ಬೆಂಗಳೂರು (ಸೆ.13):  ಹೆಣ್ಣೂರು ಮುಖ್ಯರಸ್ತೆಯಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ರಾಜಕಾಲುವೆ ಒತ್ತುವರಿಗೆ ತೆರವುಗೊಳಿಸುವುದರೊಂದಿಗೆ ಮುಚ್ಚಿದ ರಾಜಕಾಲುವೆ ನಿರ್ಮಾಣ ಮಾಡುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಇತ್ತಿಚೆಗೆ ನಗರದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೆಬ್ಬಾಳ ವ್ಯಾಪಿಯ ಹೆಣ್ಣೂರು ಮುಖ್ಯ ರಸ್ತೆ, ಹೊರಮಾವು, ವಡ್ಡರಪಾಳ್ಯ, ಸಾಯಿ ಲೇಔಟ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ, ಸಮಸ್ಯೆ ಪರಿಹಾರ ಮಾಡುವ ಉದ್ದೇಶದಿಂದ ಬಿಬಿಎಂಪಿ ಇದೀಗ ಹೆಣ್ಣೂರು ಮುಖ್ಯ ರಸ್ತೆಯಿಂದ ಹೊರಮಾವು ತ್ಯಾಜ್ಯ ನೀರು ಸಂಸ್ಕರಣಾ ಘಟಕದವರೆಗೆ ಮುಚ್ಚಿದ ರಾಜಕಾಲುವೆ ನಿರ್ಮಿಸುವುದಕ್ಕೆ ತೀರ್ಮಾನಿಸಿದೆ. ಈ ಕುರಿತು ಯೋಜನಾ ವರದಿ ಸಿದ್ದಪಡಿಸುವುದಕ್ಕೆ ಸಂಬಂಧ ಪಟ್ಟಎಂಜಿನಿಯರ್‌ಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಜತೆಗೆ ಹೆಬ್ಬಾಳ ವ್ಯಾಲಿ ಹಾಗೂ ಸರ್ವಜ್ಞ ನಗರದ ಕಡೆಯಿಂದ ಬರುವ ರಾಜಕಾಲುವೆಗಳು ವಡ್ಡರಹಳ್ಳಿಯ ಬಳಿಯ ರೈಲ್ವೆ ಅಂಡರ್‌ ಪಾಸ್‌ ಬಳಿ ಕೂಡಲಿವೆ. ಅಲ್ಲಿ ನೀರು ಹರಿದು ಹೋಗುವುದಕ್ಕೆ ಜಾಗ ಕಡಿಮೆಯಾಗಿದೆ. ಈ ಕುರಿತು ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುವ ಸಮಸ್ಯೆ ಪರಿಹಾರವಾಗಲಿದೆ ಎಂದು ವಿವರಿಸಿದರು.