ನಾನು ಕಾಂಗ್ರೆಸ್ ಸೇರುವುದು ಖಚಿತ : ಜೆಡಿಎಸ್ ಶಾಸಕರಿಂದಲೇ ಕನ್ಫರ್ಮ್
- ನಾನು ಶೀಘ್ರದಲ್ಲೆ ಕಾಂಗ್ರೆಸ್ ಸೇರುವುದು ಖಚಿತ ಎಂದು ಬಹಿರಂಗಪಡಿಸಿದ ಜೆಡಿಎಸ್ ಶಾಸಕ
- ನಾನು ಈಗಾಗಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದೇನೆ ಎಂದು ಮಾಹಿತಿ
ಕೋಲಾರ (ಸೆ.29): ತಾವು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರುವುದು ನಿಶ್ಚಿತ, ಈಗಾಗಲೇ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಅವಕಾಶ ಸಿಕ್ಕರೆ 2023ರ ವಿಧಾನ ಸಭಾ ಚುನಾವಣೆಗೆ (Assembly Election) ಸ್ಪರ್ಧಿಸುವೆ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ (K Shrinivas Gowda) ತಿಳಿಸಿದರು.
ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದೇನೆ ಎಂದರು.
ತಾವು ಕಾಂಗ್ರೆಸ್ ಸೇರುವುದಕ್ಕೆ ಪಕ್ಷದ ಸ್ಥಳಿಯ ಮುಖಂಡರು ವಿರೋಧಿಸುತ್ತಿರುವ ಕುರಿತು ಹೆಚ್ಚಿಗೆ ಮಾತನಾಡಲು ಇಷ್ಟಪಡುವುದಿಲ್ಲ. ಈಗಾಗಲೇ ಈ ವಿಚಾರದಲ್ಲಿ ರಾಜ್ಯ ನಾಯಕರೊಂದಿಗೆ ಮಾತನಾಡಿದ್ದೇನೆ ಎಂದರು.
ರಾಜೀನಾಮೆ ದೊಡ್ಡ ವಿಷಯವಲ್ಲ
ನಾನು ಜೆಡಿಎಸ್ ಪಕ್ಷ ಬಿಡುವ ತೀರ್ಮಾನ ಮಾಡಿದ ಮೇಲೆ ರಾಜಿನಾಮೆ ಕೋಡೋದು ದೊಡ್ಡ ವಿಷಯ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜೆಡಿಎಸ್ (JDS) ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಚುನಾವಣೆಯಲ್ಲಿ ಗೆದ್ದಿಲ್ಲ, ರಾಜೀನಾಮೆ ಕೊಡು ಅನ್ನೋಕೆ ಅವರಾರಯರು. ಚುನಾವಣೆಯಲ್ಲಿ ಗೆದ್ದು ಹೇಳಿದ್ರೆ ನಾನು ಅವರ ಮಾತು ಕೇಳಬಹುದು. ನನಗೇನು ಜೆಡಿಎಸ್ ಅನಿವಾರ್ಯ ಅಲ್ಲ, ನಾನು ನಾನಾಗೇ ಜೆಡಿಎಸ್ ತೊರೆಯುತ್ತಿದ್ದೇನೆ ಎಂದು ಹೇಳಿದರು.
ಎಚ್ಡಿಕೆ ಕೊಳಚೆ ನೀರು ಎಂದಿದ್ದು ತಪ್ಪು
ಎಚ್.ಡಿ. ಕುಮಾರಸ್ವಾಮಿ ಕೆ.ಸಿ ವ್ಯಾಲಿ ನೀರಿನ ಬಗ್ಗೆ ಹಗುರವಾಗಿ ಮಾತನಾಡಿದರು, ಅದು ನನಗೆ ನೋವಾಯಿತು. ಕೆಸಿ ವ್ಯಾಲಿ (KC vally) ನೀರಿನಿಂದ ಜಿಲ್ಲೆಯ ರೈತರು ಬದುಕುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಹಾಗೆ ಮಾತನಾಡಬಹುದೇ ಎಂದರು.
ದೇವೇಗೌಡರ ಬಗ್ಗೆ ಗೌರವ ಇದೆ
ಎಚ್.ಡಿ.ದೇವೇಗೌಡರು (HD Devegowda) ದೊಡ್ಡವರು ಅವರ ಬಗ್ಗೆ ಅಪಾರ ಗೌರವವಿದೆ. ಅವರು ಮಾಜಿ ಪ್ರಧಾನಿಗಳು ಅವರ ಬಗ್ಗೆ ಮಾತನಾಡುವಷ್ಟುದೊಡ್ಡವನು ನಾನಲ್ಲ ಎಂದರು.
ಡಿಕೆಶಿ ಭೇಟಿಯಾಗಿ ಮಾತುಕತೆ
ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ದಿಢೀರ್ ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸೆ.15 ರಂದು ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರನ್ನ ಭೇಟಿ ಮಾಡಿ ಒಂದು ಗಂಟೆ ಕಾಲ ರಹಸ್ಯ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿತ್ತು.
ದೇವೇಗೌಡ ಖಡಕ್ ಸೂಚನೆ: ಪಕ್ಷದಿಂದ ಉಚ್ಛಾಟನೆ ಆಗ್ತಾರಾ ಜೆಡಿಎಸ್ ಶಾಸಕ?
ಶ್ರೀನಿವಾಸ್ ಗೌಡ ವಿರುದ್ಧ ಕ್ರಮಕೈಗೊಳ್ಳುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿದ ಬೆನ್ನಲ್ಲೇ ದಿಢೀರ್ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ಮುಂದಿನ ದಿನಗಳಲ್ಲಿ ಶ್ರೀನಿವಾಸ್ ಗೌಡ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗಿತ್ತು.
ಈಗಾಗಲೇ ಪಕ್ಷದ ವರಿಷ್ಠರ ವಿರುದ್ಧ ಶ್ರೀನಿವಾಸ್ ಗೌಡ ತಿರುಗಿಬಿದ್ದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇದರಿಂದ ದೇವೇಗೌಡ್ರು ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಇದೀಗ ಬಹಿರಂಗವಾಗಿ ಜೆಡಿಎಸ್ ತೊರೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ.