ಸಭಾಪತಿಯಾಗಿ ಯಾಕಿದ್ದೀನೋ ಅನಿಸ್ತಿದೆ: ಹೊರಟ್ಟಿ
* ಶಾಸನ ಸಭೆಗಳಲ್ಲಿ ಸಮಾಜವಾದಿ ಚಿಂತನೆಗೆ ಸ್ಥಳವಿಲ್ಲ
* ಏಕಾಂತಯ್ಯಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ
* ಪ್ರಸ್ತುತ ಜಾತಿ, ಹಣ ಬಲ ಇರುವವರು ಶಾಸನ ಸಭೆಗಳಿಗೆ ಆಯ್ಕೆ
ಬೆಂಗಳೂರು(ಮಾ.13): ಶಾಸನ ಸಭೆಗಳಲ್ಲಿ ಸಮಾಜವಾದಿ ಚಿಂತನೆಗಳಿಗೆ ಸ್ಥಳವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಅಷ್ಟೇ ಅಲ್ಲ ಇಂದಿನ ಜನತೆಗೂ ಅಂತಹ ಅಂಶಗಳು ಅಗತ್ಯವಿಲ್ಲವಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ವಿಷಾದಿಸಿದರು. ಅಲ್ಲದೆ, ಅಂದಿನಂತೆ ಈಗ ಗಹನ ಚರ್ಚೆ ನಡೆಯದ ವಿಧಾನ ಪರಿಷತ್‌ನಲ್ಲಿ ಸಭಾಪತಿಯಾಗಿ ಯಾಕೆ ಕುಳಿತು ಕೊಂಡಿದ್ದೇನೊ ಎಂಬ ರೀತಿಯಲ್ಲಿ ಮನಸ್ಸಿಗೆ ಬೇಸರ ಆಗುತ್ತಿದೆ ಎಂದೂ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ(Kannada Sahitya Parishat) ಶನಿವಾರ ‘ಕನ್ನಡ ಜನಶಕ್ತಿ ಕೇಂದ್ರ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ, ಮಾಜಿ ಸಚಿವ ಚಿತ್ರದುರ್ಗದ ಎಚ್. ಏಕಾಂತಯ್ಯ ಅವರಿಗೆ 2021ನೇ ಸಾಲಿನ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಸಭಾಪತಿ ವಿರುದ್ಧವೇ FIR, ಹೊರಟ್ಟಿ ಪರ ನಿಂತ ಕಾಂಗ್ರೆಸ್-JDS ಸದಸ್ಯರು!
ಈ ಹಿಂದೆ ಮೌಲ್ಯಧಾರಿತ ರಾಜಕಾರಣಿಗಳು, ದುಡ್ಡು, ಜಾತಿಯ ಬಲವಿಲ್ಲದೆ ಗೆದ್ದು ಬರುತ್ತಿದ್ದರು. ಆದೆ ಪ್ರಸ್ತುತ ಜಾತಿ, ಹಣ ಬಲ ಇರುವವರು ಶಾಸನ ಸಭೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಇದರಿಂದ ಸಮಾಜವಾದಿ ಮತ್ತು ಮೌಲ್ಯಾಧಾರಿತ ಅಂಶಗಳಿಗೆ ಸ್ಥಳಾವಕಾಶ ಇಲ್ಲವಾಗಿದೆ ಎಂದರು.
ಮಾಜಿ ಸಚಿವ ದಿವಂಗತ ಎಂ.ಪಿ.ಪ್ರಕಾಶ್(MP Prakash) ಅವರು ಹೂವಿನ ಹಡಗಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಆದರೂ, ಅಲ್ಲಿಯ ಜನ ಅವರನ್ನು ಸೋಲಿಸಿದ್ದರು. ತಾವು ಶಿಕ್ಷಕರ ಕ್ಷೇತ್ರವಲ್ಲದೆ ಜನ ಪ್ರತಿನಿಧಿಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ ತಮ್ಮನ್ನೂ ಕೂಡ ಜನ ರಾಜಕಾರಣದಲ್ಲಿ ಈವರೆಗೂ ಮುಂದುವರೆಸಲು ಅವಕಾಶ ನೀಡುತ್ತಿರಲಿಲ್ಲ ಎಂದರು.
ಈ ಹಿಂದೆ ವಿಧಾನ ಪರಿಷತ್‌ಗೆ(Vidhan Parishat) ಗಂಗೂಬಾಯಿ ಹಾನಗಲ್(Gangubai Hanagal) ಸೇರಿದಂತೆ ಶ್ರೇಷ್ಠ ಸಾಧಕರು, ಶಿಕ್ಷಣ, ಸಂಗೀತ ಕ್ಷೇತ್ರದ ತಜ್ಞರು ಆಯ್ಕೆಯಾಗಿ ಬರುತ್ತಿದ್ದರು. ಗಹನವಾದ ಚರ್ಚೆ ನಡೆಯುತ್ತಿತ್ತು. ಆದರೆ ಈಗ ಆ ವಾತಾವರಣ ಇಲ್ಲವಾಗಿದೆ. ಹೀಗಾಗಿ ವಿಧಾನ ಪರಿಷತ್ ಸಭಾಪತಿಯಾಗಿ(Speaker) ಯಾಕೆ ಕುಳಿತು ಕೊಂಡಿದ್ದೇನೊ ಎಂಬ ರೀತಿಯಲ್ಲಿ ಮನಸ್ಸಿಗೆ ಬೇಸರ ಆಗುತ್ತಿದೆ ಎಂದು ಹೇಳಿದರು.
ಶಾಂತವೇರಿ ಬಗ್ಗೆ ಪಾಠ ಅಗತ್ಯ:
ಶಾಂತವೇರಿ ಗೋಪಾಲ ಗೌಡರ ಜೀವನ ಹಾಗೂ ಬದುಕಿನ ಕುರಿತು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಪಠ್ಯಪುಸ್ತಕಗಳಲ್ಲಿ ತರುವ ಅಗತ್ಯವಿದೆ. ಇಂದಿನ ಯುವ ಜನರಿಗೆ ಇಂತಹ ಮೌಲ್ಯಯುತ ರಾಜಕಾರಣಿಗಳ ಪರಿಚಯ ಮಾಡಬೇಕಾಗಿದೆ, ಸಮಾಜವಾದಿ ಚಿಂತನೆಗಳ ಮೂಲಕ ಜನಮಾನಸದಲ್ಲಿ ಜೀವಂತವಾಗಿರುವ ಅವರು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇಂದಿಗೂ ದಂತಕತೆಯಾಗಿ ಉಳಿದಿದ್ದಾರೆ. ಈ ನಾಡು ಕಂಡ ಶ್ರೇಷ್ಠ ಮೌಲ್ಯಾಧರಿತ ರಾಜಕಾರಣಿಯಾಗಿದ್ದರು ಎಂದು ಬಣ್ಣಿಸಿದರು.
ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್.ಬೊಮ್ಮಾಯಿ(SR Bommai) ಅವರ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿರುವ ಮಾಜಿ ಸಚಿವ ಏಕಾಂತಯ್ಯ ಕೈ, ಬಾಯಿ ಶುದ್ಧ ವ್ಯಕ್ತಿ.ಜತೆಗೆ ಸರಳತೆಗೆ ಹೆಸರು ಮಾಡಿದವರು. ಸಮಾಜವಾದಿ ಚಿಂತನೆಗಳ ಅಳವಡಿಸಿಕೊಂಡಿರುವ ಅವರಿಗೆ ಶಾಂತವೇರಿ ಗೋಪಾಲ ಗೌಡ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಏಕಾಂತಯ್ಯ, ವಿಧಾನ ಸಭೆಯಲ್ಲಿ ಚರ್ಚೆಗಳಲ್ಲಿ ಶಾಸಕರು ಭಾಗವಹಿಸದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
Karnataka Politics: ಸಭಾಪತಿ ಹೊರಟ್ಟಿ ಬಿಜೆಪಿಗೆ ಸೇರ್ಪಡೆ?
ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್, ಕುತೂಹಲ ಮೂಡಿಸಿದ ಹೊರಟ್ಟಿ ನಡೆ
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ (Karnataka MLC Elections) ಬಿಜೆಪಿ ತನ್ನ ಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಪೈಕಿ 3ಕ್ಕೆ ಮಾತ್ರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ (BJP Candidates) ಪಟ್ಟಿಯನ್ನು ಇಂದು(ಶುಕ್ರವಾರ) ಬಿಡುಗಡೆ ಮಾಡಿದೆ.
ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಅರುಣ್ ಶಹಾಪುರ, ವಾಯುವ್ಯ ಪದವೀಧರರ ಕ್ಷೇತ್ರಕ್ಕೆ ಹನುಮಂತ ನಿರಾಣಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಂ.ವಿ. ರಾಜಶೇಖರ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮಾಜಿ ಎಂಎಲ್ಸಿ ಗೋ. ಮಧುಸೂಧನ್ ಅವರಿಗೆ ಟಿಕೆಟ್ ಕೈತಪ್ಪಿದೆ.
ಇನ್ನು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕೆಲ ಗೊಂದಗಳು ಇದ್ದು, ಅವು ಬಗೆಹರಿಯದ ಕಾರಣ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಮತ್ತು ಮಾಜಿ ಎಂಎಲ್ಸಿ ಮೋಹನ್ ಲಿಂಬಿಕಾಯಿ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದೆಡೆ ಈ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಅಥವಾ ಬೆಂಬಲ ನೀಡುವ ವಿಚಾರವಾಗಿ ಮಾತುಕತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ ಎನ್ನುವ ಮಾಹಿತಿ ಇದೆ.