ಕಾಂಗ್ರೆಸ್‌ಗೆ ಜಿಟಿಡಿ, ಪುತ್ರ : ಮೂರು ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ತಳಮಳ!
- ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಶೀಘ್ರ ಕಾಂಗ್ರೆಸ್‌ಗೆ
- ಜಿಟಿಡಿ ಪುತ್ರ ಹರೀಶ್ ಗೌಡ ಸಹ ತಂದೆಯೊಂದಿಗೆ ಕಾಂಗ್ರೆಸ್ ಸೇರ್ಪಡೆ
- ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಎದುರಾದ ತಳಮಳ
ಮೈಸೂರು (ಆ.26): ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರೂ ಆದ ತಮ್ಮ ಪುತ್ರ ಜಿ.ಡಿ. ಹರೀಶ್‌ಗೌಡರೊಂದಿಗೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸೇರುವುದಾಗಿ ಹೇಳಿರುವುದು, ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಆ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣವಾಗಿದೆ.
ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿಯಿಂದ ಕಾಂಗ್ರೆಸ್ ಟಿಕೆಟ್ ಪಡೆಯಬಹುದು. ಆಗ ಅಲ್ಲಿ ಆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ ಏನು ಮಾಡುತ್ತಾರೆ ನೋಡಬೇಕು. ಜೆಡಿಎಸ್‌ನಿಂದ ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ ಟಿಕೆಟ್‌ಗೆ ಯತ್ನಿಸಬಹುದು. ಈಗಾಗಲೇ ಈ ಕ್ಷೇತ್ರದಲ್ಲಿ ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ, ಸೋತಿರುವ ಎಂ. ಅಪ್ಪಣ್ಣ ಕೂಡ ಟಿಕೆಟ್‌ಗೆ ಯತ್ನಿಸಬಹುದು.
ಆದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ವಲಯದಲ್ಲಿ ಹೆಚ್ಚಿನ ತಳಮಳವಾಗುವುದು ಹಾಲಿ ಎಚ್.ಪಿ. ಮಂಜುನಾಥ್ ಮೂರನೇ ಬಾರಿ ಪ್ರತಿನಿಧಿಸುತ್ತಿರುವ ಹುಣಸೂರು, ಕಳೆದ ಬಾರಿ ಡಿ. ರವಿಶಂಕರ್ ಅಭ್ಯರ್ಥಿಯಾಗಿ ಸೋತಿರುವ ಕೆ.ಆರ್. ನಗರ ಮತ್ತು ವಾಸು ಅವರು ಒಂದು ಬಾರಿ ಆಯ್ಕೆಯಾಗಿರುವ ಹಾಗೂ ಕಳೆದ ಬಾರಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸೋತಿರುವ ಕೆ. ಹರೀಶ್‌ಗೌಡ ಅವರ ಚಾಮರಾಜ ಕ್ಷೇತ್ರದಲ್ಲಿ . ಏಕೆಂದರೆ ಈ ಮೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ತಮ್ಮ ಪುತ್ರನಿಗೆ ಅವಕಾಶ ಮಾಡಿಕೊಡುವಂತೆ ಜಿ.ಟಿ. ದೇವೇಗೌಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಬೇಡಿಕೆ ಇಟ್ಟಿದ್ದಾರೆ.
ಹುಣಸೂರು ಕ್ಷೇತ್ರದಿಂದ 1998 ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರು ಜನತಾದಳ ಅಭ್ಯರ್ಥಿಯಾಗಿ ಗೆದ್ದಿದ್ದರು. 1999ರ ಚುನಾವಣೆಯಲ್ಲಿ ಸೋತರು. 2004 ರಲ್ಲಿ ಜೆಡಿಎಸ್ ಟಿಕೆಟ್ ಮೇಲೆ ಎರಡನೇ ಬಾರಿ ಗೆದ್ದು, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸೋತರು. 2013 ಹಾಗೂ 2018 ರಲ್ಲಿ ಚಾಮುಂಡೇಶ್ವರಿಯಿಂದ ಜೆಡಿಎಸ್ ಟಿಕೆಟ್ ಮೇಲೆ ಆಯ್ಕೆಯಾದರು. ಎರಡನೇ ಈ ಬಾರಿ ಈ ಕ್ಷೇತ್ರದಿಂದ ಗೆದ್ದಾಗ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿ ಉಸ್ತುವಾರಿ ಮಂತ್ರಿಯಾಗಿದ್ದರು.
ಅಪ್ಪ, ಮಗನಿಗೆ ಟಿಕೆಟ್ ಕನ್ಫರ್ಮ್ : ಕಾಂಗ್ರೆಸ್ ಸೇರಲು ಸಜ್ಜಾದ ಜೆಡಿಎಸ್ ಶಾಸಕ
ಜಿ.ಟಿ. ದೇವೇಗೌಡರ ಪುತ್ರ ಜಿ.ಡಿ. ಹರೀಶ್‌ಗೌಡ 2018 ರಲ್ಲಿಯೇ ಹುಣಸೂರಿನಿಂದ ಸ್ಪರ್ಧಿಸಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಎಚ್. ವಿಶ್ವನಾಥ್ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ವಿಶ್ವನಾಥ್ ಅವರು ಗೆದ್ದು, ಒಂದೇ ವರ್ಷದಲ್ಲಿ ಪಕ್ಷ ತ್ಯಜಿಸಿದರು. ಅಲ್ಲದೇ ಸರ್ಕಾರದ ಪತನಕ್ಕೂ ಕಾರಣರಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತರು. ಉಪ ಚುನಾವಣೆ ವೇಳೆಗೆ ಜಿ.ಟಿ. ದೇವೇಗೌಡರು ಜೆಡಿಎಸ್‌ನಿಂದ ದೂರ ಸರಿದಿದ್ದರಿಂದ ಅವರ ಪುತ್ರ ಸ್ಪರ್ಧಿಸಲಿಲ್ಲ. ಬದಲಿಗೆ ದೇವರಹಳ್ಳಿ ಸೋಮಶೇಖರ್‌ಗೆ ಟಿಕೆಟ್ ನೀಡಲಾಗಿತ್ತು.
2008, 2013 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿ, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಎಚ್.ಪಿ. ಮಂಜುನಾಥ್ ಉಪ ಚುನಾವಣೆಯಲ್ಲಿ ಗೆದ್ದು, ಮೂರನೇ ಬಾರಿ ಶಾಸಕರಾಗಿದ್ದಾರೆ. ಜಿಟಿಡಿ ಪುತ್ರ ಹರೀಶ್‌ಗೌಡ ಹುಣಸೂರು ಕ್ಷೇತ್ರದಲ್ಲೇ ಟಿಕೆಟ್ ಬಯಸಿದರೆ ಮಂಜುನಾಥ್ ಅವರಿಗೆ ಕಷ್ಟವಾಗಬಹುದು. ಆದರೆ ಮೂರು ಬಾರಿ ಗೆದ್ದಿರುವ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸುವುದು ಅಷ್ಟುಸುಲಭವಲ್ಲ.
ಜೆಡಿಎಸ್ ತೊರೆದು ಕಾಂಗ್ರೆಸ್‌ನತ್ತ ಚಿತ್ತ: ಅಧಿಕೃತ ಘೋಷಣೆ ಮಾಡಿದ ಶಾಸಕ
ತಮ್ಮ ಬದ್ಧ ವೈರಿ ಸಾ.ರಾ. ಮಹೇಶ್ ಅವರನ್ನು ಸೋಲಿಸಬೇಕು ಎಂದು ಜಿಟಿಡಿ ತಮ್ಮ ಪುತ್ರನಿಗೆ ಕೆ.ಆರ್. ನಗರ ಟಿಕೆಟ್ ಕೊಡಿಸುವುದು ಕೂಡ ಅಷ್ಟುಸುಲಭವಿಲ್ಲ. ಅಲ್ಲೇನಿದ್ದರೂ ಕಾಂಗ್ರೆಸ್- ಜೆಡಿಎಸ್ ನಡುವೆ ಸಾಂಪ್ರದಾಯಿಕ ಹೋರಾಟ. ಜೊತೆಗೆ ಒಕ್ಕಲಿಗರು ಹಾಗೂ ಕುರುಬರ ನಡುವಿನ ಪೈಪೋಟಿ. ಹೀಗಾಗಿ ಡಿ. ರವಿಶಂಕರ್ ಅವರಿಗೆ ಟಿಕೆಟ್ ತಪ್ಪಿಸುವುದು ಕೂಡ ಕಷ್ಟ.
ಇನ್ನೂ ಚಾಮರಾಜ ಕ್ಷೇತ್ರದಲ್ಲಿ 2013 ರಲ್ಲಿ ಗೆದ್ದು, ಅತ್ಯುತ್ತಮ ಕೆಲಸ ಮಾಡಿದರೂ 2018 ರಲ್ಲಿ ಸೋತಿರುವ ವಾಸು ಮತ್ತೊಮ್ಮೆ ಆಕಾಂಕ್ಷಿ. ಇವರ ಜೊತೆಗೆ ಕಳೆದ ಬಾರಿ ಜೆಡಿಎಸ್ ಟಿಕೆಟ್ ಸಿಗದೇ ಬಂಡಾಯವಾಗಿ ಸ್ಪರ್ಧಿಸಿ ಸೋತಿರುವ ಕೆ. ಹರೀಶ್‌ಗೌಡ ಕೂಡ ಇದ್ದಾರೆ.
ಒಟ್ಟಾರೆ ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿ, ಹರೀಶ್‌ಗೌಡರು ಲೋಕಸಭೆಗೆ ಸ್ಪರ್ಧಿಸಲಿ ಎಂದರೇ ಒಪ್ಪುವ ಸಂಭವ ಕಡಿಮೆ. ಇದರಿಂದ ಹುಣಸೂರು, ಕೆ.ಆರ್. ನಗರ, ಚಾಮರಾಜದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ? ಎಂಬ ಕುತೂಹಲ ಈಗಿನಿಂದಲೇ ಉಂಟಾಗಿದೆ.