ತುಮಕೂರು [ಸೆ.13] :  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಜೆಡಿಎಸ್‌ನ ಮತ್ತೊಬ್ಬ ಮುಖಂಡ, ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಬಹಿರಂಗ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಜಿ.ಟಿ ದೇವೇಗೌಡ ವಾಗ್ದಾಳಿ ಬೆನ್ನಲ್ಲೇ, ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ಅವರನ್ನು ಹಿಡಿಯಬಾರದು ಅಂತ ಕಾನೂನು ಇದೆಯಾ? ಕದ್ದಾಲಿಕೆ ಮಾಡಿದ್ದರೆ ಅವರನ್ನು ಹಿಡಿದುಕೊಂಡು ಹೋಗಲಿ ಬಿಡಿ ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕದ್ದಾಲಿಕೆ ಮಾಡಿದ್ದರೆ ಕುಮಾರಸ್ವಾಮಿ ಅವರನ್ನು ಹಿಡಿದುಕೊಂಡು ಹೋಗಲಿ ಬಿಡಿ. ಬೇಡ ಎಂದವರು ಯಾರು? ಅವರು ಮಾಡಬಾರದ್ದನ್ನು ಮಾಡಿ ದುಡ್ಡು ಹೊಡೆದಿದ್ದರೆ ಹಿಡಿದುಕೊಂಡು ಹೋಗುತ್ತಾರೆ. ಹಿಡಿಯಬಾರದು ಅಂತ ಕಾನೂನು ಏನಾದ್ರೂ ಇದೆಯಾ? ಫೋನ್‌ ಕದ್ದಾಲಿಕೆ ಆಗುತ್ತಿದ್ದದ್ದು ನಿಜ. ಇದಕ್ಕೆ ಯಾರು ಹೊಣೆಗಾರರೋ ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ತಮ್ಮ ಫೋನ್‌ ಕೂಡ ಕದ್ದಾಲಿಕೆ ಆಗುತ್ತಿತ್ತು ಎಂದು ಹೇಳಿದ ಶ್ರೀನಿವಾಸ್‌, ವಿಷಯ ಗೊತ್ತಾಗುತ್ತಿದ್ದಂತೆ ನನ್ನ ನಂಬರ್‌ ಬದಲಿಸಿದೆ. ನಾನು ಸರ್ಕಾರದ ಅಂಗವಾಗಿದ್ದರೂ ನನ್ನ ಫೋನ್‌ ಕೂಡ ಕದ್ದಾಲಿಕೆ ಆಗುತ್ತಿತ್ತು. ಕುಮಾರಸ್ವಾಮಿ ನನ್ನ ಮೇಲೂ ಅನುಮಾನಪಟ್ಟಿದ್ದರೋ ಏನೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆಶಿ ಮೇಲೆ ಪ್ರೀತಿ ಇಲ್ಲ:  ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಒಕ್ಕಲಿಗ ಸಂಘಟನೆಗಳು ಬೆಂಗಳೂರಲ್ಲಿ ಆಯೋಜಿಸಿದ್ದ ಪ್ರತಿಭಟನೆಗೆ ಕುಮಾರಸ್ವಾಮಿ ಗೈರಾಗಿದ್ದಕ್ಕೂ ಶ್ರೀನಿವಾಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.‘ಅವರಿಗೆ ಡಿಕೆಶಿ ಮೇಲೆ ಪ್ರೀತಿ ಇಲ್ಲ. ಹೀಗಾಗಿ ಸಮುದಾಯದ ಹೋರಾಟಕ್ಕೆ ಬರಲಿಲ್ಲ’ ಎಂದು ಹೇಳಿದರು.

ಏತನ್ಮಧ್ಯೆ, ಪ್ರತಿಭಟನೆಗೆ ಆಹ್ವಾನ ಇರಲಿಲ್ಲ, ಹಾಗಾಗಿ ಪಾಲ್ಗೊಂಡಿಲ್ಲ ಎಂಬ ಕುಮಾರಸ್ವಾಮಿ ಸ್ಪಷ್ಟನೆಗೂ ತಿರುಗೇಟು ನೀಡಿದ ಶಾಸಕ, ಆಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮ ಇದಲ್ಲ. ಸಮುದಾಯದ ಕಾರ್ಯಕ್ರಮ ನಡೆಯುವಾಗ ಆಮಂತ್ರಣ ಕೊಡುವಂತದ್ದು ಎಲ್ಲೂ ಇಲ್ಲ. ಪ್ರತಿಭಟನೆಗೆ ಬಂದಿದ್ದ 25 ಸಾವಿರ ಜನಕ್ಕೂ ಯಾರಾದ್ರೂ ಆಮಂತ್ರಣ ಕೊಟ್ಟಿದ್ದರಾ ಎಂದು ಖಾರವಾಗಿ ಪ್ರಶ್ನಿಸಿದರು.

‘ಸಮುದಾಯದ ಪ್ರತಿಭಟನೆಗೆ ಕುಮಾರಸ್ವಾಮಿ ಬರಬೇಕು ಅಂತ ಏನೂ ಇಲ್ಲ. ನಮಗೆಲ್ಲ ಡಿ.ಕೆ.ಶಿವಕುಮಾರ್‌ ಮೇಲೆ ಪ್ರೀತಿ ಇತ್ತು. ಹೋಗಿದ್ದೆವು. ನಮ್ಮ ಸಮುದಾಯದ ಮುಖಂಡನ ಮೇಲೆ ಅನ್ಯಾಯ ಆದಾಗ ಪ್ರತಿಭಟಿಸುವುದು ನಮ್ಮ ಕರ್ತವ್ಯ’. ಕುಮಾರಸ್ವಾಮಿಗೆ ಆ ಭಾವನೆ ಇರಲಿಲ್ಲ. ಆ ಭಾವನೆ ಇದ್ದಿದ್ದರೆ ಖಂಡಿತ ಹೋರಾಟಕ್ಕೆ ಬರುತ್ತಿದ್ದರು ಎಂದರು.