ಚುನಾವಣೆ ಅಖಾಡಕ್ಕೆ ದರ್ಶನ್ ಪುಟ್ಟಣ್ಣಯ್ಯ
ಶೀಘ್ರ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾದಿಂದ ದೇಶಕ್ಕೆ ಮರಳುತ್ತಿದ್ದಾರೆ. ಚುನಾವಣಾ ಅಖಾಡಕ್ಕೆ ದರ್ಶನ್ ಇಳಿಯಲಿದ್ದಾರೆ.

ಪಾಂಡವಪುರ (ಅ.30): ಅಮೇರಿಕಾದಲ್ಲಿರುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಮುಂಬರುವ ಗ್ರಾಪಂ ವೇಳೆಗೆ ತಾಯ್ನಾಡಿಗೆ ವಾಪಸ್ಸಾಗಲಿದ್ದಾರೆ ಎಂದು ದಿ.ಕೆ.ಎಸ್.ಪುಟ್ಟಣ್ಣಯ್ಯ ಪುತ್ರಿ ಸ್ಮಿತಾ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದ ಗ್ರಾಮ ಘಟಕ ಉದ್ಘಾಟನಾ ಹಾಗೂ ತಾಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೈತ ಸಂಘದ ಕಾರ್ಯಕರ್ತರು ಆತಂಕಗೊಳ್ಳುವ ಅಗತ್ಯವಿಲ್ಲ. ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲೇ ಮುಂಬರುವ ಗ್ರಾಪಂ ಚುನಾವಣೆ ನಡೆಯಲಿದೆ ಎಂದರು.
ಬೈ ಎಲೆಕ್ಷನ್: ಯುದ್ಧಕ್ಕೂ ಮುನ್ನ ಕಾಂಗ್ರೆಸ್, ಜೆಡಿಎಸ್ ಶಸ್ತ್ರ ತ್ಯಾಗ ಮಾಡಿದ್ವಾ..? ..
ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ನಿಧನರಾದಾಗ ದರ್ಶನ್ ಪುಟ್ಟಣ್ಣಯ್ಯ ಯಾವುದೇ ಕಾರಣಕ್ಕೂ ತಾವು ಅಮೇರಿಕಾದಲ್ಲಿ ಇರುವುದಿಲ್ಲ. ತಾಯ್ನಾಡಿಗೆ ಬಂದು ರೈತ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವೆ ಎಂದು ಪ್ರಮಾಣ ಮಾಡಿದ್ದಾರೆ. ಅದರಂತೆ ನಡೆದುಕೊಳ್ಳಲಿದ್ದಾರೆ ಎಂದರು.
ಕೋವಿಡ್-19 ಕಾರಣದಿಂದ ಅಮೆರಿಕಾದಲ್ಲಿ ವಿಮಾನಯಾನ ಪ್ರಾರಂಭವಾಗಿರಲಿಲ್ಲ. ಹೀಗಾಗಿ ದರ್ಶನ್ ಪುಟ್ಟಣ್ಣಯ್ಯ ತಾಯ್ನಾಡಿಗೆ ಮರಳಲು ತಡವಾಯಿತು. ಇದೀಗ ವಿಮಾನಯಾನ ಮತ್ತೆ ಪ್ರಾರಂಭವಾಗಿರುವುದರಿಂದ ದರ್ಶನ್ ಪುಟ್ಟಣ್ಣಯ್ಯ ತಾಯ್ನಾಡಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ಮಾತನಾಡಿ, ರೈತಸಂಘದ ಅಧ್ಯಕ್ಷರಾದ ಬಳಿಕ ತಮಗೆ 200ಕ್ಕೂ ಹೆಚ್ಚು ಜನರಿಂದ ದೂರವಾಣಿ ಕರೆ ಮಾಡಿ ಧೃತಿಗೆಡದೆ ರೈತಸಂಘಟನೆ ಮಾಡುವಂತೆ ಸಲಹೆ ನೀಡಿದ್ದಾರೆ. ಜತೆಗೆ ಕೆ.ಎಸ್.ಪುಟ್ಟಣ್ಣಯ್ಯರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದಿದ್ದಾರೆ ಎಂದರು.
ಮುಂಬರುವ ಗ್ರಾಪಂ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಜತೆ ಜತೆಯಲ್ಲೇ ರಾಜಕೀಯವನ್ನೂ ಕೊಂಡೊಯ್ಯುವ ಮೂಲಕ ಕ್ಷೇತ್ರದ ಎಲ್ಲ 34 ಪಂಚಾಯಿತಿಗಳಲ್ಲೂ ರೈತಸಂಘದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಪುಟ್ಟಣ್ಣಯ್ಯರ ಹೆಸರಿಗೆ ಗೌರವ ತರುವ ಕೆಲಸ ಮಾಡಲಿದ್ದೇವೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕಳೆದ 34 ವರ್ಷಗಳಿಂದಲೂ ಧಣಿವರಿಯದೆ ಹೋರಾಟ ನಡೆಸುತ್ತಿದೆ. ಸಂಘಟನೆಯಲ್ಲಿ ನೈತಿಕತೆ, ಶಿಸ್ತು ಇರುವ ಕಾರಣ ರೈತ ಚಳವಳಿ ಇನ್ನೂ ಜೀವಂತಿಕೆಯಿಂದ ಇದೆ. ಆದರೆ, ಬೇರೆ ಸಂಘಟನೆಗಳು ಶಿಸ್ತಿನ ಕೊರತೆಯಿಂದಾಗಿ ಹರಿದು ಹಂಚಿ ಹಾಳಾಗಿ ಹೋಗಿವೆ ಎಂದು ವಿಷಾದಿಸಿದರು