಆಗದೇ ಅತಂತ್ರವಾಗಿದ್ದ ಜಿಲ್ಲೆಯ ಐತಿಹಾಸಿಕ ಐಹೊಳೆ, ಪಟ್ಟದಕಲ್ಲು ಸೇರಿ ಬಾದಾಮಿಯ ಕೆಲವು ಮನೆಗಳ ಸ್ಥಳಾಂತರದ ಸರ್ವೆ ಕಾರ್ಯ ಆರಂಭಿಸುವ ಮೂಲಕ ಸರ್ಕಾರ ಸ್ಥಳಾಂತರಕ್ಕೆ ಮುಂದಾಗಿದೆ. 

ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಖಡಕ್ ಸಂದೇಶದ ಬೆನ್ನಲ್ಲೆ ಐತಿಹಾಸಿಕ ತಾಣಗಳ ಸ್ಥಳಾಂತರಕ್ಕೆ ಮುನ್ನುಡಿ ಬರೆದಂತಾಗಿದೆ. ಸರ್ವೆ ಕಾರ್ಯ ಮುಗಿಯುತ್ತಲೇ ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಕೆಯಾಗಲಿದೆ. ಗ್ರಾಮಗಳ ಸ್ಥಳಾಂತರದ ಬಗ್ಗೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಐಹೊಳೆಯ 1032, ಬಾದಾಮಿಯ 96 ಸೇರಿ ಪಟ್ಟದಕಲ್ಲು ಗ್ರಾಮದ ಸಂಪೂರ್ಣ ಸ್ಥಳಾಂತರ ಮಾಡುವ ಬಗ್ಗೆ ಸರ್ವೆ ಕಾರ್ಯ ಆರಂಭವಾಗಿದೆ. ಪುರಾತತ್ವ ಇಲಾಖೆ, ಪ್ರವಾಸೋಧ್ಯಮ, ಕಂದಾಯ ಇಲಾಖೆ ಸಹಯೋಗದಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. 

ಬಾದಾಮಿ ಚಾಲುಕ್ಯರ ಕಾಲದ ಐತಿಹಾಸಿಕ ಐಹೊಳೆ, ಪಟ್ಟದಕಲ್ಲು ಗ್ರಾಮಗಳ ಸಂಪೂರ್ಣ ಸ್ಥಳಾಂತರ ಕಾರ್ಯ ಇಂದಿಗೂ ಆಗಿಲ್ಲ. ಅತ್ತ ಪುರಾತತ್ವ ಇಲಾಖೆ ಈ ಗ್ರಾಮಗಳನ್ನ ತಮ್ಮ ಸ್ವಾಧೀನಕ್ಕೆ ಒಳಪಡಿಸಿದ ಮೇಲಂತೂ ಗ್ರಾಮಸ್ಥರು ಇನ್ನಿಲ್ಲದ ತೊಂದರೆ ಪಡುವಂತಾಗಿತ್ತು. ಈ ಬಗ್ಗೆ ರಾಜ್ಯದಲ್ಲಿ ಬಂದು ಅನೇಕ ಸರ್ಕಾರಗಳಿಗೆ ಇಲ್ಲಿನ ಗ್ರಾಮಸ್ಥರು ಪದೇ ಪದೇ ಹೇಳಿದ್ರೂ ಕ್ಯಾರೆ ಅಂದಿರಲಿಲ್ಲ. ಆದ್ರೆ ಈ ಬಾರಿ ಬಂದು ಹೋದ ಪ್ರವಾಹ ಇದೀಗ ಈ ಚಾಲುಕ್ಯರ ಐತಿಹಾಸಿಕ ತಾಣಗಳ ಪಾಲಿಗೆ ಮುಕ್ತಿ ನೀಡಬಹುದಾದ ಕಾಲ ಕೂಡಿ ಬಂದಂತಾಗಿದೆ. 

ಇತ್ತೀಚಿಗೆ ಪ್ರವಾಹ ವೀಕ್ಷಣೆಗೆ ಬಂದಿದ್ದ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ಗರೀಮಾ ಪವಾರ್ ಅವರ ನೇತೃತ್ವದಲ್ಲಿ ಐಹೊಳೆ, ಪಟ್ಟದಕಲ್ಲು ಗ್ರಾಮಗಳಿಗೆ ತೆರಳಿ ಈಗಾಗಲೇ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಗಿದ್ದು, ಗ್ರಾಮಸ್ಥರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಸೋಧ್ಯಮ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ, ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಗಳ ಸಹಯೋಗದಲ್ಲಿ ಐಹೊಳೆ, ಪಟ್ಟದಕಲ್ಲು ಸೇರಿದಂತೆ ಬಾದಾಮಿಯ ಅಗಸ್ತ್ಯ ತೀರ್ಥದ ಪಕ್ಕದಲ್ಲಿರೋ ಮನೆಗಳ ಸರ್ವೆ ಕಾರ್ಯ ಆರಂಭಗೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೆಶಕ ದೇವೇಂದ್ರ ಧನಪಾಲ್ ಅವರು ಹೇಳಿದ್ದಾರೆ. 

"

ಈ ಬಗ್ಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಈ ಸರ್ವೆ ಕಾರ್ಯದಂತೆ ಈಗಾಗಲೇ ಐಹೊಳೆಯ 1093 ಮನೆಗಳು, ಬಾದಾಮಿಯ ಅಗಸ್ತ್ಯ ತೀರ್ಥ ಬಳಿ ಇರುವ 93 ಮನೆಗಳ ಸರ್ವೇ ನಡೆಯುತ್ತಿದ್ದು, ಇತ್ತ ಪಟ್ಟದಕಲ್ಲು ಗ್ರಾಮದ ಸಂಪೂರ್ಣ ಸ್ಥಳಾಂತರಕ್ಕೆ ಎಲ್ಲ ಮನೆಗಳ ಮತ್ತು ಸರ್ಕಾರಿ ಕಟ್ಟಡಗಳು, ಗೌಂಟಾನ್ ಜಾಗೆಗಳ ಸರ್ವೆ ಕಾರ್ಯ ನಡೆಯುತ್ತಿದೆ. ಈ ಮೂಲಕ ಪ್ರತಿಯೊಂದು ಆಸ್ತಿಗಳ ಲೆಕ್ಕ ಹಾಕಿ ಅವರಿಗೆ ಅಗತ್ಯವಾಗಿ ಬೇಕಿರುವ ಜಮೀನು, ಅನುದಾನ, ಮೂಲಭೂತ ಸೌಲಭ್ಯಕ್ಕೆ ಸೇರಿದಂತೆ ಅಗತ್ಯವಾದ ಅನುದಾನವನ್ನ ಲೆಕ್ಕಹಾಕಿ ಈ ಕುರಿತು ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. 

ಇದಾದ ಬಳಿಕ ಮುಂಬರುವ ಬಜೆಟ್‌ನಲ್ಲಿ ಅದಕ್ಕೆ ಹಣ ಕಾಯ್ದಿರಿಸಿ ಈ ಬಾರಿ ಹೇಗಾದ್ರೂ ಮಾಡಿ ಐತಿಹಾಸಿಕ ತಾಣಗಳ ಸ್ಥಳಾಂತರ ಮಾಡಬೇಕೆನ್ನೋದು ಸರ್ಕಾರದ ಇಂಗಿತವಾಗಿದೆ. ಇನ್ನು ಹಲವು ವರ್ಷಗಳಿಂದ ಈ ಐತಿಹಾಸಿಕ ತಾಣಗಳ ಸ್ಥಳಾಂತರಕ್ಕೆ ಬೇಡಿಕೆ ಇದ್ರೂ ಕೇಳೋರು ಇರಲಿಲ್ಲ, ಆದ್ರೆ ಇದೀಗ 2009 ರ ನಂತರ ಮತ್ತೆ ಈ ವರ್ಷ ಪ್ರವಾಹ ಬಂದಿರುವ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ಸ್ಥಳಾಂತರ ಕಾರ್ಯ ಜೊತೆಗೆ ಮಲಪ್ರಭಾ ನದಿ ತೀರದಲ್ಲಿದ್ದು ಪ್ರವಾಹಕ್ಕೆ ತುತ್ತಾದ ಐಹೊಳೆ, ಪಟ್ಟದಕಲ್ಲು ಗ್ರಾಮಗಳನ್ನ ಸಂಪೂರ್ಣ ಸ್ಥಳಾಂತರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.                 
 

Follow Us:
Download App:
  • android
  • ios