Asianet Suvarna News Asianet Suvarna News

ಇನ್ಮುಂದೆ ಮಾಲ್‌ ಎದುರು ಹೇಗೆಂದರೆ ಹಾಗೆ ಪಿಕ್ ಅಪ್ ಡ್ರಾಪ್ ಮಾಡುವಂತಿಲ್ಲ..!

ಬೆಂಗಳೂರು ನಗರದಲ್ಲಿ ಸುಮಾರು 40ಕ್ಕೂ ಅಧಿಕ ಮಾಲ್‌ಗಳಿವೆ. ನೂರಾರು ಸಂಖ್ಯೆಯ ವಾಣಿಜ್ಯ ಸಂಕೀರ್ಣಗಳಿವೆ. ಈ ಕಟ್ಟಡಗಳ ಮುಂಭಾಗದ ರಸ್ತೆಗಳಲ್ಲಿ ಆಟೋ, ಕಾರು ಸೇರಿದಂತೆ ಅನೇಕ ವಾಹನಗಳು ಜನರನ್ನು ಹತ್ತಿಸಿಕೊಳ್ಳುವುದಕ್ಕೆ ಮತ್ತು ಇಳಿಸುವುದಕ್ಕೆ ನಿಲ್ಲಿಸುವುದರಿಂದ ಭಾರೀ ಪ್ರಮಾಣ ಸಂಚಾರ ದಟ್ಟಣೆ ಉಂಟಾಗುತ್ತಿದೆ.

Space Reservation System for Pick Up and Drop Vehicles infront of Shopping Malls in Bengaluru grg
Author
First Published Nov 25, 2023, 8:48 AM IST

ಬೆಂಗಳೂರು(ನ.25):  ನಗರದ ದೊಡ್ಡ ದೊಡ್ಡ ಮಾಲ್‌ ಹಾಗೂ ವಾಣಿಜ್ಯ ಸಂಕೀರ್ಣಗಳ ಮುಂಭಾಗದಲ್ಲಿ ಗ್ರಾಹಕರನ್ನು ಪಿಕಪ್‌ ಆ್ಯಂಡ್‌ ಡ್ರಾಪ್‌ ಮಾಡುವ ವಾಹನಗಳಿಗೆ ಸ್ಥಳ ಮೀಸಲಿಡುವ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಸುಮಾರು 40ಕ್ಕೂ ಅಧಿಕ ಮಾಲ್‌ಗಳಿವೆ. ನೂರಾರು ಸಂಖ್ಯೆಯ ವಾಣಿಜ್ಯ ಸಂಕೀರ್ಣಗಳಿವೆ. ಈ ಕಟ್ಟಡಗಳ ಮುಂಭಾಗದ ರಸ್ತೆಗಳಲ್ಲಿ ಆಟೋ, ಕಾರು ಸೇರಿದಂತೆ ಅನೇಕ ವಾಹನಗಳು ಜನರನ್ನು ಹತ್ತಿಸಿಕೊಳ್ಳುವುದಕ್ಕೆ ಮತ್ತು ಇಳಿಸುವುದಕ್ಕೆ ನಿಲ್ಲಿಸುವುದರಿಂದ ಭಾರೀ ಪ್ರಮಾಣ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಗರದ ಮಾಲ್‌ ಹಾಗೂ ವಾಣಿಜ್ಯ ಸಂಕೀರ್ಣದ ಕಟ್ಟಡಕ್ಕೆ ಸೇರಿದ ಜಾಗದಲ್ಲಿಯೇ ಗ್ರಾಹಕರನ್ನು ಪಿಕಪ್‌ ಆ್ಯಂಡ್ ಡ್ರಾಪ್‌ ಮಾಡುವ ವಾಹನಗಳಿಗೆ ಸ್ಥಳ ಮೀಸಲಿಡುವ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.

ಭಾರತದ ಲಕ್ಷುರಿ ಶಾಪಿಂಗ್ ಮಾಲ್ ತೆರೆದ ಅಂಬಾನಿ, ಅಂಗಡಿಯ ತಿಂಗಳ ಬಾಡಿಗೆ 40 ಲಕ್ಷ ರೂ!

ಈವರೆಗೆ ನಗರದಲ್ಲಿ ಮಾಲ್‌ ಮತ್ತು ವಾಣಿಜ್ಯ ಸಂಕೀರ್ಣಗಳ ಕಟ್ಟಡಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ವಾಹನ ಪಾರ್ಕಿಂಗ್‌ಗೆ ಜಾಗ ಇದೆಯೇ ಎಂಬುದನ್ನು ಮಾತ್ರ ಬಿಬಿಎಂಪಿ ನಗರ ಯೋಜನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಕಟ್ಟಡ ನಿರ್ಮಾಣಕ್ಕೆ ಮತ್ತು ಕಾರ್ಯಾಚರಣೆಗೆ ಅನುಮತಿ ನೀಡುತ್ತಿದ್ದಾರೆ.

ಆ ಕಟ್ಟಡ ಸಂಪರ್ಕಿಸುವ ರಸ್ತೆಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ಬಗ್ಗೆ ಗಮನಿಸುವುದಿಲ್ಲ. ಮುಂದಿನ ದಿನಗಳಲ್ಲಿ ಮಾಲ್‌ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ರಸ್ತೆಯ ಸಂಚಾರ ದಟ್ಟಣೆ ಉಂಟಾಗದಂತೆ ಪಿಕಪ್‌ ಆ್ಯಂಡ್‌ ಡ್ರಾಪ್‌ಗೆ ಸ್ಥಳ ಮೀಸಲಿಡುವ ಬಗ್ಗೆ ಗಮನಿಸಲು ಬಿಬಿಎಂಪಿ ತೀರ್ಮಾನಿಸಿದೆ.

ಅಂಡರ್ ಪಾಸ್‌ ನಿರ್ಮಾಣಕ್ಕೆ ಅನುಮತಿ

ನಗರದಲ್ಲಿ ಇರುವ ಮಾಲ್‌ ಮತ್ತು ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸುವುದಕ್ಕೆ ಬಿಬಿಎಂಪಿ ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಇದರೊಂದಿಗೆ ಮಾಲ್‌ ಹಾಗೂ ವಾಣಿಜ್ಯ ಸಂಕೀರ್ಣದ ಮಾಲೀಕರು ಕೈ ಜೋಡಿಸಬೇಕು. ಮಾಲೀಕರು ಸಂಚಾರ ದಟ್ಟಣೆ ಕಡಿಮೆ ಮಾಡಲು ಅಂಡರ್ ಪಾಸ್‌, ಫ್ಲೈಓವರ್‌ ಅಥವಾ ಬೇರೆ ಇನ್ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಬಿಬಿಎಂಪಿಯು ಸಹಕಾರ ನೀಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಲ್‌ಗಳ ಬಳಿ ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ಮಾಲ್‌ ಮಾಲೀಕರು ಕ್ರಮ ವಹಿಸಬೇಕು. ಅದಕ್ಕೆ ಬೇಕಾದ ಸಹಕಾರವನ್ನು ಬಿಬಿಎಂಪಿ ನೀಡಲಿದೆ. ಮಾಲ್‌ ಆವರಣದಲ್ಲಿ ಗ್ರಾಹಕರ ಪಿಕಪ್‌ ಆ್ಯಂಡ್‌ ಡ್ರಾಪ್‌ಗೆ ಸ್ಥಳ ಮೀಸಲಿಟ್ಟರೆ ರಸ್ತೆಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದ್ದಾರೆ.  

ಸಂಚಾರ ದಟ್ಟಣೆ ಪರಿಹಾರಕ್ಕೆ ಸರ್ವೆ

ಇನ್ನು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಇದೀಗ ಬಿಬಿಎಂಪಿಯು ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಸ್ಥಳಗಳನ್ನು ಸರ್ವೆ ನಡೆಸುವುದಕ್ಕೆ ಮುಂದಾಗಿದೆ. ಆ ನಿರ್ದಿಷ್ಟ ಸ್ಥಳದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಪರಿಹಾರೋಪಾಯಕ್ಕೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವುದಕ್ಕೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವುದಕ್ಕೆ ನಿರ್ಧರಿಸಿದೆ.

ಬೆಂಗಳೂರು: ಆಸ್ತಿ ತೆರಿಗೆ ಕಟ್ಟದ ಶಾಪಿಂಗ್‌ ಮಾಲ್‌ ಬ್ಯಾಂಕ್‌ ಖಾತೆ ಮೇಲೆ ಬಿಬಿಎಂಪಿ ಕಣ್ಣು..!

ಈಗಾಗಲೇ ಎರಡು ಬಾರಿ ಟೆಂಡರ್ ಆಹ್ವಾನಿಸಿದ್ದು, ಒಂದು ಸಂಸ್ಥೆ ಆಯ್ಕೆಯಾಗಿದೆ. ಆ ಸಂಸ್ಥೆಯು ಸರ್ವೆ ಕಾರ್ಯ ಕೈಗೊಂಡು ಸಂಚಾರ ದಟ್ಟಣೆಗೆ ಕಾರಣ ಏನು?, ಆ ನಿರ್ದಿಷ್ಟ ಸ್ಥಳದಲ್ಲಿ ದಿನಕ್ಕೆ ಎಷ್ಟು ವಾಹನ ಸಂಚಾರ ನಡೆಸಲಿವೆ. ಯಾವ ಅವಧಿಯಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಲಿದೆ. ಸಮಸ್ಯೆ ಪರಿಹಾರಕ್ಕೆ ಫ್ಲೈಓವರ್ ನಿರ್ಮಾಣ ಮಾಡಬೇಕಾ ಅಥವಾ ಅಂಡರ್ ಪಾಸ್ ಮಾಡಬೇಕಾ ಅಥವಾ ಸಂಚಾರ ಮಾರ್ಗ ಬದಲಾವಣೆ ಮಾಡಿದರೆ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು ಎಂಬುದರ ಕುರಿತು ಅಧ್ಯಯನ ವರದಿ ನೀಡಲಿದೆ.

ಸಂಸ್ಥೆ ನೀಡುವ ವರದಿಯನ್ನು ಸಂಚಾರಿ ಪೊಲೀಸರೊಂದಿಗೆ ಚರ್ಚೆ ನಡೆಸಿ ನಂತರ ಕೈಗೊಳ್ಳಬಹುದಾದ ಕ್ರಮದ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲು ಬಿಬಿಎಂಪಿ ನಿರ್ಧಸಿದೆ.

Latest Videos
Follow Us:
Download App:
  • android
  • ios