*ಪ್ರತಿಮೆ ನಿರ್ಮಾಣ ವಿಳಂಬ ಬೊಮ್ಮಾಯಿ ಗಮನಕ್ಕೆ*ಕಾಮಗಾರಿಗಿಲ್ಲ ಅನುದಾನದ ಕೊರತೆಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ : ಬೊಮ್ಮಾಯಿ
ಬೆಂಗಳೂರು (ಫೆ. 11): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಿರ್ಮಿಸಲಾಗುತ್ತಿರುವ ನಾಡಪ್ರಭು ಕೆಂಪೇಗೌಡರ ( Kempegowda) ಪ್ರತಿಮೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಕಾಮಗಾರಿ ಚುರುಕುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹೊರತಂದಿರುವ ಕೆಂಪೇಗೌಡರ ಕುರಿತ ಕ್ಯಾಲೆಂಡರನ್ನು ವಿಧಾನಸೌಧದಲ್ಲಿ ಗುರುವಾರ ಬಿಡುಗಡೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶ ವಿದೇಶಗಳಿಂದ ಬರುವ ಪ್ರಯಾಣಿಕರೆಲ್ಲರೂ ಕೆಂಪೇಗೌಡರ ಪ್ರತಿಮೆಯನ್ನು ವೀಕ್ಷಿಸಬೇಕು. ಆ ಮೂಲಕ ಕೆಂಪೇಗೌಡರ ವ್ಯಕ್ತಿತ್ವವು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಬೇಕು ಎಂಬ ಉದ್ದೇಶದಿಂದ ವಿಮಾನ ನಿಲ್ದಾಣದ ಬಳಿ ಎಲ್ಲರ ಗಮನ ಸೆಳೆಯುವಂತಹ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಅಪಘಾತ
ಇದರ ಕಾಮಗಾರಿ ವೇಗಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಯೋಜನೆಗೆ ಅನುದಾನದ ಕೊರತೆ ಇಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲೇ ಘೋಷಿಸಿದಂತೆ ಪೂರ್ವ ನಿಗದಿತ ಅವಧಿಯೊಳಗೆ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಇದೇ ವೇಳೆ, ಕರ್ನಾಟಕದ ಹಿಜಾಬ್ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆಯಲ್ಲ ಎಂಬ ಪ್ರಶ್ನೆಗೆ ಮೊದಲು ಇಂತಹ ವಿಷಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತವೆ. ನಂತರ ಸ್ಥಳೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದ ಮುಖ್ಯಮಂತ್ರಿಗಳು, ಹಿಜಾಬ್ ಕೇಸರಿ ಶಾಲು ವಿವಾದ ಸಂಬಂಧ ನ್ಯಾಯಾಲಯ ಕೂಡ ಸೂಕ್ತ ತೀರ್ಪು ನೀಡಲು ನಾವು ಶಾಂತಿಯುತ ವಾತಾರವಣರನ್ನು ನಿರ್ಮಾಣ ಮಾಡಬೇಕು. ಮಕ್ಕಳಲ್ಲಿ ಯಾರೊಬ್ಬರೂ ಗೊಂದಲ ಸೃಷ್ಟಿಸುವುದು ಬೇಡ. ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಇದೇ ವೇಳೆ ಹೇಳಿದರು.ಈ ವೇಳೆ ಸಚಿವರಾದ ಅರಗ ಜ್ಞಾನೇಂದ್ರ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕ ರಾಜುಗೌಡ ಮತ್ತಿತರರಿದ್ದರು.
